ದೇವಸ್ಥಾನಗಳು ಜಾತಿ ನಿರ್ಮೂಲನೆ ಕೇಂದ್ರಗಳಾಗಲಿ

20hos1p karthika
ಹೊಸನಗರದ ಚಿಕ್ಕಪೇಟೆ ಶ್ರೀ ಮಹಾಗಣಪತಿ ದೇವಾಲಯದಲ್ಲಿ ಏರ್ಪಡಿಸಿದ್ದ ಅಂಗಾರಕ ಸಂಕಷ್ಟಿ ಕಾರ್ತಿಕ ದೀಪೋತ್ಸವದಲ್ಲಿ ಮೂಲೆಗದ್ದೆ ಶ್ರೀಗಳು ಆಶೀರ್ವಚನ ನೀಡಿದರು.
Published on

ಹೊಸನಗರ: ದೇವಸ್ಥಾನಗಳು ಜಾತಿ ನಿರ್ಮೂಲನಾ ಕೇಂದ್ರಗಳಾಗಬೇಕು ಎಂದು ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಹೇಳಿದರು.

ತಾಲೂಕಿನ ಚಿಕ್ಕಪೇಟೆ ಶ್ರೀ ಮಹಾಗಣಪತಿ ದೇವಾಲಯದಲ್ಲಿ ಏರ್ಪಡಿಸಿದ್ದ ಅಂಗಾರಕ ಸಂಕಷ್ಟಿ, ಕಾರ್ತಿಕ ದೀಪೋತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ದೇವಾಲಯಗಳು ಭಕ್ತರನ್ನು ಹೊಂದಿರಬೇಕೇ ಹೊರತು ಜಾತಿಗಳನ್ನಲ್ಲ. ಸರ್ವ ಭಕ್ತರು ಬಂದು ಆರಾಧಿಸುವ ದೇವಾಲಯಗಳಲ್ಲಿ ಮಾತ್ರ ದೇವರು ಸಂತೃಪ್ತಿ ಹೊಂದಲು ಸಾಧ್ಯ ಎಂದು ತಿಳಿಸಿದರು.

ಕಾರ್ತಿಕ ದೀಪೋತ್ಸವಕ್ಕೆ ಪುರಾಣ ಕಾಲದಿಂದಲೂ ಮಹತ್ವದ ಸ್ಥಾನವಿದೆ. ವಿಘ್ನ ನಿವಾರಕ, ಪ್ರಥಮ ಪೂಜಿತ ಗಣಪತಿಗೆ ಮಂಗಳವಾರ ಬರುವ ಸಂಕಷ್ಟಹರ ಚತುರ್ಥಿ ವಿಶಿಷ್ಟ. ಆ ದಿನದ ಕಾರ್ತಿಕ ದೀಪೋತ್ಸವಕ್ಕೆ ವಿಶೇಷ ಶಕ್ತಿಯಿದೆ ಎಂದರು.

ದೀಪ ಎಂದರೆ ಬೆಳಕು. ನಮಗೆ ಬೇಕಿರುವುದು ಸುಜ್ಞಾನದ ಬೆಳಕು. ಹಣತೆ ಉರಿದಷ್ಟೂ ಪರಿಸರ ಆಕರ್ಷಕವಾಗಿರುತ್ತದೆ. ನಮ್ಮಲ್ಲಿರುವ ಸ್ವಾರ್ಥಲಾಲಸೆ ಕತ್ತಲಿನಿಂದ ಹೊರಬರಲು ಬೆಳಕು ಅನಿವಾರ್ಯ. ಅಂತಹ ಮಹತ್ವದ ಬೆಳಕು ಸರ್ವರ ಮನೆ, ಮನಗಳಲ್ಲಿ ಬೆಳಗಬೇಕು ಎಂದು ತಿಳಿಸಿದರು.

ಪ್ರಧಾನ ಅರ್ಚಕ ಸುಬ್ರಹ್ಮಣ್ಯ ನಾವುಡ, ಸೇವಾ ಕಾರ್ಯಕರ್ತ ಗಿರಿಜಮ್ಮ ವೆಂಕಪ್ಪ ಪೂಜಾರಿ, ಚಂಡೆ ಸೇವಕ ಅಭಿ, ಭಕ್ತರಿಗೆ ಉಚಿತ ಕಬ್ಬಿನಹಾಲಿನ ಸೇವೆ ನೀಡಿದ ಅರುಣ ವಿಠಲ ಕುಟುಂಬದವರನ್ನು ಶ್ರೀಗಳು ಆಶೀರ್ವದಿಸಿದರು. ಸರ್ಕಾರಿ ಶಾಲೆ ನಾಲ್ಕನೇ ತರಗತಿ ವಿದ್ಯಾರ್ಥಿನಿ ಹಿತಾ ಕರುಣಾಕರ ಶೆಟ್ಟಿ 101 ಕೌರವರ ಹೆಸರು ಪಟಪಟನೆ ಹೇಳಿ ಗಮನ ಸೆಳೆದಳು. ಶ್ರೀ ಗಣಪತಿ ದೇವರಿಗೆ ಕಾರ್ತಿಕ ಪೂಜೆ, ಅಂಗಾರಕ ಸಂಕಷ್ಟಿ ವಿಶೇಷ ಪೂಜೆ ನೆರವೇರಿಸಲಾಯಿತು.

ತಹಸೀಲ್ದಾರ್ ರಶ್ಮಿ ಹಾಲೇಶ್, ದೇವಸ್ಥಾನ ಸಮಿತಿ ಅಧ್ಯಕ್ಷ ಗಂಗಾಧರ ರಾವ್, ಕಾರ್ಯದರ್ಶಿ ಶ್ರೀಧರ್, ಸಾಗರ ನಗರಸಭೆ ಮಾಜಿ ಸದಸ್ಯ ಸತೀಶಬಾಬು, ಗ್ರಾಪಂ ಉಪಾಧ್ಯಕ್ಷೆ ಸುಮನಾ, ಸದಸ್ಯರಾದ ಕರುಣಾಕರ ಶೆಟ್ಟಿ, ವಿಶ್ವನಾಥ, ಪ್ರಮುಖರಾದ ಶ್ರೀನಿವಾಸ ರಾವ್, ಹರೀಶ ನರಹರಿ ರಾವ್, ಹರೀಶ ವಕ್ರತುಂಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net