

ಸಾಗರ: ಲೋಕಸಭಾ ಚುನಾವಣೆಯಲ್ಲಿ ಬಿ.ವೈ.ರಾಘವೇಂದ್ರ ಅವರಿಗೆ ಸಾಗರ ಕ್ಷೇತ್ರದಲ್ಲಿ 26,519 ಮತ ಲೀಡ್ ಬಂದಿದೆ. ಶಾಸಕ ಹಾಗೂ ನಿಗಮದ ಅಧ್ಯಕ್ಷರಾಗಿ ತಮ್ಮ ಪಕ್ಷದ ಅಭ್ಯರ್ಥಿಗೆ ಹೆಚ್ಚು ಮತ ಕೊಡಿಸಲು ವಿಫಲವಾಗಿರುವ ಶಾಸಕ ಗೋಪಾಲಕೃಷ್ಣ ಬೇಳೂರು ನೈತಿಕ ಹೊಣೆ ಹೊತ್ತು ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಹಕ್ರೆ ಒತ್ತಾಯಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎದುರು ಒಂದು ಲಕ್ಷ ಮತಗಳ ಲೀಡ್ ಕೊಡಿಸುತ್ತೇನೆ ಎಂದು ಬೇಳೂರು ಹೇಳಿದ್ದರು. ಇದೀಗ ಕೊಟ್ಟ ಮಾತು ತಪ್ಪಿದ್ದು, ಪಕ್ಷವು ನಿಗಮ ಸ್ಥಾನವನ್ನು ವಾಪಸ್ ಪಡೆಯಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಗೋಪಾಲಕೃಷ್ಣ ಬೇಳೂರು ಶಾಸಕರಾದ ಮೇಲೆ ಅನುದಾನ ತಂದಿಲ್ಲ. ಹರತಾಳು ಹಾಲಪ್ಪ ಶಾಸಕರಾಗಿದ್ದ ಸಂದರ್ಭದಲ್ಲಿ ತಂದಿರುವ ಅನುದಾನಕ್ಕೆ ಮತ್ತೆ ಗುದ್ದಲಿಪೂಜೆ ಮಾಡುತ್ತಿದ್ದಾರೆ. ಶಾಸಕರ ಸಾಧನೆ ಎಂದರೆ ಹೆಚ್ಚುತ್ತಿರುವ ಭ್ರಷ್ಟಾಚಾರ ಎಂದು ದೂರಿದರು.
ಚುನಾವಣೆಯಲ್ಲಿ ಯಾರ ಸಹಾಯ ಇಲ್ಲದೆ ಗೆದ್ದಿದ್ದೇನೆ ಎಂದು ಬಿಂಬಿಸಿಕೊಳ್ಳುವ ಬೇಳೂರಿಗೆ ಕಾಗೋಡು ತಿಮ್ಮಪ್ಪ ಸೇರಿ ಹಿರಿಯರು, ಪಕ್ಷದ ಪ್ರಮುಖರು, ಕಾರ್ಯಕರ್ತರು ಮಾಡಿರುವ ಕೆಲಸ ನೆನಪಿಗೆ ಬರುತ್ತಿಲ್ಲ. ಗೋಪಾಲಕೃಷ್ಣ ಬೇಳೂರಿಗೆ ತಾಕತ್ತಿದ್ದರೆ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಮತ್ತೊಮ್ಮೆ ಸ್ಪರ್ಧೆ ಮಾಡಲಿ, 50 ಸಾವಿರ ಮತ ಪಡೆಯುವುದೂ ಕಷ್ಟ ಎಂದು ಲೇವಡಿ ಮಾಡಿದರು.
ಪ್ರಮುಖರಾದ ಡಾ. ರಾಜನಂದಿನಿ ಕಾಗೋಡು, ಕೆ.ಆರ್.ಗಣೇಶ್‌ಪ್ರಸಾದ್, ಕೆ.ಎಸ್.ಪ್ರಶಾಂತ್, ನಿರ್ಮಲಾ, ನಾಗರಾಜ್ ಮಜ್ಜಿಗೆರೆ, ಅರುಣ್ ಪೂಜಾರಿ, ವಸಂತಕುಮಾರ್, ವಿರೂಪಾಕ್ಷ ಗೌಡ, ಸ್ವಾಮಿಗೌಡ ಸುದ್ದಿಗೋಷ್ಠಿಯಲ್ಲಿದ್ದರು.