ಪಾಕ್​ ರಾಜಕಾರಣಿಗಳೊಂದಿಗೆ ಕಾಣಿಸಿಕೊಂಡ ಪಹಲ್ಗಾಮ್​ ಉಗ್ರ ದಾಳಿ ಹಿಂದಿರುವ ಮಾಸ್ಟರ್​ ಮೈಂಡ್​! Pahalgam Terror Attack

Pahalgam Terror Attack
Published on

Pahalgam Terror Attack : ಏಪ್ರಿಲ್​ 22ರಂದು ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಹಿಂದಿರುವ ಮಾಸ್ಟರ್ ಮೈಂಡ್ ಎಂದು ಹೇಳಲಾಗುವ ಲಷ್ಕರ್-ಇ-ತೊಯ್ಬಾ (ಎಲ್‌ಇಟಿ) ಉಗ್ರ ಸಂಘಟನೆಯ ಕಮಾಂಡರ್ ಸೈಫುಲ್ಲಾ ಕಸೂರಿ ಬುಧವಾರ (ಮೇ 28) ಸಾರ್ವಜನಿಕವಾಗಿ ಮತ್ತೆ ಕಾಣಿಸಿಕೊಂಡಿದ್ದಾನೆ. ಪಾಕಿಸ್ತಾನಿ ರಾಜಕೀಯ ನಾಯಕರು ಮತ್ತು ಇತರ ವಾಂಟೆಡ್ ಭಯೋತ್ಪಾದಕರೊಂದಿಗೆ ರಾಜಕೀಯ ಸಮಾವೇಶದಲ್ಲಿ ಕಸೂರಿ ವೇದಿಕೆಯನ್ನು ಹಂಚಿಕೊಂಡಿದ್ದಾನೆ.

ಪಾಕಿಸ್ತಾನ ತನ್ನ ಪರಮಾಣು ಪರೀಕ್ಷೆಗಳ ವಾರ್ಷಿಕ ಸ್ಮರಣಾರ್ಥವಾಗಿ ಪಂಜಾಬ್ ಪ್ರಾಂತ್ಯದ ಕಸೂರ್‌ನಲ್ಲಿ ಪಾಕಿಸ್ತಾನ್ ಮರ್ಕಜಿ ಮುಸ್ಲಿಂ ಲೀಗ್ (ಪಿಎಂಎಂಎಲ್) ಆಯೋಜಿಸಿದ್ದ ಸಮಾವೇಶದಲ್ಲಿ ಪ್ರಚೋದನಕಾರಿ ಭಾಷಣಗಳು ಮತ್ತು ಭಾರತ ವಿರೋಧಿ ಘೋಷಣೆಗಳನ್ನು ಕೂಗಲಾಗಿದೆ. ಎಲ್‌ಇಟಿ ಸಂಸ್ಥಾಪಕ ಹಫೀಜ್ ಸಯೀದ್ ಪುತ್ರ ಮತ್ತು ಭಾರತದಿಂದ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟ ತಲ್ಹಾ ಸಯೀದ್ ಕೂಡ ಈ ಸಮಾವೇಶದಲ್ಲಿ ಹಾಜರಿದ್ದನು.

ಸಮಾವೇಶದಲ್ಲಿ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದ ಕಸೂರಿ, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಎಂದು ನನ್ನನ್ನು ದೂಷಿಸಲಾಯಿತು. ಈಗ ನನ್ನ ಹೆಸರು ಇಡೀ ಜಗತ್ತಿನಲ್ಲಿ ಪ್ರಸಿದ್ಧವಾಗಿದೆ ಎಂದನು. ಅಲ್ಲದೆ, ಅಲಹಾಬಾದ್‌ನಲ್ಲಿ "ಮುದಸ್ಸಿರ್ ಶಹೀದ್" ಹೆಸರಿನಲ್ಲಿ ಒಂದು ಕೇಂದ್ರ, ರಸ್ತೆ ಮತ್ತು ಆಸ್ಪತ್ರೆಯನ್ನು ನಿರ್ಮಿಸುವ ಯೋಜನೆಯನ್ನು ಘೋಷಿಸಿದನು.

ಪಾಕ್​ ಗುಪ್ತಚರ ಮೂಲಗಳ ಪ್ರಕಾರ, ಪಹಲ್ಗಾಮ್ ಹತ್ಯಾಕಾಂಡದ ನಂತರ ಭಾರತ ನಡೆಸಿದ ಪ್ರತೀಕಾರದ ಆಪರೇಷನ್ ಸಿಂಧೂರ ದಾಳಿಯಲ್ಲಿ ಹತ್ಯೆಯಾದ ಹಲವಾರು ಉನ್ನತ ಮಟ್ಟದ ಭಯೋತ್ಪಾದಕ ಕಾರ್ಯಕರ್ತರಲ್ಲಿ ಮುದಸ್ಸಿರ್ ಅಹ್ಮದ್ ಕೂಡ ಒಬ್ಬ.

ಇನ್ನು ಈ ಸಮಾವೇಶದಲ್ಲಿ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಪಟ್ಟಿಯಲ್ಲಿ 32ನೇ ಸ್ಥಾನದಲ್ಲಿರುವ ತಲ್ಹಾ ಸಯೀದ್, ಉದ್ರಿಕ್ತ ಭಾಷಣ ಮಾಡಿದನು. ಪಾಕಿಸ್ತಾನದ 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಲಾಹೋರ್‌ನ NA-122 ಸ್ಥಾನದಿಂದ ಸಂಸತ್ತಿಗೆ ಸ್ಪರ್ಧಿಸಿ ಸೋಲುಂಡ ಸಯೀದ್, ನಿಷೇಧಿತ ಎಲ್‌ಇಟಿಯ ರಾಜಕೀಯ ರಂಗವೆಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟ ಪಿಎಂಎಂಎಲ್‌ನೊಂದಿಗೆ ತನ್ನ ಸಂಬಂಧವನ್ನು ಮುಂದುವರೆಸಿದ್ದಾನೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net