ಸಂಪಾದಕೀಯ | ಕೇಂದ್ರ ಮಧ್ಯಪ್ರವೇಶಿಸಲಿ

ವಿಜಯವಾಣಿ (3)
Published on

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಆರಂಭವಾಗಿದೆ. ಜಿರಿಬಾಮ್ ಜಿಲ್ಲೆಯಲ್ಲಿ ಅಪಹರಣಕ್ಕೆ ಒಳಗಾಗಿದ್ದರು ಎನ್ನಲಾದ ಆರು ಜನರ ಮೃತದೇಹಗಳು ಪತ್ತೆ ಆಗುತ್ತಿದ್ದಂತೆಯೇ ಮೈತೇಯಿ ಸಮುದಾಯದ ನೂರಾರು ಉದ್ರಿಕ್ತ ಜನರು ಬೀದಿಗೆ ಇಳಿದಿದ್ದಾರೆ. ಮೃತಪಟ್ಟವರಲ್ಲಿ ಮೂವರು ಮಹಿಳೆಯರು, ಮೂವರು ಮಕ್ಕಳು ಇದ್ದಾರೆ. ಈ ಅಮಾಯಕರನ್ನು ಕುಕಿ ಬಂಡುಕೋರರೇ ಹತ್ಯೆ ಮಾಡಿದ್ದಾರೆ ಎಂಬುದು ಜನರ ಆರೋಪ. ಘಟನಾ ಸ್ಥಳದಲ್ಲಿ, ಪೊಲೀಸರಿಂದ ಕುಕಿ ಬಂಡುಕೋರರು ಲೂಟಿ ಮಾಡಿ ಕೊಂಡೊಯ್ದಿದ್ದ ಶಸ್ತ್ರಾಸ್ತ್ರಗಳು ಪತ್ತೆಯಾಗಿರುವುದು ಈ ಆರೋಪಕ್ಕೆ ಪುಷ್ಟಿ ನೀಡುವಂತಿದೆ. ಇದು ಆ ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಎಷ್ಟು ಗಂಭೀರವಾಗಿದೆ ಎಂಬುದರ ದ್ಯೋತಕವಾಗಿದೆ.

ಮೈತೇಯಿ ಜನರು ಈಗ ಸಚಿವರು ಮತ್ತು ಶಾಸಕರ ಮನೆಗಳಿಗೆ ಮುತ್ತಿಗೆ ಹಾಕಿ, ಬೆಂಕಿ ಹಚ್ಚಿ ಹಿಂಸಾತ್ಮಕ ಪ್ರತಿಭಟನೆ ನಡೆಸತೊಡಗಿದ್ದಾರೆ. ಹಿಂಸಾಗ್ರಸ್ತ ಪ್ರದೇಶಗಳಲ್ಲಿ ಕರ್ಫ್ಯ ವಿಧಿಸಿ, ಇಂಟರ್​ನೆಟ್ ಸ್ಥಗಿತಗೊಳಿಸಲಾಗಿದೆ. ಇಷ್ಟಾದರೂ ಪರಿಸ್ಥಿತಿ ತಹಬಂದಿಗೆ ಬಂದಿಲ್ಲ. ಹಿಂಸಾಚಾರ ಮುಂದುವರಿಯುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿರುವುದರಿಂದ ಕೇಂದ್ರ ಗೃಹ ಸಚಿವ ಅಮಿತ್ ಷಾ ತಮ್ಮ ಮಹಾರಾಷ್ಟ್ರ ಚುನಾವಣಾ ಪ್ರವಾಸ ಮೊಟಕುಗೊಳಿಸಿ ದೆಹಲಿಗೆ ವಾಪಸಾಗಿ ಮಣಿಪುರಕ್ಕೆ ಸಂಬಂಧಿಸಿದಂತೆ ಸಭೆ ನಡೆಸಿದ್ದಾರೆ. ಕೆಲವು ದಿನಗಳ ಹಿಂದೆ ಭದ್ರತಾ ಪಡೆಗಳ ಮೇಲೆ ಕುಕಿ ಬಂಡುಕೋರರು ದಾಳಿ ಮಾಡಿದ್ದರು. ನಂತರ ನಡೆದ ಭದ್ರತಾ ಪಡೆಗಳ ದಾಳಿಯಲ್ಲಿ 10 ಜನ ಸಶಸ್ತ್ರ ಬಂಡುಕೋರರು ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರವೆಂಬಂತೆ ಈಗ 6 ಅಮಾಯಕ ನಾಗರಿಕರ ಪ್ರಾಣ ಹೋಗಿದೆ. ಕಳೆದ ವರ್ಷದ ಮೇ ತಿಂಗಳಲ್ಲಿಯೇ ಮಣಿಪುರದಲ್ಲಿ ಹಿಂಸಾಚಾರ ಆರಂಭವಾಗಿದೆ. ಕುಕಿ ಮತ್ತು ಮೈತೇಯಿ ಬುಡಕಟ್ಟು ಸಮುದಾಯಗಳ ನಡುವಿನ ಸಂಘರ್ಷದಲ್ಲಿ ಈವರೆಗೆ 250ಕ್ಕೂ ಹೆಚ್ಚು ಜನ ಬಲಿಯಾಗಿ, ಸಾವಿರಾರು ಜನ ಗಾಯಗೊಂಡಿದ್ದಾರೆ. 60 ಸಾವಿರಕ್ಕೂ ಹೆಚ್ಚು ಜನ ತಮ್ಮ ಊರುಗಳನ್ನೇ ತೊರೆದಿದ್ದಾರೆ.

ಮಣಿಪುರದಲ್ಲಿ ಎನ್.ಬೀರೇನ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಅವರು ಪಕ್ಷಪಾತಿ ಎಂಬುದು ಕುಕಿ ಸಮುದಾಯದ ಆರೋಪ. ಈ ಆಪಾದನೆಯನ್ನು ಸುಳ್ಳು ಮಾಡಿ, ಕುಕಿ ಸಮುದಾಯದವರಲ್ಲಿ ವಿಶ್ವಾಸ ಮೂಡಿಸುವುದು ಬೀರೇನ್ ಸಿಂಗ್​ಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಈಗ ಕೇಂದ್ರ ಸರ್ಕಾರದ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಕಳೆದ ತಿಂಗಳು ಎರಡೂ ಸಮುದಾಯಗಳ ರಾಜಕೀಯ ನಾಯಕರ ಸಭೆಯನ್ನು ಕೇಂದ್ರ ಗೃಹ ಸಚಿವಾಲಯ ಆಯೋಜಿಸಿತ್ತು. ಆದರೆ ಶಾಂತಿ ಸ್ಥಾಪನೆಯ ದೃಷ್ಟಿಯಿಂದ ಯಾವುದೇ ಮಹತ್ತರ ಬೆಳವಣಿಗೆ ಈವರೆಗೂ ಆಗಲಿಲ್ಲ. ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್​ಪಿಎಫ್) ಜತೆ ಅಸಹಕಾರ ಧೋರಣೆ ಅನುಸರಿಸುತ್ತಿರುವ ಕುಕಿ ಸಮುದಾಯ, ತಮಗಾಗಿ ಒಂದು ಕೇಂದ್ರಾಡಳಿತ ಪ್ರದೇಶವನ್ನೇ ರೂಪಿಸುವಂತೆ ಒತ್ತಾಯಿಸುತ್ತಿದೆ.

ಇದಕ್ಕಾಗಿ ಮಣಿಪುರವನ್ನು ಎರಡು ಹೋಳು ಮಾಡಬೇಕಾಗುತ್ತದೆ. ಈಶಾನ್ಯ ಭಾರತದಲ್ಲಿರುವ ಬುಡಕಟ್ಟು ಸಮುದಾಯಗಳ ಒಳಸುಳಿಗಳು ವಿಪರೀತ ಸಂಕೀರ್ಣವಾಗಿವೆ. ಅವರ ಮಧ್ಯೆ ಒಮ್ಮೆ ಹಿಂಸಾಚಾರ ಆರಂಭವಾದರೆ ಬಹುಕಾಲ ಮುಂದುವರಿಯುತ್ತದೆ ಎಂಬುದಕ್ಕೆ ಇತ್ತೀಚಿನ ವರ್ಷಗಳಲ್ಲಿ ನಡೆದ ಘಟನಾವಳಿಗಳೇ ಸಾಕ್ಷಿಯಾಗಿವೆ. ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕೆಂದು ಕುಕಿ ಸಮುದಾಯ ಒತ್ತಾಯಿಸುತ್ತಲೇ ಬಂದಿದೆ. ಈ ಅವಕಾಶವನ್ನು ಕೇಂದ್ರ ಸರ್ಕಾರ ಕೂಡಲೇ ಉಪಯೋಗಿಸಿಕೊಳ್ಳಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net