

ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವು ತನ್ನ ಪ್ರಸ್ತುತ ಅಧಿಕಾರಾವಧಿಯಲ್ಲೇ ‘ಒಂದು ರಾಷ್ಟ್ರ ಒಂದು ಚುನಾವಣೆ’ಯನ್ನು ಜಾರಿಗೆ ತರಲಿದೆ ಎಂದು ಮೂಲಗಳು ಹೇಳಿವೆ. ಇದಕ್ಕೆ ಎನ್ಡಿಎ ಮೈತ್ರಿಕೂಟದ ಎಲ್ಲ ಪಕ್ಷಗಳಿಂದ ಬೆಂಬಲ ಸಿಗುವ ವಿಶ್ವಾಸವನ್ನು ಬಿಜೆಪಿ ವ್ಯಕ್ತಪಡಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ಮೂರನೇ ಅವಧಿಗೆ ನೂರು ದಿನಗಳು ಪೂರ್ಣಗೊಂಡಿದ್ದು. ಮತ್ತೊಮ್ಮೆ, ‘ಒಂದು ರಾಷ್ಟ್ರ ಒಂದು ಚುನಾವಣೆ’ ಚರ್ಚೆಯ ಮುನ್ನೆಲೆಗೆ ಬಂದಿದೆ. ಕಳೆದ ತಿಂಗಳು ಸ್ವಾತಂತ್ರೋತ್ಸವ ದಿನದಂದು ದೆಹಲಿಯ ಕೆಂಪುಕೋಟೆಯಿಂದ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ‘ಒಂದು ರಾಷ್ಟ್ರ ಒಂದು ಚುನಾವಣೆ’ಯ ಅಗತ್ಯತೆ ಬಗ್ಗೆ ವಿವರಿಸುತ್ತ, ‘ಆಗಾಗ್ಗೆ ನಡೆಯುವ ಚುನಾವಣೆಗಳು ದೇಶದ ಪ್ರಗತಿಗೆ ಮಾರಕ. ರಾಷ್ಟ್ರೀಯ ಸಂಪನ್ಮೂಲಗಳನ್ನು ಜನಸಾಮಾನ್ಯರ ಏಳಿಗೆಗೆ ಬಳಸುವುದನ್ನು ಪಕ್ಷಗಳು ಖಚಿತಪಡಿಸಬೇಕಿದೆ. ಒಂದು ರಾಷ್ಟ್ರ, ಒಂದು ಚುನಾವಣೆಯ ಕನಸನ್ನು ನಾವು ಅರಿತುಕೊಳ್ಳಬೇಕಿದೆ’ ಎಂದಿದ್ದರು. ಅಲ್ಲದೆ, ಏಕಕಾಲದಲ್ಲಿ ಲೋಕಸಭೆ ಮತ್ತು ವಿಧಾನಸಭೆಗಳ ಚುನಾವಣೆ ನಡೆಸಲು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಮಾರ್ಚ್ ತಿಂಗಳಲ್ಲಿ ಸಲ್ಲಿಸಿದ್ದ ವರದಿಯಲ್ಲಿ ಶಿಫಾರಸು ಮಾಡಿತ್ತು ಎಂಬುದು ಗಮನಾರ್ಹ.
ಭಾರತದಂಥ ವಿಶಾಲ ರಾಷ್ಟ್ರದಲ್ಲಿ ಪ್ರತಿ ವರ್ಷ ಒಂದಿಲ್ಲ ಒಂದು ರಾಜ್ಯದಲ್ಲಿ ಚುನಾವಣೆಗಳು ನಡೆಯುವುದರಿಂದ ಸಾಕಷ್ಟು ಸಮಯ ಮತ್ತು ಆರ್ಥಿಕ ಸಂಪನ್ಮೂಲ ವ್ಯಯವಾಗುತ್ತಿದೆ ಎಂಬುದು ವಾಸ್ತವ. ಅಷ್ಟಕ್ಕೂ, ನಮ್ಮಲ್ಲಿ ಇದು ಹೊಸ ವ್ಯವಸ್ಥೆಯೇನಲ್ಲ. ಏಕೆಂದರೆ, ಭಾರತದಲ್ಲಿ ಮೊದಲಿಗೆ ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆ ಚುನಾವಣೆಗಳು ಒಟ್ಟಿಗೇ ನಡೆಯುತ್ತಿದ್ದವು. 1952, 1957, 1962, 1967ರಲ್ಲಿ ಒಟ್ಟಿಗೇ ಚುನಾವಣೆ ನಡೆದಿದ್ದವು. ಆಗ, ಮತದಾರನಿಗೆ ಎರಡು ಮತಪತ್ರಗಳನ್ನು ನೀಡಲಾಗುತ್ತಿತ್ತು. ಒಂದು ಲೋಕಸಭೆಗಾಗಿ, ಇನ್ನೊಂದು ವಿಧಾನಸಭೆಗಾಗಿ. 1968-69ರಲ್ಲಿ ಹಲವು ರಾಜ್ಯಗಳ ವಿಧಾನಸಭೆಗಳು ಮತ್ತು 1970ರಲ್ಲಿ ಅವಧಿಪೂರ್ವವೇ ಲೋಕಸಭೆ ವಿಸರ್ಜನೆಗೊಂಡಿದ್ದರ ಪರಿಣಾಮ, ಮುಂದೆ ಏಕಕಾಲಕ್ಕೆ ಚುನಾವಣೆ ನಡೆಸುವ ಪದ್ಧತಿ ನಿಂತುಹೋಯಿತು.
ಕಳೆದ ಹಲವು ವರ್ಷಗಳಿಂದ ಚುನಾವಣೆ ನಡೆಸಲು ಏರುತ್ತಿರುವ ವೆಚ್ಚ, ಮಾನವ ಸಂಪನ್ಮೂಲದ ಬಳಕೆ, ಬಿಗಿಯಾದ ನೀತಿಸಂಹಿತೆಯಿಂದ ಅಭಿವೃದ್ಧಿ ಕಾರ್ಯಗಳಿಗೆ ಬೀಳುವ ಪೆಟ್ಟು- ಇದೆಲ್ಲವನ್ನು ಗಮನಿಸಿಯೇ ಏಕಕಾಲಕ್ಕೆ ಚುನಾವಣೆ ನಡೆಸಬೇಕು ಎಂಬ ಆಶಯ ಈಗಿನ ಕೇಂದ್ರ ಸರ್ಕಾರದ್ದು. 1983ರಲ್ಲಿ ಚುನಾವಣಾ ಆಯೋಗ ದೇಶದಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಸಲು ಮನವಿ ಸಲ್ಲಿಸಿತ್ತಾದರೂ, ಆಗಿನ ಸರ್ಕಾರ ಅದಕ್ಕೆ ಸ್ಪಂದಿಸಲಿಲ್ಲ.
ಆ ಬಳಿಕ, 1999ರಲ್ಲಿ ಕಾನೂನು ಆಯೋಗ ದೇಶದಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸುವ ಬಗ್ಗೆ ತನ್ನ ವರದಿಯಲ್ಲಿ ಪ್ರಸ್ತಾಪಿಸಿತು. ದೇಶದಲ್ಲಿ ಏಕಕಾಲಕ್ಕೆ ಚುನಾವಣೆಗಳು ನಡೆಯುವಂತಾದರೆ, ವೆಚ್ಚದ ನಿಯಂತ್ರಣ ಮಾತ್ರವಲ್ಲ, ಆಡಳಿತ ಸುಧಾರಣೆ ನಿಟ್ಟಿನಲ್ಲಿ ದೊಡ್ಡ ಮೈಲಿಗಲ್ಲನ್ನು ಸಾಧಿಸಿದಂತೆ ಎಂಬ ಅಭಿಪ್ರಾಯ ತಜ್ಞರದ್ದು. ಆದ್ದರಿಂದ ಈ ಬಗ್ಗೆ ರಾಜಕೀಯ ಪಕ್ಷಗಳು ಸಮಗ್ರ ಚರ್ಚೆ ನಡೆಸಿ, ಒಮ್ಮತದ ನಿರ್ಣಯಕ್ಕೆ ಬರುವುದು ಸೂಕ್ತ.