ದೇಶಭಕ್ತಿ ಎಲ್ಲರ ಹೃದಯದಲ್ಲಿ ಸೃಜಿಸಲಿ

quiz
ಶಿಕಾರಿಪುರದಲ್ಲಿ ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆಯ ವಿಜೇತರಿಗೆ ಉಪ ತಹಸೀಲ್ದಾರ್ ವಿನಯ್ ಆರಾಧ್ಯ ಬಹುಮಾನ ವಿತರಿಸಿದರು. ಎಚ್.ಡಿ.ಮಧುಕೇಶ್ವರ್, ಆರ್.ರಾಘವೇಂದ್ರ, ರಘು, ಸಂತೋಷ್‌ಕುಮಾರ್ ಇತರರಿದ್ದರು.
Published on

ಶಿಕಾರಿಪುರ: ಹೋರಾಟಗಾರರು ತಮ್ಮ ಬದುಕು ಹಾಗೂ ಪ್ರಾಣ ತ್ಯಾಗ ಮಾಡಿದ್ದರಿಂದ ಭಾರತ ಸ್ವಾತಂತ್ರೃ ಪಡೆಯಲು ಸಾಧ್ಯವಾಗಿದೆ ಎಂದು ಉಪತಹಸೀಲ್ದಾರ್ ವಿನಯ್ ಎಂ. ಆರಾಧ್ಯ ಹೇಳಿದರು.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಆಯೋಜಿಸಿದ್ದ ರಸಪ್ರಶ್ನೆ ಕಾರ್ಯಕ್ರಮದ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ದೇಶಭಕ್ತಿ ಹೇಳಿಕೊಡುವುದಲ್ಲ. ಅದು ಸಹಜವಾಗಿಯೇ ನಮ್ಮ ಹೃದಯಗಳಲ್ಲಿ ಸೃಜಿಸಬೇಕು. ದೇಶವು ಪರಕೀಯರ ದಾಸ್ಯದಲ್ಲಿದ್ದಾಗ ಮುಕ್ತಿಗೊಳಿಸಲು ಮಾಡಿದ ಹೋರಾಟ ಪಾಶ್ಚಿಮಾತ್ಯರ ನಿದ್ದೆಗೆಡಿಸಿತ್ತು. ಹಲವರ ಹೋರಾಟದ ಫಲವಾಗಿ ನಾವಿಂದು ಸ್ವತಂತ್ರರಾಗಿದ್ದೇವೆ. ಹಾಗಾಗಿ ಮೊದಲು ದೇಶ ಎನ್ನುವ ಭಾವನೆ ಬರಬೇಕು ಎಂದರು.
ನಮಗೆ ಅರಿವಿಲ್ಲದಂತೆ ನಮ್ಮ ಬದುಕನ್ನು ಬದಲಿಸುವ ಶಕ್ತಿ ಸಾಹಿತ್ಯಕ್ಕಿದೆ. ಕನ್ನಡ ಸಾಹಿತ್ಯ ಎಂದರೆ ಹಾಲು-ಜೇನಿನ ಮಿಶ್ರಣ ಇದ್ದಂತೆ. ನಮ್ಮದು ಸಾಹಿತ್ಯಕ ಮನಸುಗಳಾಗಬೇಕು. ಕನ್ನಡ, ಸಾಹಿತ್ಯವನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಎಲ್ಲರದು ಎಂದು ತಿಳಿಸಿದರು.
ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ರಘು ಮಾತನಾಡಿ, ಸ್ವಾತಂತ್ರ್ಯ ಹೋರಾಟಕ್ಕೆ ತಾಲೂಕಿನ ಈಸೂರು ಹೋರಾಟಗಾರರ ಕೊಡುಗೆ ಅಪಾರ. ದೇಶದಲ್ಲಿಯೇ ಮೊದಲು ಸ್ವಾತಂತ್ರ್ಯ ಘೋಷಿಸಿಕೊಂಡ ಮೊದಲ ಗ್ರಾಮ ಈಸೂರು. ತಾಲೂಕಿನ ಹಾಗೂ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ರಸಪ್ರಶ್ನೆ ಕಾರ್ಯಕ್ರಮ ಉಪಯುಕ್ತ ಎಂದರು.
ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪಪ್ರಾಚಾರ್ಯ ಶ್ರೀನಿವಾಸ್, ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಬಸವನಗೌಡ ಕೋಣ್ತಿ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎಲ್.ರಾಜು, ಕಸಾಪ ಪದಾಧಿಕಾರಿಗಳಾದ ಪಾರಿವಾಳ ಶಿವಲಿಂಗಪ್ಪ, ಮಂಜಪ್ಪ, ವಸಂತ್, ಸ್ಪರ್ಧೆ ತೀರ್ಪುಗಾರರಾದ ಶಿಕ್ಷಕ ಆರ್.ರಾಘವೇಂದ್ರ, ಸಂತೋಷ್‌ಕುಮಾರ್, ಬಿ.ಶಿವಲಿಂಗಪ್ಪ, ನವೀನ್‌ಕುಮಾರ್, ರಾಜೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net