ರಕ್ತದಾನಕ್ಕೆ ಯುವ ಸಮೂಹ ಕೈಜೋಡಿಸಲಿ

blood
ಕಡೂರಲ್ಲಿ ರೋಟರಿ ಕ್ಲಬ್‌ನಿಂದ ರಕ್ತದಾನ ಶಿಬಿರ ನಡೆಸಲಾಯಿತು. ಭಂಡಾರಿ ಶ್ರೀ ನಿವಾಸ್, ಕೆ.ಪಿ.ರಾಘವೇಂದ್ರ, ಸವಿತಾ ಸತ್ಯನಾರಾಯಣ್, ಪ್ರೇಮ್‌ಕುಮಾರ್ ಇದ್ದರು.
Published on

ಕಡೂರು: ತುರ್ತು ಸಂದರ್ಭದಲ್ಲಿ ರಕ್ತದಾನ ಮಾಡುವ ಮೂಲಕ ಅಮೂಲ್ಯ ಜೀವ ಉಳಿಸುವ ಮಹತ್ಕಾರ್ಯಕ್ಕೆ ಯುವ ಸಮೂಹ ಕೈ ಜೋಡಿಸಬೇಕು ಎಂದು ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.

ಪಟ್ಟಣದ ಶ್ರೀ ಪಾಂಡುರಂಗ ಕಲ್ಯಾಣ ಮಂಟಪದಲ್ಲಿ ಸೋಮವಾರ ರೋಟರಿ ಕ್ಲಬ್ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬ ಮನುಷ್ಯನಿಗೂ ರಕ್ತದ ಅಗತ್ಯವಿದೆ. ಅಪಘಾತ ಸಂಭವಿಸಿದಾಗ ಮತ್ತು ಹೆರಿಗೆ ಸಂದರ್ಭದಲ್ಲಿ ತಾಯಿ-ಮಗು ಉಳಿಸಲು ರಕ್ತದ ಅಗತ್ಯವಿರುತ್ತದೆ. ಆರೋಗ್ಯವಂತ ಯುವಕ, ಯುವತಿಯರು ರಕ್ತದಾನ ಮಾಡಲು ಮುಂದಾಗಬೇಕು ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಕೆ.ಪಿ.ರಾಘವೇಂದ್ರ ಮಾತನಾಡಿ, ಯುವಕರು ಅಂಜಿಕೆ ಇಲ್ಲದೆ ರಕ್ತದಾನ ಮಾಡಬೇಕು. ಸಮಾಜದ ಬದಲಾವಣೆ ಯುವ ಪೀಳಿಗೆಯಿಂದ ಮಾತ್ರ ಸಾಧ್ಯ. ಇನ್ನೊಂದು ಜೀವ ಉಳಿಸುವ ಶಕ್ತಿ ರಕ್ತದಾನಕ್ಕಿದೆ. ಇದರ ಮಹತ್ವವನ್ನು ಪ್ರತಿಯೊಬ್ಬರೂ ತಿಳಿಯಬೇಕು ಎಂದು ಹೇಳಿದರು.
ರೋಟರಿ ಕ್ಲಬ್ ಕಾರ್ಯದರ್ಶಿ ಸವಿತಾ ಸತ್ಯನಾರಾಯಣ್ ಮಾತನಾಡಿ, ಬಹಳಷ್ಟು ಯುವತಿಯರಿಗೆ ರಕ್ತದಾನದ ಬಗ್ಗೆ ಅರಿವು ಇಲ್ಲ. ರಕ್ತ ನೀಡಿದರೆ ತೊಂದರೆಯಾಗುತ್ತದೆ ಎಂಬ ಭ್ರಮೆಯಿಂದ ಹಿಂದೇಟು ಹಾಕುತ್ತಾರೆ. ಪ್ರತಿಯೊಬ್ಬರೂ ರಕ್ತದಾನಕ್ಕೆ ಮುಂದಾಗುವ ಮೂಲಕ ಹಲವಾರು ಜೀವ ಉಳಿಸುವ ಕಾರ್ಯ ಮಾಡಬೇಕು ಎಂದರು.
ಪಿಎಸ್‌ಐ ಪವನ್‌ಕುಮಾರ್, ಸಿ.ಎಚ್.ಪ್ರೇಮ್‌ಕುಮಾರ್, ವಕೀಲ ಶಿವಕುಮಾರ್, ಟಿ.ಡಿ.ಸತ್ಯನ್, ನಾಗೇಂದ್ರ, ಆರ್.ಜಿ.ಕೃಷ್ಣಸ್ವಾಮಿ, ಪುಂಡಲೀಕ ರಾವ್, ಚಂದ್ರಪ್ಪ, ರೂಪಾ ಗೋಪಾಲಕೃಷ್ಣ, ಕೃಷ್ಣಮೂರ್ತಿ ಗುಜ್ಜಾರ್, ಗೋಪಾಲಕೃಷ್ಣ, ರವಿಶಂಕರ್, ಚೇತನ್, ರಕ್ತನಿಧಿ ಕೇಂದ್ರದ ಸಂಪರ್ಕಾಧಿಕಾರಿ ಸತೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net