ಸ್ವಚ್ಛತೆಗಾಗಿ ಸಾರ್ವಜನಿಕರೂ ಕೈಜೋಡಿಸಲಿ

skp labours
ಶಿಕಾರಿಪುರದಲ್ಲಿ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಪೌರಕಾರ್ಮಿಕರನ್ನು ಸಂಸದ ಬಿ.ವೈ.ರಾಘವೇಂದ್ರ ಸನ್ಮಾನಿಸಿದರು. ಅಧ್ಯಕ್ಷೆ ಶೈಲಾ ಮಡ್ಡಿ, ರೂಪಾ, ಪ್ರಶಾಂತ್ ಜೀನಳ್ಳಿ, ಉಳ್ಳಿ ದರ್ಶನ್, ಭರತ್, ರಾಜ್‌ಕುಮಾರ್ ಇದ್ದರು.
Published on

ಶಿಕಾರಿಪುರ: ಸದಾ ಎಲೆಮರೆ ಕಾಯಿಯಂತೆ ಕಾಯಕ ಮಾಡುವ ಪೌರಕಾರ್ಮಿಕರು ನಮ್ಮ ಹಿರಿಮೆ. ಸ್ವಚ್ಛ, ಸುಂದರ, ಆರೋಗ್ಯಪೂರ್ಣ ಸಮಾಜ ನಿರ್ಮಾಣದಲ್ಲಿ ಪೌರಕಾರ್ಮಿಕರ ಪಾತ್ರ ಅತ್ಯಂತ ದೊಡ್ಡದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಪುರಸಭೆಯಲ್ಲಿ ಸೋಮವಾರ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಪೌರಕಾರ್ಮಿಕರು ಇಲ್ಲದಿದ್ದರೆ ಅತ್ಯುತ್ತಮ ಪಟ್ಟಣ, ನಗರಗಳನ್ನು ನಾವು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಅವರ ಸೇವೆ ಅನನ್ಯ ಎಂದರು.
ಪೌರಕಾರ್ಮಿಕರು ಕೆಲಸ ಮಾಡುವಾಗ ನಿಮ್ಮ ವೃತ್ತಿಗೆ ಪೂರಕವಾದಂತಹ ಸಲಕರಣೆಗಳನ್ನು ಕಡ್ಡಾಯವಾಗಿ ಉಪಯೋಗಿಸಿ. ಮೊದಲು ನಿಮ್ಮ ಆರೋಗ್ಯದ ಕಡೆಗೆ ಗಮನಹರಿಸಿ. ನಿಮ್ಮನ್ನೇ ಇಡೀ ಕುಟುಂಬ ಅವಲಂಬಿಸಿರುತ್ತದೆ. ನಿಮಗೆ ಕೆಲಸದಲ್ಲಿ ಯಾವುದೇ ರೀತಿ ತೊಂದರೆ ಆಗದಂತೆ ಜಾಗ್ರತೆ ವಹಿಸಿ ಎಂದು ಹೇಳಿದರು.
ಪಟ್ಟಣದ ಖಾಲಿ ಜಾಗದಲ್ಲಿ ಕಸ ಹಾಗೂ ಹಳೆಯ ಕಟ್ಟಡಗಳ ತ್ಯಾಜ್ಯ ಎಸೆಯಬೇಡಿ. ಹಸಿ-ಒಣ ಕಸ ಬೇರೆ ಮಾಡಿ ಪುರಸಭೆಯ ಗಾಡಿಯಲ್ಲೇ ಹಾಕಿ. ಅಭಿವೃದ್ಧಿ ಹೊಂದಿದ ತಾಲೂಕುಗಳಲ್ಲಿ ಶಿಕಾರಿಪುರ ಕೂಡ ಒಂದು. ಇದರ ಅಂದವನ್ನು ಹೆಚ್ಚಿಸುವ ಕೆಲಸವನ್ನು ಮಾಡಬೇಕೇ ಹೊರತು ಅಂದಗೆಡಿಸಬಾರದು. ಪಟ್ಟಣದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ಶಿಕಾರಿಪುರವನ್ನು ಮಾದರಿ ಕ್ಷೇತ್ರವನ್ನಾಗಿಸಲು ಪ್ರಯತ್ನಿಸೋಣ ಎಂದರು.
ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೈಗೊಂಡ ಸ್ವಚ್ಛ ಭಾರತ್ ಅಭಿಯಾನ ಇತಿಹಾಸವನ್ನೇ ಸೃಷ್ಟಿಸಿತು. ಪ್ರತಿಯೊಬ್ಬರಲ್ಲೂ ಸ್ವಚ್ಛತೆಯ ಅರಿವು ಮೂಡಿಸಿತು. ಮೊದಲು ನಮ್ಮ ಮನೆ ಸ್ವಚ್ಛವಾಗಿರಲಿ. ನಮ್ಮ ಗಲ್ಲಿಗಳು, ನಮ್ಮೂರು ಸ್ವಚ್ಛತೆಯ ಪ್ರತಿರೂಪವಾಗಲಿ ಎಂದರು.
ಪುರಸಭೆ ಅಧ್ಯಕ್ಷೆ ಶೈಲಾ ಯೋಗೀಶ್ ಮಡ್ಡಿ, ಉಪಾಧ್ಯಕ್ಷೆ ರೂಪಾ ಮಂಜುನಾಥ್, ಸದಸ್ಯರಾದ ಪ್ರಶಾಂತ್ ಜೀನಳ್ಳಿ, ಉಳ್ಳಿ ದರ್ಶನ್, ರಮೇಶ್, ರೋಷನ್, ರೂಪಕಲಾ ಹೆಗಡೆ, ಲಕ್ಷ್ಮೀ ಮಾಲಿಂಗಪ್ಪ, ರೇಖಾಬಾಯಿ, ಉಮಾದೇವಿ, ಮುಖ್ಯಾಧಿಕಾರಿ ಭರತ್, ಕಚೇರಿ ವ್ಯವಸ್ಥಾಪಕ ರಾಜ್‌ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net