ಯೋಜನೆ ವೇಗ ಪಡೆಯಲಿ; ನೀರಿನ ಸಮಸ್ಯೆ ನಿವಾರಣೆಯಾಗಲಿ

Water
Published on

ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರತೀ ಮನೆಗೂ ನೀರಿನ ಸಂಪರ್ಕ ಒದಗಿಸುವ ಮಹತ್ವಾಕಾಂಕ್ಷೆಯಿಂದ ಕೇಂದ್ರ ಸರ್ಕಾರವು ರಾಜ್ಯಗಳ ಸಹಭಾಗಿತ್ವದೊಂದಿಗೆ ಆರಂಭಿಸಿದ ಜಲಜೀವನ್ ಮಿಷನ್ ಬಹುತೇಕ ರಾಜ್ಯಗಳಲ್ಲಿ ಯಶಸ್ವಿಯಾಗಿ ಅನುಷ್ಠಾನವಾಗಿದೆ ಮತ್ತು ಗ್ರಾಮೀಣ ಪ್ರದೇಶಗಳಿಗೆ ವರದಾನವಾಗಿ ಪರಿಣಮಿಸಿದೆ. ಆದರೆ, ಕರ್ನಾಟಕದಲ್ಲಿ ಅಪೂರ್ಣ ಕಾಮಗಾರಿ, ಕೇಂದ್ರದಿಂದ ಅನುದಾನ ಬಂದರೂ, ರಾಜ್ಯದ ಪಾಲು ಬಿಡುಗಡೆಯಾಗದಿರುವುದು, ಅವ್ಯವಹಾರ ಹೀಗೆ ಹಲವು ಅಪಸವ್ಯಗಳ ಕಾರಣ ಜಲಜೀವನ್ ಮಿಷನ್ ಕುಂಟುತ್ತ ಸಾಗಿದೆ. ಈ ಬಾರಿಯಂತೂ ಮಳೆಯ ತೀವ್ರ ಕೊರತೆಯಿಂದ ರಾಜ್ಯದಲ್ಲಿ ಜಲಸಂಕಷ್ಟ ತೀವ್ರಗೊಂಡಿದ್ದು, ಜಲಾಶಯಗಳ ಸಂಗ್ರಹ ಮಟ್ಟ ಕುಸಿತವಾಗಿದೆ.

‘ದೇಶದಲ್ಲಿ ಜಲಜೀವನ್ ಮಿಷನ್ ಯೋಜನೆಯನ್ನು ನಿಗದಿತ ಗುರಿಯಂತೆ ಯಶಸ್ವಿಯಾಗಿ ಅನುಷ್ಠಾನಗೊಳಿಸಿದರೆ ವಾಂತಿ, ಭೇದಿ ಹಾಗೂ ಸಂಬಂಧಿತ ರೋಗಗಳಿಂದ ಸಂಭವಿಸುವ 4 ಲಕ್ಷ ಸಾವುಗಳನ್ನು ತಡೆಯಲು ಸಾಧ್ಯ’ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿರುವುದು, ಈ ಯೋಜನೆಯ ಮಹತ್ವಕ್ಕೆ ಸಾಕ್ಷಿ. ಆದರೆ, ಯೋಜನೆ ಅನುಷ್ಠಾನದ ವಿವಿಧ ವಿಭಾಗಗಳಲ್ಲಿ ಹೆಚ್ಚು ಪ್ರಗತಿ ಸಾಧಿಸಿದ ರಾಜ್ಯಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ಒಟ್ಟಾರೆ ಪ್ರಗತಿಯಲ್ಲಿ ಉತ್ತರಪ್ರದೇಶ, ತಮಿಳುನಾಡು, ಹಿಮಾಚಲ ಪ್ರದೇಶ ಮುಂದಿವೆ. ರಾಜ್ಯದಲ್ಲಿ ಇಚ್ಛಾಶಕ್ತಿಯ ಕೊರತೆ, ಸಮನ್ವಯ ಇಲ್ಲದಿರುವುದು, ಮೇಲ್ವಿಚಾರಣೆಯ ನಿರ್ಲಕ್ಷ್ಯದಿಂದ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ.

ಈ ಬಗ್ಗೆ ಜನಪ್ರತಿನಿಧಿಗಳು, ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ ಬಳಿಕ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಂತಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದ್ದು, ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಯೋಜನೆಯ ಅನುದಾನದ ನೆರವಿನೊಂದಿಗೆ ವಿವಿಧ ಕಡೆಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕೈಗೆತ್ತಿಕೊಳ್ಳಲು ಮುಂದಾಗಿದೆ. ಮೈಸೂರು, ಹಾವೇರಿ, ದಕ್ಷಿಣ ಕನ್ನಡ ಜಿಲ್ಲೆಯ ಜನವಸತಿಗಳ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಅನುದಾನ ಬಿಡುಗಡೆಗೆ ಅನುಮೋದನೆ ನೀಡಿದೆ. ಇನ್ನಾದರೂ, ಯೋಜನೆಗೆ ಹಿಡಿದಿರುವ ಗ್ರಹಣ ನಿವಾರಣೆಯಾಬೇಕು. ಸಕಾಲದಲ್ಲಿ ಅನುದಾನ ಬಿಡುಗಡೆಯಾಗಿ ಕಾಮಗಾರಿಗಳು ವೇಗ ಪಡೆಯಬೇಕು ಮತ್ತು ಪಾರದರ್ಶಕತೆಯಿಂದ ನಡೆಯಬೇಕು. ಬೆಂಗಳೂರು ನಗರ ಶೇ.27.31, ಕೋಲಾರ ಶೇ.35.26, ಚಿಕ್ಕಬಳ್ಳಾಪುರ ಶೇ.41.22, ಬೆಂಗಳೂರು ಗ್ರಾಮಾಂತರ ಶೇ.49.47 ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ.49.89ರಷ್ಟು ಯೋಜನೆ ಅನುಷ್ಠಾನಗೊಂಡಿದ್ದು, ವೇಗ ನೀಡಬೇಕಾದ ಅನಿವಾರ್ಯತೆ ಇದೆ. ಈ ಬಾರಿ ಕಾಮಗಾರಿ ಆರಂಭಿಸಿದ ಬಳಿಕ ಮತ್ತೆ ಅವು ಅರ್ಧಕ್ಕೆ ನಿಲ್ಲದಂತೆ ಸೂಕ್ತ ಕಾಳಜಿ ವಹಿಸಬೇಕಿದೆ. ಕಲುಷಿತ ನೀರಿನ ಸೇವನೆಯಿಂದ ಪ್ರಾಣಹಾನಿಯಾದ, ಅಸ್ವಸ್ಥರಾದ ನಿದರ್ಶನಗಳು ಕಣ್ಮುಂದೆ ಇವೆ. ಜಲಜೀವನ್ ಮಿಷನ್ ಮೂಲಕ ಜಲಸಂಕಷ್ಟ ಕೊನೆಗಾಣಿಸುವ ಇಚ್ಛಾಶಕ್ತಿಯನ್ನು ಸರ್ಕಾರ ಪ್ರದರ್ಶಿಸಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net