

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ (ಫೆ.1) ಸತತ 8ನೇ ಬಾರಿಗೆ ಬಜೆಟ್ ಮಂಡಿಸುವ ಮೂಲಕ ದಾಖಲೆ ನಿರ್ವಿುಸಲಿದ್ದಾರೆ. ಬಜೆಟ್ಪೂರ್ವದ ಸಿದ್ಧತೆ ಹಾಗೂ ಸಮಾಲೋಚನಾ ಸಭೆಗಳಲ್ಲಿ ಅವರು ಆಯಾ ರಂಗದ ಬೇಡಿಕೆ, ಕಳವಳಗಳನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಇದಕ್ಕೆಲ್ಲ ಅವರ ಸ್ಪಂದನೆ ಹೇಗಿರುತ್ತದೆ ಎಂಬುದು ಕುತೂಹಲ ಮೂಡಿಸಿದ್ದರೂ, ಹಳೆಯ ನಿರೀಕ್ಷೆಗಳು, ಕೆಲ ಪ್ರಮುಖ ಬೇಡಿಕೆಗಳು ಈ ಬಾರಿ ಈಡೇರುವ ನಿರೀಕ್ಷೆ ಇದೆ ಎಂದಿವೆ ಮೂಲಗಳು.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಮೊತ್ತ ದ್ವಿಗುಣ: ಪಿಎಂ ಕಿಸಾನ್ ಸಮ್ಮಾನ್ ನಿಧಿಯಡಿ ರೈತರಿಗೆ ಪ್ರಸಕ್ತ ವಾರ್ಷಿಕ 6 ಸಾವಿರ ರೂ.ಗಳ ಆರ್ಥಿಕ ನೆರವು ನೀಡಲಾಗುತ್ತಿದೆ. ಡಿಬಿಟಿ ಮೂಲಕ ಮೂರು ಕಂತುಗಳಲ್ಲಿ ತಲಾ 2 ಸಾವಿರ ರೂ. ವರ್ಗಾವಣೆಯಾಗುತ್ತಿದೆ. ಈ ಬಜೆಟ್ನಲ್ಲಿ ಈ ಮೊತ್ತವನ್ನು 6ರಿಂದ 12 ಸಾವಿರ ರೂ.ಗೆ ಹೆಚ್ಚಿಸುವ ಸಾಧ್ಯತೆ ಇದೆ ಎಂದಿದ್ದಾರೆ ಕೃಷಿ ತಜ್ಞರು. ಕೃಷಿ ಕ್ಷೇತ್ರದ ವೆಚ್ಚ ಹೆಚ್ಚಳವಾಗಿದ್ದು, ರೈತರ ಜೀವನವೆಚ್ಚ ಕೂಡ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕಿಸಾನ್ ಸಮ್ಮಾನ್ ನಿಧಿ ಮೊತ್ತವನ್ನು ಹೆಚ್ಚಿಸಬೇಕೆಂಬ ಬೇಡಿಕೆ ಕೇಳಿಬರುತ್ತಲೇ ಇದೆ. ಈ ಯೋಜನೆಯಡಿ ಪ್ರಸಕ್ತ 9.4 ಕೋಟಿಗಿಂತ ಅಧಿಕ ರೈತರು ಲಾಭ ಪಡೆಯುತ್ತಿದ್ದಾರೆ. ಸಂಸತ್ತಿನ ಸ್ಥಾಯಿ ಸಮಿತಿ ಕೂಡ ಕಿಸಾನ್ ಸಮ್ಮಾನ್ ನಿಧಿಯನ್ನು 12 ಸಾವಿರ ರೂ.ಗೆ ಹೆಚ್ಚಿಸುವ ಶಿಫಾರಸು ಮಾಡಿದೆ ಎಂಬುದು ಗಮನಾರ್ಹ.
ಆಯುಷ್ಮಾನ್ ಭಾರತ್ ವ್ಯಾಪ್ತಿ ಹೆಚ್ಚಳ: ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಮತ್ತು 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಪ್ರಸಕ್ತ ಆಯುಷ್ಮಾನ್ ಭಾರತ್ ಯೋಜನೆಯಡಿ ಉಚಿತ ವೈದ್ಯಕೀಯ ಚಿಕಿತ್ಸೆಯ ಲಾಭ ಸಿಗುತ್ತಿದೆ. ಈ ಯೋಜನೆಯಡಿ 36 ಕೋಟಿಗೂ ಅಧಿಕ ಕಾರ್ಡ್ಗಳನ್ನು ಮಾಡಲಾಗಿದೆ. ಮತ್ತಷ್ಟು ಜನರಿಗೆ ಆರೋಗ್ಯ ಸೇವೆಯನ್ನು ಪರಿಣಾಮಕಾರಿಯಾಗಿ ಒದಗಿಸುವ ದೃಷ್ಟಿಯಿಂದ ಯೋಜನೆಯ ವ್ಯಾಪ್ತಿಯನ್ನು ಹೆಚ್ಚಿಸಿ, ಮತ್ತಷ್ಟು ಜನರನ್ನು ಒಳಗೊಳ್ಳುವ ಘೋಷಣೆಯನ್ನು ಬಜೆಟ್ನಲ್ಲಿ ಮಾಡುವ ನಿರೀಕ್ಷೆ ಇದೆ.
ಗ್ರಾಮೀಣ ಭಾಗದತ್ತ ಚಿತ್ತ: ಗ್ರಾಮೀಣ ಭಾಗದಲ್ಲಿ ಸರ್ಕಾರಿ ಸೇವೆಯ ಗುಣಮಟ್ಟವನ್ನು ಹೆಚ್ಚಿಸುವುದು, ಸರ್ಕಾರಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ತಲುಪಿಸುವುದು ಸರ್ಕಾರದ ಉದ್ದೇಶವಾಗಿದೆ. ಇದಕ್ಕಾಗಿ, ‘ಏಕೀಕೃತ ರಾಷ್ಟ್ರೀಯ ಉದ್ಯೋಗ ನೀತಿ’ಯನ್ನು ಅನುಷ್ಠಾನಕ್ಕೆ ತರಲು ಸರ್ಕಾರ ಚಿಂತನೆ ನಡೆಸಿದ್ದು, ಇದರ ನೀಲಿನಕ್ಷೆ ಬಜೆಟ್ನಲ್ಲಿ ವಿವರಿಸಬಹುದು. ‘ಏಕೀಕೃತ ರಾಷ್ಟ್ರೀಯ ಉದ್ಯೋಗ ನೀತಿ’ಯನ್ನು ಜಾರಿಗೆ ತರುವಂತೆ ಸಿಐಐ ಕೂಡ ಆಗ್ರಹಿಸಿದ್ತೆ. ಗ್ರಾಮೀಣ ಭಾಗದ ಸರ್ಕಾರಿ ಕಚೇರಿಗಳ ಸಿಬ್ಬಂದಿಗೆ ಇಂಟರ್ನ್ಶಿಪ್ ಪ್ರೋಗ್ರಾಮ್ ಆರಂಭಿಸುವ ಘೋಷಣೆ ಬಜೆಟ್ನಲ್ಲಿ ಆಗುವ ನಿರೀಕ್ಷೆ ಇದ್ದು, ಪದವಿ ಪಡೆದ ಯುವಕರಿಗೆ ಈ ತರಬೇತಿ ನೀಡುವ ಯೋಜನೆ ಇದೆ. ಭಾರತೀಯ ಯುವಕರಿಗೆ ವಿದೇಶಗಳಲ್ಲಿ ಉದ್ಯೋಗ ಕೊಡಿಸಲು ನೆರವಾಗುವ ದೃಷ್ಟಿಯಲ್ಲಿ ಇಂಟರ್ನ್ಯಾಷನಲ್ ಮೊಬಿಲಿಟಿ ಅಥಾರಿಟಿ ರೂಪಿಸುವ ನಿರೀಕ್ಷೆ ಇದೆ. ಕೌಶಲ ಮತ್ತು ಉದ್ಯೋಗಸೃಷ್ಟಿ ಪ್ರಮಾಣ ಹೆಚ್ಚಿಸಲು ನವೋದ್ಯಮಗಳಿಗೆ ಮತ್ತಷ್ಟು ಪ್ರೋತ್ಸಾಹಕ ಕ್ರಮಗಳು ಘೋಷಣೆಯಾಗಬಹುದು.
ವೃತ್ತಿ ತರಬೇತಿ ಯೋಜನೆಯ ವ್ಯಾಪ್ತಿ ವಿಸ್ತರಣೆ: ‘ಪ್ರಧಾನಮಂತ್ರಿ ವೃತ್ತಿ ತರಬೇತಿ ಯೋಜನೆ’ಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2024ರ ಜುಲೈನಲ್ಲಿ ಮಂಡನೆಯಾದ ಬಜೆಟ್ನಲ್ಲಿ ಘೋಷಿಸಿದ್ದರು. ಈ ಬಾರಿ ಈ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸುವ ಸಾಧ್ಯತೆ ಇದೆ. ಈಗಿರುವ ನಿಯಮಗಳ ಪ್ರಕಾರ ಈ ಯೋಜನೆಯಲ್ಲಿ ಭಾಗಿಯಾಗಲು 500 ಕಂಪನಿಗಳಿಗೆ ಅವಕಾಶ ಇದ್ದು, ಯೋಜನೆಯಲ್ಲಿ ಭಾಗಿಯಾಗಲು ಕಂಪನಿಗಳು ಹೊಂದಿರುವ ಅರ್ಹತೆಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ ತರುವ ಸಾಧ್ಯತೆ ಇದೆ. ವಿದ್ಯಾರ್ಥಿಗಳ ಭಾಗವಹಿಸುವಿಕೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಅವರ ಅರ್ಹತೆಗೆ ಸಂಬಂಧಿಸಿದ ನಿಯಮಗಳಲ್ಲೂ ಬದಲಾವಣೆ ತರಲು ಸರ್ಕಾರ ಮುಂದಾಗಿದೆ.
ಹೆಚ್ಚಲಿವೆ ವೈದ್ಯಕೀಯ ಸೀಟುಗಳು: ಆರೋಗ್ಯ ಕ್ಷೇತ್ರದ ಅನುದಾನವನ್ನು ಈ ಬಾರಿ ಶೇಕಡ 10ರಷ್ಟು ಹೆಚ್ಚಿಸುವ ಸಾಧ್ಯತೆ ಇದೆ. 2024-25ರ ಬಜೆಟ್ನಲ್ಲಿ ಆರೋಗ್ಯ ಕ್ಷೇತ್ರಕ್ಕೆ 90,958 ಕೋಟಿ ರೂ.ಗಳನ್ನು ಮೀಸಲಿಡಲಾಗಿತ್ತು. ಈ ಬಾರಿ -ಠಿ;1 ಲಕ್ಷ ಕೋಟಿ ಮೀರುವ ನಿರೀಕ್ಷೆ ಇದೆ. ಆರೋಗ್ಯ ಮೂಲಸೌಕರ್ಯ ಹೆಚ್ಚಿಸಲು ಅನುದಾನ ಹೆಚ್ಚಿಸುವ ಅಗತ್ಯವಿದೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದು, ಅದಕ್ಕೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ದೇಶದಲ್ಲಿ ಗುಣಮಟ್ಟದ ಶಿಕ್ಷಣವನ್ನು ಖಾತ್ರಿಪಡಿಸ ಲಾಗುವುದು ಮತ್ತು ಭಾರತವನ್ನು ಜಗತ್ತಿನ ಎಜುಕೇಶನ್ ಹಬ್ ಆಗಿ ರೂಪಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ 2024ರ ಸ್ವಾತಂತ್ರೊ್ಯೕತ್ಸವ ಭಾಷಣದಲ್ಲಿ ಹೇಳಿದ್ದರು. ಇದಕ್ಕೆ ಪೂರಕವಾಗಿ ಮುಂದಿನ ಐದು ವರ್ಷಗಳಲ್ಲಿ ವೈದ್ಯಕೀಯ ಕಾಲೇಜುಗಳಲ್ಲಿ ಹೊಸದಾಗಿ 75 ಸಾವಿರ ಸೀಟುಗಳನ್ನು ಹೆಚ್ಚಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಈ ಕುರಿತಾದ ನೀಲಿನಕ್ಷೆ ಬಜೆಟ್ನಲ್ಲಿ ಮಂಡನೆಯಾಗಬಹುದು. ಅಲ್ಲದೆ, ಸರ್ಕಾರ ಚಿಕಿತ್ಸಾ ವೆಚ್ಚವನ್ನು ಕಡಿಮೆಗೊಳಿಸುವ ಬಗ್ಗೆ ಯೋಜನೆ ರೂಪಿಸುತ್ತಿದೆ. ಈ ನಿಟ್ಟಿನಲ್ಲಿ ಎಂಆರ್ಐನಂಥ ಚಿಕಿತ್ಸಾ ಉಪಕರಣಗಳ ಮೇಲೆ ಆಮದು ಸುಂಕ ತಗ್ಗಿಸಲು ಚಿಂತನೆ ನಡೆಸಿದೆ. ಚಿಕಿತ್ಸಾ ಉಪಕರಣಗಳ ಮೇಲೆ ಪ್ರಸ್ತುತ ಶೇ. 7.5ರಿಂದ ಶೇ.10ರವರೆಗೆ ಕಸ್ಟಮ್್ಸ ಡ್ಯೂಟಿ ವಿಧಿಸಲಾಗುತ್ತಿದೆ.
ಕರ್ನಾಟಕದಿಂದ ಹಲವು ಬೇಡಿಕೆ: ಕೇಂದ್ರ ಬಜೆಟ್ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮುಂದೆ ಬೇಡಿಕೆಗಳ ದೊಡ್ಡ ಪಟ್ಟಿಯನ್ನೇ ಇಟ್ಟಿದ್ದಾರೆ. ಕೇಂದ್ರ ಸರ್ಕಾರದಿಂದ ನೆರವು ನೀಡುವ ವಿವಿಧ ಯೋಜನೆಗಳಲ್ಲಿ ಮೊದಲು ರಾಜ್ಯ ಸರ್ಕಾರ ಭರಿಸಿ ನಂತರ ಕೇಂದ್ರದಿಂದ ಪಡೆದುಕೊಳ್ಳುವ ನಿಯಮ ಇದ್ದು, ಇದನ್ನು ಬದಲಿಸಿ ಮೊದಲು ಮುಂಗಡ ಪಾವತಿಸುವಂತಾಗಬೇಕು, ಆಶಾ, ಅಂಗನವಾಡಿ ಕಾರ್ಯಕರ್ತೆಯರ ವೇತನ ಪಾಲನ್ನು ಹೆಚ್ಚಿಸಬೇಕು, ಸಾಮಾಜಿಕ ಪಿಂಚಣಿ ಮೊತ್ತ ಹೆಚ್ಚಿಸಬೇಕೆಂದು ಕೋರಿದ್ದಾರೆ. ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಕೇಂದ್ರ ತನ್ನ ಪಾಲನ್ನು ಹೆಚ್ಚಿಸಬೇಕು, ಬೆಂಬಲ ಬೆಲೆ ಯೋಜನೆಯ ಬಾಕಿಯನ್ನು ತಕ್ಷಣ ಬಿಡುಗಡೆ ಮಾಡಬೇಕು, 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಬಾಕಿ ಇರುವ ಹಣವನ್ನು ಬಿಡುಗಡೆ ಮಾಡಬೇಕು, ಕೇಂದ್ರ ಸಂಗ್ರಹಿಸುವ ಸೆಸ್ ಮತ್ತು ಸರ್ಚಾರ್ಜ್ ಅನ್ನು ರಾಜ್ಯಕ್ಕೂ ಹಂಚಿಕೆ ಮಾಡಬೇಕು, ನಗರ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದ್ದು, ಅನುದಾನಕ್ಕೆ ಕೋರಲಾಗಿದೆ. ವಸತಿ ಯೋಜನೆಗಳಲ್ಲಿ ಕೇಂದ್ರ ಸರ್ಕಾರದ ಪಾಲು -ಠಿ; 1.50 ಲಕ್ಷದಿಂದ -ಠಿ; 5 ಲಕ್ಷಕ್ಕೆ ಹೆಚ್ಚಿಸಬೇಕು, ಎಸ್ಕಾಂಗಳಿಗೆ ಆರ್ಥಿಕ ಬೆಂಬಲ ನೀಡಬೇಕು, ರಾಜ್ಯದ ಹಿಂದುಳಿದ ಪ್ರದೇಶದ ಅಭಿವೃದ್ಧಿಗೆ ವಿಶೇಷ ಅನುದಾನ ಕೊಡಬೇಕು, ಪಶ್ಚಿಮ ಘಟ್ಟದ ಸಂರಕ್ಷಣೆಗೆ 10 ಸಾವಿರ ಕೋಟಿ ರೂ. ಒದಗಿಸಬೇಕು, ಭದ್ರಾ ಮೇಲ್ದಂಡೆ ಯೋಜನೆಗೆ ಐದು ಸಾವಿರ ಕೋಟಿ ರೂ. ಕೊಡುವುದಾಗಿ ಘೋಷಿಸಿದ್ದರೂ ಹಣ ಬಿಡುಗಡೆ ಮಾಡಿಲ್ಲ, ಈಗಲಾದರೂ ಬಿಡುಗಡೆ ಮಾಡಬೇಕು, ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಪರಿಗಣಿಸಬೇಕು, ಮೇಕೆದಾಟು, ಕಳಸಾಬಂಡೂರಿ ಯೋಜನೆಗೆ ಅನುಮತಿ ಕೊಡಬೇಕು, ರಸ್ತೆ ಹಾಗೂ ರೈಲ್ವೆ ಯೋಜನೆಗಳಲ್ಲಿ ಭೂ ಸ್ವಾಧೀನದಲ್ಲಿ ಶೇ.50ರಷ್ಟು ವೆಚ್ಚವನ್ನು ಕೇಂದ್ರ ಭರಿಸಬೇಕು, ಅತಿವೃಷ್ಟಿ ಪರಿಹಾರವನ್ನು ಸರಿಯಾದ ಸಮಯಕ್ಕೆ ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ.
ಇಂದಿನಿಂದ ಬಜೆಟ್ ಅಧಿವೇಶನ: ರಾಷ್ಟ್ರಪತಿ ದ್ರೌಪದಿ ಮುಮು ಅವರ ಭಾಷಣದ ಮೂಲಕ ಸಂಸತ್ತಿನ ಬಜೆಟ್ ಅಧಿವೇಶನ ಇಂದು (ಜ.31) ಆರಂಭಗೊಳ್ಳಲಿದೆ. ನೂತನ ಸಂಸತ್ ಭವನದ ಲೋಕಸಭೆಯ ಸಭಾಂಗಣದಲ್ಲಿ ಉಭಯ ಸದನಗಳನ್ನು ಉದ್ದೇಶಿಸಿ ಮುಮು ಮಾತನಾಡಲಿದ್ದಾರೆ. ಆರ್ಥಿಕ ಸಮೀಕ್ಷಾ ವರದಿಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಮಂಡಿಸಲಿದ್ದಾರೆ. ಫೆ.1ರಂದು (ಶನಿವಾರ) 2025-26ನೇ ಹಣಕಾಸು ವರ್ಷದ ಬಜೆಟ್ ಮಂಡನೆಯಾಗಲಿದೆ. ರಾಷ್ಟ್ರಪತಿ ಭಾಷಣದ ಮೇಲೆ ಚರ್ಚೆ ಸೋಮವಾರದಿಂದ ನಡೆಯಲಿದೆ. ಲೋಕಸಭೆಯಲ್ಲಿ ಫೆ.3 ಮತ್ತು 4ರಂದು ಹಾಗೂ ರಾಜ್ಯಸಭೆಯಲ್ಲಿ ಚರ್ಚೆಗೆ ಮೂರು ದಿನಗಳ ಅವಕಾಶ ನೀಡಲಾಗಿದೆ. ಚರ್ಚೆಗೆ ಪ್ರಧಾನಿ ನರೇಂದ್ರ ಮೋದಿ ಫೆ.6ರಂದು ಉತ್ತರಿಸುವ ಸಾಧ್ಯತೆ ಇದೆ. ಬಜೆಟ್ ಅಧಿವೇಶನದ ಮೊದಲ ಭಾಗ ಜನವರಿ 31ರಿಂದ ಫೆಬ್ರವರಿ 13ರವರೆಗೆ ನಡೆಯಲಿದೆ. ವಿವಿಧ ಇಲಾಖೆಗಳ ಸಚಿವರಿಂದ ಅನುದಾನ ಬೇಡಿಕೆ ಕುರಿತು ಮಾರ್ಚ್ 10ರಿಂದ ಚರ್ಚೆ ನಡೆಯಲಿದೆ. ಏಪ್ರಿಲ್ 4ರಂದು ಬಜೆಟ್ ಅಧಿವೇಶನಕ್ಕೆ ತೆರೆ ಬೀಳಲಿದೆ. ಹೀಗಾಗಿ ಜ.31ರಿಂದ ಏಪ್ರಿಲ್ 4ರ ಅವಧಿಯಲ್ಲಿ 27 ದಿನಗಳ ಕಾಲ ಚರ್ಚೆ ನಡೆಯಲಿದೆ.
ಪಿಂಚಣಿ ಮೊತ್ತ ಏರಿಕೆ: ಅಟಲ್ ಪಿಂಚಣಿ ಯೋಜನೆ (ಎಪಿವೈ) ಯಡಿ ಕುಟುಂಬ ಪಿಂಚಣಿ ಮಾಸಿಕ ಗರಿಷ್ಠ 5 ಸಾವಿರ ರೂ.ವರೆಗೆ ಮಾತ್ರ ದೊರೆಯುತ್ತಿದೆ. ಈಗಿನ ಬೆಲೆಯೇರಿಕೆ, ಹಣದುಬ್ಬರ ಪ್ರಮಾಣವನ್ನು ಗಮನದಲ್ಲಿ ಇರಿಸಿಕೊಂಡು ಇದನ್ನು 10 ಸಾವಿರ ರೂ.ಗೆ ಹೆಚ್ಚಿಸುವ ಸಾಧ್ಯತೆ ಇದೆ. ಈವರೆಗೆ 7 ಕೋಟಿಗೂ ಅಧಿಕ ಜನರು ಅಟಲ್ ಪಿಂಚಣಿ ಯೋಜನೆಯಡಿ ನೋಂದಣಿ ಮಾಡಿಕೊಂಡಿದ್ದಾರೆ.