

ಬೆಂಗಳೂರು: ವಾಲ್ಮೀಕಿ ನಿಗಮದ ಹಗರಣ ಮತ್ತು ಮೈಸೂರಿನ ಮುಡಾ ಹಗರಣಗಳು ಪ್ರಸ್ತುತ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೇ ನಡೆದಿದೆ ಎಂದು ಆರೋಪಿಸಿ, ಬೃಹತ್ ಪಾದಯಾತ್ರೆ ಕೈಗೊಂಡಿರುವ ರಾಜ್ಯ ಬಿಜೆಪಿ ನಾಯಕರು, ಸಿಎಂ ತಮ್ಮ ಕುರ್ಚಿಯಿಂದ ಕೆಳಗಿಳಿಯಬೇಕು, ರಾಜೀನಾಮೆ ಘೋಷಿಸಲೇಬೇಕು ಎಂದು ಪಟ್ಟುಹಿಡಿದಿದ್ದಾರೆ.
ಬಿಜೆಪಿ ನಾಯಕರ ಪಾದಯಾತ್ರೆಗೆ ಟಕ್ಕರ್ ಕೊಡಲು ಕಾಂಗ್ರೆಸ್ ಪಕ್ಷದ ವತಿಯಿಂದ ಜನಾಂದೋಲನ ಸಮಾವೇಶ ನಡೆಸಿದ ಸಿದ್ದರಾಮಯ್ಯ, ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಮಾಡಿರುವ ಹಗರಣಗಳನ್ನು ಒಂದೊಂದಾಗಿ ಬಿಚ್ಚಿಡ್ತೇವೆ, ಕಾದು ನೋಡಿ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಇನ್ನು ಈ ಮಧ್ಯೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಎಂ.ಬಿ. ಪಾಟೀಲ್, ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಪಾದಯಾತ್ರೆ ಮಾಡುವುದು ಒಳ್ಳೆಯದೇ ಎಂಬ ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ.
"ಬಿಜೆಪಿ ಶಾಸಕರಾದ ಯತ್ನಾಳ್ ಅವರೇ ಕೊರಾನಾ ಕಾಲದಲ್ಲಿ 2,000 ಕೋಟಿ ರೂ. ಹಗರಣವಾಗಿದೆ. ಮಾರಿಷಸ್ನಲ್ಲಿ ವಿಜಯೇಂದ್ರ ಅವರು 10 ಸಾವಿರ ಕೋಟಿ ರೂ. ಇರಿಸದ್ಧಾರೆಂದು ಹೇಳಿದ್ದಾರೆ. ಬಿಜೆಪಿಯವರ ಆಡಳಿತಾವಧಿಯಲ್ಲಿ ತಾಂಡಾ ಅಭಿವೃದ್ಧಿ ನಿಗಮ, ದೇವರಾಜ ಅರಸು ಟ್ರಕ್ ಟರ್ಮಿನಲ್, ಸೇರಿದಂತೆ 21 ಹಗರಣಗಳು ಆಗಿವೆ! ಬಿಜೆಪಿಯ 21 ಬಣಗಳಲ್ಲಿ ಒಬ್ಬೊಬ್ಬರು ಒಂದೊಂದು ಹಗರಣದ ಕುರಿತು ಪಾದಯಾತ್ರೆ ಮಾಡಲಿ" ಎಂದು ಟೀಕಿಸಿದರು.