ಸಂಪಾದಕೀಯ | ಕೈಚಳಕಕ್ಕೆ ಕಡಿವಾಣ ಬೀಳಲಿ

ವಿಜಯವಾಣಿ (2)
Published on

ರಾಜ್ಯದಲ್ಲಿ ಎರಡು ವರ್ಷಗಳ ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರ ವಹಿಸಿಕೊಂಡ ಆರಂಭದಲ್ಲಿ, 4ಜಿ ವಿನಾಯಿತಿ ಪಡೆಯುವ ಮೂಲಕ ವ್ಯವಸ್ಥಿತವಾಗಿ ಹಸ್ತಕ್ಷೇಪ ನಡೆಸಲಾಗುತ್ತಿದ್ದುದನ್ನು ಹಣಕಾಸು ಇಲಾಖೆ ಜವಾಬ್ದಾರಿ ಹೊತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರವಾಗಿ ಪರಿಗಣಿಸಿ ಮುಲಾಜಿಲ್ಲದೇ ಬ್ರೇಕ್ ಹಾಕಿದ್ದರು. ಆದರೆ, ಈಗ ‘ನುಸುಳುಕೋರರು’ ಬೇರೆ ಸ್ವರೂಪದಲ್ಲಿ ತಮ್ಮ ಕಾರ್ಯಚಟುವಟಿಕೆ ನಡೆಸುತ್ತಿರುವುದು ಸೋಜಿಗವೇ ಸರಿ. ಆಯಕಟ್ಟಿನ ಹುದ್ದೆಯಲ್ಲಿರುವ ಕೆಲವು ಅಧಿಕಾರಿಗಳು ತಮ್ಮ ಸಂಬಂಧಿಗಳ ಕಂಪನಿಗಳಿಗೆ ಆದ್ಯತೆ ನೀಡಿ ಗುತ್ತಿಗೆ, ಸೇವೆ ಸಿಗುವಂತೆ ಮಾಡುತ್ತಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ವಸ್ತುಗಳ ಖರೀದಿ, ಸೇವೆ, ನಿರ್ಮಾಣ ಕಾಮಗಾರಿ ಹೀಗೆ ಸರ್ಕಾರದ ಹಣದ ಹರಿವಿನ ಪ್ರಮುಖ ಸೆಲೆಯನ್ನು ಕೆಲವು ಅಧಿಕಾರಿಗಳು ತಮ್ಮ ಪಾಲಿನ ಕಾಮಧೇನು, ಕಲ್ಪವೃಕ್ಷ ಮಾಡಿಕೊಳ್ಳುವ ಹಪಹಪಿಗೆ ಬಿದ್ದಿದ್ದಾರೆ. ನೂರೆಂಟು ಉದಾಹರಣೆಗಳು ಕಣ್ಣಮುಂದೆ ಕಾಣಿಸುತ್ತಿವೆ.

ಆಡಳಿತ ಯಂತ್ರದ ಮೇಲಿನ ಬಿಗಿಹಿಡಿತ ತಪ್ಪಿದಾಗ ಇಂತಹ ಚಟುವಟಿಕೆಗಳು ಹೆಚ್ಚಾಗುತ್ತವೆ. ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳೆಲ್ಲವೂ ವ್ಯವಸ್ಥಿತ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುತ್ತವೆ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದಾಗಲೂ ತಮ್ಮ ಆಪ್ತರಿಗೆ, ಕಾರ್ಯಕರ್ತರಿಗೆ ಅನುಕೂಲ ಮಾಡಿಕೊಡಬೇಕೆಂಬ ಋಣ ಸಂದಾಯದ ಲೆಕ್ಕಾಚಾರ ಇದ್ದೇ ಇರುತ್ತದೆ. ಅದು ಸಹಜ ಮತ್ತು ಸಾಮಾನ್ಯ. ಆದರೆ ಪ್ರಸ್ತುತ ಕೆಲವು ಸಚಿವರು, ಶಾಸಕರು, ಶಾಸನಬದ್ಧ ಹುದ್ದೆಯಲ್ಲಿರುವವರು, ಹಿರಿಯ ಅಧಿಕಾರಿಗಳ ‘ಆಪ್ತರ ಹಸ್ತಕ್ಷೇಪ’ ವಿಪರೀತವಾಗಿರುವುದು ಆಡಳಿತ ಪಕ್ಷದವರಿಗೇ ರೇಜಿಗೆ ಹುಟ್ಟಿಸಿದೆ. ಅವರೇ ಅಲ್ಲಲ್ಲಿ ಆ ವಿಚಾರದ ಬಗ್ಗೆ ಚರ್ಚೆ ನಡೆಸುತ್ತಾರೆಂದರೆ ಪರಿಸ್ಥಿತಿ ಎಲ್ಲಿಗೆ ಹೋಗಿದೆ ಎಂದು ಯಾರು ಬೇಕಾದರೂ ಊಹಿಸಬಹುದು.

ಊಟದಲ್ಲಿ ಉಪ್ಪಿನಕಾಯಿ ಇರಬೇಕೇ ಹೊರತು, ಉಪ್ಪಿನಕಾಯಿಯೇ ಊಟವಾಗಬಾರದು. ಈಗಿನ ವಾತಾವರಣವನ್ನು ಗಮನಿಸಿದರೆ ಪಾರದರ್ಶಕತೆಯನ್ನು ಮೂಟೆ ಕಟ್ಟಿಡಲಾಗಿದೆಯೇನೊ ಎಂಬಂತೆ ಭಾಸವಾಗುತ್ತದೆ. ಸರ್ಕಾರದ ಕಾರ್ಯನಿರ್ವಹಣೆ ಪಾರದರ್ಶಕವಾಗಿರಬೇಕು ಎಂಬ ಕಾರಣಕ್ಕೆ ಸಾರ್ವಜನಿಕ ಖರೀದಿಗಳಲ್ಲಿ ಪಾರದರ್ಶಕತೆ ಅಧಿನಿಯಮವನ್ನು ರೂಪಿಸಲಾಗಿದೆ. ಆದರೆ, ಇದೀಗ ಅದನ್ನು ಸಾರಾಸಗಟಾಗಿ ಬದಿಗಿಟ್ಟು ಅಡ್ಡದಾರಿ ಹುಡುಕಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಉದ್ಭವಿಸಿದೆ. ಇದು ಈಗಿನ ಸ್ಥಿತಿ ಎಂದೂ ದೂರುವಂತಿಲ್ಲ. ಹಿಂದಿನ ಸರ್ಕಾರದ ಅವಧಿಯಲ್ಲೂ ಇಂತಹದ್ದೇ ಚಟುವಟಿಕೆ ನಡೆದಿದ್ದೂ ಇದೆ. ವಿಧಾನಸೌಧದ ಮುಂದಿನ ಕಾರ್ಯಕ್ರಮವೊಂದಕ್ಕೆ ಹಾಕಿಸಿದ ಪ್ಲಾಸ್ಟಿಕ್ ಕುರ್ಚಿಗೆ 45 ರೂ.ನಂತೆ ಬಾಡಿಗೆ ನೀಡಿದ್ದು, ಡಸ್ಟ್​ಬಿನ್​ಗೆ ದುಬಾರಿ ವೆಚ್ಚ ಮಾಡಿದ್ದು ಇನ್ನೂ ತನಿಖೆ ಹಂತದಲ್ಲೇ ಇದೆ. ಆ ಪರಂಪರೆ ಈಗಲೂ ಮುಂದುವರಿದಿದ್ದು, ಶತಾಯಗತಾಯ ಕಡಿವಾಣ ಹಾಕಬೇಕಾಗಿದೆ. ಇದಕ್ಕಾಗಿ ಗಟ್ಟಿ ನಿರ್ಧಾರ ಕೈಗೊಂಡು, ಪರಿಸ್ಥಿತಿ ಕೈಮೀರುವ ಮುನ್ನ ಲಗಾಮು ಹಾಕಬೇಕಾಗಿದೆ. ಸರ್ಕಾರದ ಯಾವುದೇ ಖರೀದಿ, ಸೇವೆಗಳನ್ನು ಪಾರದರ್ಶಕವಾಗಿ ನಡೆಸಬೇಕೆಂಬ ಇಚ್ಛಾಶಕ್ತಿ ಅಗತ್ಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net