ಸುಧಾರಣೆಗೆ ನಾಂದಿಯಾಗಲಿ

GramPanchathy Office
Published on

ಆಡಳಿತ ಸುಧಾರಣೆಯ ಆಶಯ ಮತ್ತು ಪ್ರಯತ್ನಗಳ ಬಗ್ಗೆ ಸರ್ಕಾರ ಎಷ್ಟೇ ಮಾತನಾಡಿದರೂ, ಗ್ರಾಮೀಣ ಮಟ್ಟದಲ್ಲಿ ಅದಿನ್ನು ಸಾಕಾರಗೊಳ್ಳದ ಕನಸಾಗಿಯೇ ಉಳಿದಿರುವುದು ಕಹಿವಾಸ್ತವ. ಸಣ್ಣ ಸಣ್ಣ ಸಮಸ್ಯೆಗಳ ನಿವಾರಣೆಗೂ ಗ್ರಾಮೀಣಿಗರು ತಾಲೂಕು, ಜಿಲ್ಲಾಕೇಂದ್ರಕ್ಕೆ ಅಲೆದಾಡಬೇಕು. ಎಷ್ಟೋ ಬಾರಿ ಅಲ್ಲೂ ಸಮಸ್ಯೆ ಬಗೆಹರಿಯದಿದ್ದಾಗ ರಾಜಧಾನಿ ಬೆಂಗಳೂರಿನವರೆಗೆ ಬರುವ ಅನಿವಾರ್ಯತೆ. ಅದರಲ್ಲೂ, ಕಂದಾಯ ಇಲಾಖೆಗೆ ಸಂಬಂಧಿಸಿದ ಕೆಲಸಗಳಿಗೆ ಜನಸಾಮಾನ್ಯರು ಸರ್ಕಾರಿ ಕಚೇರಿಗಳಿಗೆ ಅಲೆದಾಡಿದರೂ, ಬೇಗ ಸ್ಪಂದನೆ ಸಿಗುವುದೇ ಇಲ್ಲ. ಅಲ್ಲದೆ, ಸಿಬ್ಬಂದಿಯ ಕೊರತೆಯಿಂದ ಗ್ರಾಮಗಳಲ್ಲಿನ ಸರ್ಕಾರಿ ಕೆಲಸಗಳು ಆಮೆವೇಗದಲ್ಲಿ ನಡೆಯುತ್ತಿರುವುದು ಆಡಳಿತ ಸುಧಾರಣೆಯ ಆಶಯಕ್ಕೆ ದೊಡ್ಡ ಹಿನ್ನಡೆಯೇ ಸರಿ.

ಈ ಕೊರತೆ ನೀಗಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಮಹತ್ವದ ಹೆಜ್ಜೆ ಇರಿಸುತ್ತಿರುವುದು ಸ್ವಾಗತಾರ್ಹ. ಬಹುದಿನಗಳಿಂದ ನನೆಗುದಿಗೆ ಬಿದ್ದ ಗ್ರಾಮ ಆಡಳಿತಾಧಿಕಾರಿಗಳ ನೇಮಕಾತಿಗೆ ಮುಂದಾಗಿರುವ ಸರ್ಕಾರ, ತಿಂಗಳೊಳಗೆ ನೇಮಕಕ್ಕೆ ಅಧಿಸೂಚನೆ ಹೊರಡಿಸಲು ಸಿದ್ಧತೆ ನಡೆಸಿದೆ. ರಾಜ್ಯದಲ್ಲಿ ಪ್ರಸ್ತುತ 9 ಸಾವಿರ ಗ್ರಾಮ ಆಡಳಿತಾಧಿಕಾರಿಗಳಿದ್ದು, ಒಂದೂವರೆ ಸಾವಿರ ಹುದ್ದೆ ಭರ್ತಿ ಮಾಡುವ ಅಗತ್ಯವಿದೆ. ಈ ಪೈಕಿ ಒಂದು ಸಾವಿರ ಹುದ್ದೆ ಭರ್ತಿಗೆ ಪ್ರಕ್ರಿಯೆ ನಡೆದಿದೆ. ‘ಕಂದಾಯ ಇಲಾಖೆಯ ಕೆಲಸ ಮತ್ತಷ್ಟು ಚುರುಕುಗೊಳಿಸಲು ಹಾಗೂ ಜನರಿಗೆ ಸರಳ ಆಡಳಿತ ನೀಡುವ ಉದ್ದೇಶದಿಂದ ಶೀಘ್ರದಲ್ಲೇ 1000 ಗ್ರಾಮ ಆಡಾಳಿತಾಧಿಕಾರಿ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುವುದು’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೋಮವಾರ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ರಾಜ್ಯಮಟ್ಟದಲ್ಲಿ ಪರೀಕ್ಷೆ ನಡೆಸಿ, ನಂತರ ಮೆರಿಟ್ ಲಿಸ್ಟ್ ಮೂಲಕ ಜಿಲ್ಲಾವಾರು ನೇಮಕ ಮಾಡಲಾಗುತ್ತದೆ. ದಾಖಲೆ ಪರಿಶೀಲನೆ ಪ್ರಕ್ರಿಯೆಯನ್ನೂ ಆಧುನಿಕ ರೀತಿಯಲ್ಲಿ ನಡೆಸುವ ಬಗ್ಗೆ ಅಧಿಕಾರಿಗಳ ಹಂತದಲ್ಲಿ ಚರ್ಚೆಯಾಗಿದೆ. ಅರ್ಜಿ ಹಾಕಿದ ಆಕಾಂಕ್ಷಿಗಳೆಲ್ಲ ಪರೀಕ್ಷೆ ಎದುರಿಸಿದ ಬಳಿಕ ರ‍್ಯಾಂಕಿಂಗ್ ಬಿಡುಗಡೆ ಮಾಡಲಾಗುತ್ತದೆ. ಇದು ಉತ್ತಮವಾದ ನಿರ್ಧಾರ. ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಕುಂಟುತ್ತ ನಡೆದಿರುವ ಸಾರ್ವಜನಿಕರ ಕೆಲಸಗಳು ಈ ಕ್ರಮದಿಂದ ವೇಗ ಪಡೆಯುವುದರಲ್ಲಿ ಸಂಶಯವಿಲ್ಲ. ಆದರೆ, ವಿವಿಧ ನೇಮಕಾತಿಗಳ ಪರೀಕ್ಷೆ ವೇಳೆ ನಡೆದ ಕಹಿ ಅನುಭವಗಳನ್ನು ಉದ್ಯೋಗಾಕಾಂಕ್ಷಿಗಳು ಮರೆತಿಲ್ಲ. ಹಾಗಾಗಿ, ಇತ್ತೀಚಿನ ಕೆಲವು ನೇಮಕಾತಿ ಪರೀಕ್ಷೆಗಳಲ್ಲಿ ಸಂಭವಿಸಿದ ಅವಘಡಗಳು ಇದರಲ್ಲಿ ಆಗದಂತೆ ಎಚ್ಚರ ವಹಿಸಬೇಕಾದ್ದು ಸರ್ಕಾರದ ಕರ್ತವ್ಯ. ಪರೀಕ್ಷೆ ಯಾವುದೇ ಅಕ್ರಮಕ್ಕೆ ಆಸ್ಪದ ನೀಡದಂತೆ ಸುಗಮವಾಗಿ ನಡೆಯಬೇಕು.

ಇದಲ್ಲದೆ, ಕಂದಾಯ ಇಲಾಖೆಯ ಸಿಬ್ಬಂದಿ ಇತರ ಇಲಾಖೆಗಳಿಗೆ ನಿಯೋಜನೆ ಮೇಲೆ ಹೋಗುವುದನ್ನು ನಿಯಂತ್ರಿಸಲಾಗುವುದು. ಈ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಕಂದಾಯ ಸಚಿವರು ಹೇಳಿದ್ದಾರೆ. ಸಚಿವರ ಈ ಆಶ್ವಾಸನೆ ಈಡೇರಿದರೆ, ಜನರ ಸಮಸ್ಯೆಗಳು ಚುರುಕಾಗಿ ಬಗೆಹರಿಯುತ್ತವೆ. ಕಂದಾಯ ಇಲಾಖೆ ಸಿಬ್ಬಂದಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net