ಹೃದಯ ಮಂದಿರದಲ್ಲಿ ಮೊದಲು ಭಗವಂತನ ಪ್ರತಿಷ್ಠಾಪನೆಯಾಗಲಿ

Untitled design (19)
Published on

ಹೃದಯಪದ್ಮ ಈ ಪದವನ್ನು ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರು ಪದೇ ಪದೇ ತಮ್ಮ ಅಮೃತವಾಣಿಯಲ್ಲಿ ಉಪಯೋಗಿಸುತ್ತಾರೆ. ಸಾಧಕರಿಗೆ ಇದೊಂದು ಅದ್ಭುತ ಅಂಶ. ಸಾಮಾನ್ಯವಾಗಿ ದೇವಸ್ಥಾನಗಳನ್ನು, ದೇವ ಮಂದಿರಗಳನ್ನು, ಗುಡಿಗಳನ್ನು ನಿರ್ವಿುಸುವ ಜನರನ್ನು ನೋಡುತ್ತಿರುತ್ತೇವೆ. ಆದರೆ ತಮ್ಮ ತಮ್ಮ ಹೃದಯ ಮಂದಿರದ ಬಗ್ಗೆ ಬಹುತೇಕರಿಗೆ ತಿಳಿದೇ ಇಲ್ಲ ಎನ್ನಿಸುತ್ತದೆ. ಅದರಲ್ಲಿಯೂ ಈ ಆಧುನಿಕತೆಯ ಪ್ರವಾಹದಲ್ಲಿ ದೇವಸ್ಥಾನಗಳು, ಮಂದಿರಗಳು ಬಾಹ್ಯಾಡಂಭರಕ್ಕೆ ಸೀಮಿತವಾಗಿವೆಯೇ ವಿನಃ ಆಂತರಿಕ ಹೃನ್ಮಂದಿರದ ಬಗ್ಗೆ ಕಿಂಚಿತ್ತೂ ಪರಿವೆಯೇ ಇಲ್ಲ! ಇದಕ್ಕೆ ಮೂಲ ಕಾರಣ ಜೀವನದ ಶೈಲಿಯೇ ಬದಲಾಗಿರುವುದು. ವಾಸ್ತವದಲ್ಲಿ ಮಾನವ ತನ್ನ ಮನಸ್ಸಿನ ನಿಯಂತ್ರಣವನ್ನೇ ತಪ್ಪಿದ್ದಾನೆ. ಮನಸ್ಸು ಹುಚ್ಚು ಕುದುರೆಯಂತೆ ಅಷ್ಟ ದಿಕ್ಕುಗಳಿಗೂ ವ್ಯಾಪಿಸುತ್ತಿದೆ. ಯಾರಲ್ಲಿಯೂ ತನ್ನ ಹೃದಯಪದ್ಮದಲ್ಲಿ ಭಗವದ್ ಶಕ್ತಿಯ ಅರಿವೇ ಇಲ್ಲದೆ ಬಾಹ್ಯಾಡಂಬರಗಳಿಗೆ ಸೀಮಿತವಾಗಿದೆ.

ಪರಮಹಂಸರು ತನ್ನ ಹೃದಯ ಮಂದಿರದಲ್ಲಿಯೇ ಭವತಾರಿಣಿಯನ್ನು ಸ್ಥಾಪಿಸಿ ದಿವ್ಯವಾದ, ಪವಿತ್ರವಾದ ಸಾಧನಾ ಪರ್ವವನ್ನೇ ಅನುಷ್ಠಾನ ರೂಪದಲ್ಲಿ ಇಡೀ ಜಗತ್ತಿಗೆ ತೋರಿಸಿದ ಮಹಾನ್ ಸಾಧಕ. ಅವರು ಉಪದೇಶಾಮೃತವನ್ನು ನೀಡುವಾಗ ಹೃದಯವನ್ನು ಸ್ಪರ್ಶಿಸಿ ಭಗವತಿ, ಜಗನ್ಮಾತೆ ಭವತಾರಿಣಿ ಇಲ್ಲಿದ್ದಾಳೆ ಎಂದು ತಮ್ಮ ಅದ್ಭುತ ಅನುಭವ ನುಡಿಗಳಲ್ಲಿ ವಿವರಿಸುತ್ತಿದ್ದರು. ಮೊದಲು ಹೃದಯ ಮಂದಿರದಲ್ಲಿ ಭಗವದ್ ಶಕ್ತಿಯನ್ನು ಪ್ರತಿಷ್ಠಾಪನೆ ಮಾಡಿಕೊಳ್ಳಿ, ಬಳಿಕ ಇಚ್ಛೆಯಾದರೆ ಉಪನ್ಯಾಸ ಕೊಡಿ. ವಿವೇಕ-ವೈರಾಗ್ಯ ಗಳಿಸಿಕೊಳ್ಳದೆ ಕೇವಲ ಬ್ರಹ್ಮ, ಬ್ರಹ್ಮ ಎಂದು ಹೇಳುತ್ತಿದ್ದರೆ ಏನು ದೊರೆಯಿತು? ಬರೀ ಶಂಖಧ್ವನಿ ಮಾತ್ರ ಎಂದು ತಿಳಿಸಿ ಒಂದು ಸರಳ ಉದಾಹರಣೆ ನೀಡುತ್ತಾರೆ.

ಒಂದು ಹಳ್ಳಿಯಲ್ಲಿ ಪದ್ಮಲೋಚನ ಎಂಬ ಒಬ್ಬ ಹುಡುಗ ಇದ್ದ. ಜನರು ಅವನನ್ನು ಪೋದೋ, ಪೋದೋ ಎಂಬುದಾಗಿ ಕರೆಯುತ್ತಿದ್ದರು. ಅದೇ ಹಳ್ಳಿಯಲ್ಲಿ ಒಂದು ಶಿಥಿಲವಾದ ದೇವಸ್ಥಾನ ಇತ್ತು. ಒಳಗೆ ವಿಗ್ರಹವೇ ಇರಲಿಲ್ಲ. ಅದರ ಗೋಡೆಗಳ ಮೇಲೆ ಅಶ್ವತ್ಥ ವೃಕ್ಷ ಮತ್ತು ಇನ್ನೇನೋ ಗಿಡಮರಗಳು ಬೆಳೆದುಕೊಂಡಿದ್ದವು. ದೇವಾಲಯದ ಒಳಗೆ ಬಾವಲಿಗಳು ವಾಸವಾಗಿದ್ದವು. ನೆಲ ಅವುಗಳ ಹಿಕ್ಕೆ ಮತ್ತು ಧೂಳಿನಿಂದ ತುಂಬಿತ್ತು. ಅಲ್ಲಿಗೆ ಯಾರೂ ಹೋಗುತ್ತಿರಲಿಲ್ಲ. ಒಂದು ದಿನ ಮುಸ್ಸಂಜೆಯಾದ ಮೇಲೆ ಆ ದೇವಾಲಯದ ಕಡೆಯಿಂದ ಶಂಖಧ್ವನಿ ಬರಲಾರಂಭಿಸಿತು. ಹಳ್ಳಿಯ ಜನರು ಭಾವಿಸಿದರು, ಬಹುಶಃ ದೇವಾಲಯದಲ್ಲಿ ಯಾರೋ ದೇವರನ್ನು ಪ್ರತಿಷ್ಠಾಪನೆ ಮಾಡಿರಬೇಕು, ಸಾಯಂ ಮಂಗಳಾರತಿ ನಡೆಯುತ್ತಿದೆ. ಮಕ್ಕಳು, ಮರಿ, ಗಂಡಸರು, ಹೆಂಗಸರು, ದೊಡ್ಡವರು, ಚಿಕ್ಕವರು ಎಲ್ಲರೂ ದೇವಾಲಯದ ಕಡೆಗೆ ಓಡೋಡಿ ಬಂದರು. ಅವರಲ್ಲಿ ಒಬ್ಬ ಮೆತ್ತಗೆ ಬಾಗಿಲು ತಳ್ಳಿ ನೋಡುತ್ತಾನೆ!

ಪದ್ಮಲೋಚನ ಒಂದು ಕಡೆ ನಿಂತುಕೊಂಡು ಭ್ಞೋ! ಭ್ಞೋ! ಅಂತ ಶಂಖ ಊದುತ್ತಿದ್ದಾನೆ. ದೇವರನ್ನು ಪ್ರತಿಷ್ಠಾಪನೆ ಮಾಡಿಲ್ಲ, ನೆಲವನ್ನು ಗುಡಿಸಿಲ್ಲ, ಸಾರಿಸಿಲ್ಲ, ಹೇರಳವಾಗಿ ಹಿಕ್ಕೆ ರಾಶಿ ಬಿದ್ದಿದೆ. ಆಗ ಅವನು ಗಟ್ಟಿಯಾಗಿ ಕೂಗಿ ಪದ್ಮಲೋಚನನಿಗೆ ಹೇಳಿದ: ‘ಮೂರ್ತಿಯನ್ನು ನಿಲ್ಲಿಸಿಲ್ಲ. ಗುಡಿಯ ಪೀಠದಲ್ಲಿ, ಆದರೂ ಶಂಖವನ್ನು ಊದುತ್ತಿರುವೆ!’ ಎಂದು. ಹಾಗೆಯೇ ಹೃದಯ ಮಂದಿರದಲ್ಲಿ ಭಗವಂತನನ್ನು ಪ್ರತಿಷ್ಠಾಪಿಸಬೇಕು ಎಂಬುದಾಗಿ ಇಚ್ಛೆಪಡುತ್ತಿದ್ದರೆ, ಕೇವಲ ಭ್ಞೋ! ಭ್ಞೋ! ಅಂತ ಶಂಖ ಊದಿದರೆ ಏನು ಫಲ? ಮೊದಲು ಚಿತ್ತ ಶುದ್ಧಿಯಾಗಬೇಕು, ಮನಸ್ಸು ಶುದ್ಧವಾಯಿತು. ಆಗ ಭಗವಂತ ಬಂದು ಆಸೀನನಾಗುತ್ತಾನೆ. ಬಾವಲಿಯ ಹಿಕ್ಕೆಯ ರಾಶಿ ಸುಮ್ಮನೆ ಬಿದ್ದಿದ್ದರೆ ಭಗವಂತನ ಪ್ರತಿಷ್ಠಾಪನೆ ಮಾಡಲಾಗದು. ಹನ್ನೊಂದು ಬಾವಲಿ ಎಂಬುವುದು ನಮ್ಮ ಹನ್ನೊಂದು ಇಂದ್ರಿಯಗಳು. ಐದು ಜ್ಞಾನೇಂದ್ರಿಯ, ಐದು ಕಮೇಂದ್ರಿಯ ಮತ್ತು ಮನಸ್ಸು ಎಂದು ಪರಮಹಂಸರು ಬೋಧಿಸುತ್ತಾರೆ.

ಸಾಮಾನ್ಯ ಮನುಜರ ಅವಸ್ಥೆ ಪದ್ಮಲೋಚನನಂತೆಯೇ ಸರಿ. ರಾಮಕೃಷ್ಣರ ಅತ್ಯಂತ ಪರಿಣಾಮಕಾರಿಯಾದ ಭೋಧನೆ ಯೆಂದರೆ ಹೃನ್ಮಂದಿರದಲ್ಲಿ ಭಗವಂತನನ್ನು ಸ್ಥಾಪಿಸಿ ಸಾಧನೆಯನ್ನು ಆರಂಭಿಸುವುದು. ದುರದೃಷ್ಟವಶಾತ್ ಕಾಲಘಟ್ಟದ ಪರಿಣಾಮವೋ ಎಂಬಂತೆ ಮಾನವನು ಭಕ್ತಿ, ಸಾಧನೆ, ಭಗವತ್ಪ್ರೇಮ, ಇತ್ಯಾದಿಗಳನ್ನು ಆಂತರ್ಯದಲ್ಲಿ ಆಚರಣೆಗೆ ತರದೆ ಬಾಹ್ಯವಾಗಿ ವಿಜೃಂಭಿಸುವುದನ್ನು ಕಾಣುತ್ತಾ ಬರುತ್ತಿದ್ದೇವೆ. ಈ ಕಾರಣದಿಂದಲೇ ಪರಮಹಂಸರು ಮೊದಲು ಭಗವತಿಯನ್ನು ತಮ್ಮ ಹೃನ್ಮಂದಿರದಲ್ಲಿ ಸ್ಥಾಪಿಸಿಕೊಂಡು ಆ ಬ್ರಹ್ಮಾನಂದವನ್ನು ಅನುಭವಿಸಿ ತದನಂತರ ತಮ್ಮ ಬಳಿಗೆ ಸಾರಿದ ಪ್ರತಿಯೊಬ್ಬರಿಗೂ ಹೃದಯ ಮಂದಿರದ ಮಹತ್ವವನ್ನು ತಿಳಿಸುತ್ತಾ ಬರುತ್ತಿದ್ದರು. ಹಾಗಾಗಿ ಪ್ರತಿಯೊಬ್ಬರ ಹೃದಯದಲ್ಲಿ ಭಗವಂತನ ಶಕ್ತಿಯನ್ನು ತುಂಬಿಕೊಂಡು ತದನಂತರ ಬಾಹ್ಯ ಚಟುವಟಿಕೆಗಳಿಗೆ ಧುಮುಕಬೇಕು ಎಂದು ಬಾರಿ ಬಾರಿಗೂ ಬೋಧಿಸುತ್ತಿದ್ದರು.

ಶರನ್ನವರಾತ್ರಿಯ ಪವಿತ್ರ ಪರ್ವ ಆರಂಭವಾಗುತ್ತಿದೆ. ಹಾಗಾಗಿ ರಾಮಕೃಷ್ಣರ ಮೂಲ ಉಪದೇಶವಾದ ಹೃನ್ಮಂದಿರದ ನಿರ್ವಣವನ್ನು ಕೈಗೊಳ್ಳಬೇಕಿದೆ. ಒಮ್ಮೆ ಆ ಭವತಾರಿಣಿಯ ದಿವ್ಯ ಸ್ವರೂಪ ಹೃನ್ಮಂದಿರದಲ್ಲಿ ಸದಾ ನೆಲೆಸುವಂತೆ ಮಾಡಿದ್ದೇ ಆದಲ್ಲಿ ನಿಜವಾದ ಅರ್ಥದಲ್ಲಿ ಭಗವದ್ಭಕ್ತರು ಎಂದೆನಿಸಿಕೊಳ್ಳುತ್ತೇವೆ, ಇಲ್ಲದಿದ್ದಲ್ಲಿ ಕೇವಲ ಪದ್ಮಲೋಚನನಂತೆ ಶಂಖವನ್ನು ಊದುತ್ತಾ ನಿಷ್ಪ್ರಯೋಜಕ ಜೀವನವನ್ನು ನಡೆಸಬೇಕಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net