ಸಾಹಿತಿಗಳ ಬರಹಗಳ ದಾಖಲೀಕರಣ ಹೆಚ್ಚಾಗಲಿ

da raa bendre
ಸಾಗರದ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ವರಕವಿ ಬೇಂದ್ರೆ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಭಾವನಮನ ಕಾರ್ಯಕ್ರಮವನ್ನು ಚಲನಚಿತ್ರ ನಿರ್ದೇಶಕ ನವೀನ್ ಡಿಸೋಜಾ ಉದ್ಘಾಟಿಸಿದರು. ದತ್ತಾತ್ರೇಯ ಭಟ್, ದೀಪಕ್ ಸಾಗರ್, ಪಾಲಾಕ್ಷಪ್ಪ, ಸಹನಾ ಜಿ ಭಟ್ ಇತರರಿದ್ದರು.
Published on

ಸಾಗರ: ಸಾಹಿತಿಗಳ ಬರಹಗಳನ್ನು ದಾಖಲಿಸುವಲ್ಲಿ ಮತ್ತು ಜನರತ್ತ ಕೊಂಡೊಯ್ಯುವಲ್ಲಿ ಗಮನಾರ್ಹ ಪ್ರಯತ್ನಗಳು ನಡೆದಿಲ್ಲ. ಆಧುನಿಕ ತಂತ್ರಜ್ಞಾನ ಬಳಸಿ ಅವರ ಕೃತಿಗಳನ್ನು ಜನರತ್ತ ಕೊಂಡೊಯ್ಯುವ ಪ್ರಯತ್ನಗಳು ಹೆಚ್ಚಾಗಬೇಕು. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಈ ಪ್ರಯತ್ನಗಳು ನಡೆಯುತ್ತಿವೆ ಎಂದು ಚಲನಚಿತ್ರ ನಿರ್ದೇಶಕ ನವೀನ್ ಡಿಸೋಜ ಹೇಳಿದರು.

ಸಾಗರದ ಉರ್ದು ಪ್ರಾಥಮಿಕ ಶಾಲೆಯಲ್ಲಿ ವರಕವಿ ಬೇಂದ್ರೆ ಅವರ 129ನೇ ಜನ್ಮದಿನದ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ವರಕವಿ ಬೇಂದ್ರೆ ಭಾವನಮನ ಉದ್ಘಾಟಿಸಿ ಮಾತನಾಡಿದರು.

ಶಬ್ದ ಗಾರುಡಿಗ, ದಾರ್ಶನಿಕ, ದ.ರಾ.ಬೇಂದ್ರೆ ಅವರ ಕೃತಿಗಳನ್ನು ಜನತೆಗೆ ತಲುಪಿಸುವಲ್ಲಿ ಕನ್ನಡ ನಾಡಿನ ಗಾಯಕರ ಪ್ರಯತ್ನ ಬಹುದೊಡ್ಡದು. ಕವಿಗಳು, ಸಾಹಿತಿಗಳ ಕೃತಿಗಳನ್ನು ಚಲನಚಿತ್ರದಂತಹ ಮಾಧ್ಯಮದಲ್ಲಿ ಬಳಸುವ ಪ್ರಯತ್ನ ಹೆಚ್ಚಾಗಬೇಕು. ಆಗ ಆ ಕೃತಿಗಳ ಬಗ್ಗೆ ಹೆಚ್ಚು ಚರ್ಚೆ ಆಗುತ್ತದೆ. ಎಲ್ಲ ತಲೆಮಾರುಗಳನ್ನೂ ಅದು ತಲುಪುತ್ತದೆ ಎಂದರು.

ಬೇಂದ್ರೆಯವರ ಬದುಕು - ಬರಹ ಕುರಿತು ಜಿಲ್ಲಾ ಪತ್ರಕರ್ತರ ಸಂಘದ ಕಾಯದರ್ಶಿ ದೀಪಕ್ ಸಾಗರ್ ಮಾತನಾಡಿ, ಬೆಂದ್ರೆಯವರು ಪ್ರೀತಿಯ ಜಗತ್ತನ್ನು ಕನ್ನಡದ ಕಾವ್ಯಗಳ ಮೂಲಕ ಅತ್ಯಂತ ವಿಶಿಷ್ಟವಾಗಿ ತೆರೆದಿಟ್ಟಿದ್ದಾರೆ. ಅವರ ನಾದಲೀಲೆ, ಗರಿ ಸಂಕಲನಗಳು ಗಂಡು- ಹೆಣ್ಣಿನ ಪ್ರೀತಿ, ಪ್ರೇಮದ ಜಗತ್ತನ್ನು ಒಲವಿನ ಪದ್ಯಗಳ ಮೂಲಕ ಪರಿಚಯಿಸುತ್ತದೆ. ಬೇಂದ್ರೆಯವರಿಗೆ ಅರವಿಂದರ ಪ್ರಭಾವ ಹೆಚ್ಚಿತ್ತು. ಅವರ ಪದ್ಯಗಳು ಅಧ್ಯಾತ್ಮದ ಬೆಳಕನ್ನೂ ಅನಾವರಣಗೊಳಿಸಿವೆ ಎಂದು ಹೇಳಿದರು.

ಈ ವರ್ಷ ಬೇಂದ್ರೆಯವರ ನಾಕುತಂತಿ ಕವನ ಸಂಕಲನಕ್ಕೆ ಅರವತ್ತರ ಸಂಭ್ರಮ. ಅವರ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಬಂದು ಈಗಾಗಲೇ 50 ವರ್ಷಗಳಾಗಿವೆ. ಕನ್ನಡ ಕಾವ್ಯ ಜಗತ್ತಿಗೆ ಹೊಸ ಪದಗಳನ್ನು ಕೊಟ್ಟ ಬೇಂದ್ರೆ, ಧಾರವಾಡ ಸೀಮೆಯ ಭಾಷಾ ಮಹತ್ವವನ್ನೂ ಎತ್ತಿ ಹಿಡಿದಿದ್ದಾರೆ ಎಂದರು.

ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾವಿದೆ ಸಹನಾ ಜಿ. ಭಟ್ ಬೇಂದ್ರೆ ಅವರ ವಿವಿಧ ಭಾವಗೀತೆಗಳನ್ನು ಹಾಡಿದರು. ಕಲಾವಿದ ಎಚ್.ಎಲ್.ರಾಘವೇಂದ್ರ ಸಹಕಾರ ನೀಡಿದರು. ಪಾಲಾಕ್ಷಪ್ಪ, ಗಣೇಶ್ ಡಿ. ನಾಯ್ಕ, ಬಿ.ಬಿ.ಸುಫಿಯಾ, ಶಹನಾಜ್ ಖಾನಂ, ಆಸ್ಮಾ ಕೌಸರ್, ಹೀನಾ ಕೌಸರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net