

Jamal Siddiqui : ಇಸ್ಲಾಂಗಿಂತ ಮೊದಲೇ ಸನಾತನ ಧರ್ಮ ಹುಟ್ಟಿದ್ದು ಎಂದು ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಜಮಾಲ್ ಸಿದ್ದಿಕಿ ಹೇಳಿದ್ದಾರೆ.
ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸಿದ್ದಿಕಿ, ಧರ್ಮದ ಮೂಲಗಳು, ಇಸ್ಲಾಮಿಕ್ ಸಂಪ್ರದಾಯದಲ್ಲಿ ಹಿಂದೂ ದೇವತೆಗಳ ಸ್ಥಾನಮಾನ ಮತ್ತು ಭಾರತದ ವೈವಿಧ್ಯಮಯ ಸಮುದಾಯಗಳ ಹೆಣೆದುಕೊಂಡಿರುವ ಪರಂಪರೆಯ ಬಗ್ಗೆ ಗಮನಾರ್ಹವಾದ ಹೇಳಿಕೆಗಳನ್ನು ನೀಡಿದ್ದಾರೆ.
ಸನಾತಾನ ಧರ್ಮವು ಇಸ್ಲಾಂ ಧರ್ಮಕ್ಕಿಂತ ಬಹಳ ಹಿಂದೆಯೇ ಬಂದಿತು. ಸನಾತನ ಧರ್ಮವು ನಾಗರಿಕತೆಯ ಅಡಿಪಾಯ. ಎಲ್ಲಾ ಮುಸ್ಲಿಮರು ಭಗವಾನ್ ರಾಮನ ವಂಶಸ್ಥರು ಎಂದು ಜಮಾಲ್ ಸಿದ್ದಿಕಿ ಹೇಳಿದ್ದಾರೆ. ಅಲ್ಲದೆ, ರಾಮ ಮತ್ತು ಕೃಷ್ಣರಲ್ಲಿ ನಂಬಿಕೆಯಿಲ್ಲದ ಮುಸ್ಲಿಮರನ್ನು ಮುಸ್ಲಿಮರು ಎಂದು ಕರೆಯಲಾಗುವುದಿಲ್ಲ. ಈ ಪೂಜ್ಯ ವ್ಯಕ್ತಿಗಳು ಇಸ್ಲಾಮಿಕ್ ಆಧ್ಯಾತ್ಮಿಕ ಪರಂಪರೆಯಲ್ಲಿ ಸ್ಥಾನ ಹೊಂದಿರಬಹುದು ಎಂದು ಸಿದ್ದಿಕಿ ಪ್ರತಿಪಾದಿಸಿದ್ದಾರೆ.
ಸಿದ್ದಿಕಿ ತಮ್ಮ ಹೇಳಿಕೆಗಳನ್ನು ಇಸ್ಲಾಮಿಕ್ ದೇವತಾಶಾಸ್ತ್ರವನ್ನು ಆಧಾರವಾಗಿಟ್ಟುಕೊಂಡು, ಇಸ್ಲಾಂ ಒಬ್ಬ ಪ್ರವಾದಿಯನ್ನು ಮಾತ್ರವಲ್ಲ, ಅನೇಕ ಪ್ರವಾದಿಗಳನ್ನು ಗುರುತಿಸುತ್ತದೆ ಎಂದು ವಿವರಿಸಿದರು. ಕುರಾನ್‌ನಲ್ಲಿ 25 ಪ್ರವಾದಿಗಳ ಬಗ್ಗೆ ಉಲ್ಲೇಖಿಸಲಾಗಿದೆ ಆದರೆ, ಹದೀಸ್ ಮತ್ತು ಸಂಪ್ರದಾಯದ ಪ್ರಕಾರ, ಪ್ರಪಂಚದಾದ್ಯಂತ 1,24,000 ಪ್ರವಾದಿಗಳನ್ನು ಕಳುಹಿಸಲಾಗಿದೆ. ಭಗವಾನ್ ರಾಮ ಮತ್ತು ಶ್ರೀಕೃಷ್ಣ ಕೂಡ ಅವರಲ್ಲಿ ಇರಲಿಲ್ಲ ಎಂದು ನಾವು ಹೇಗೆ ಹೇಳಬಹುದು ಎಂದರು. ಅವರು ದೇವರ ಸಂದೇಶವಾಹಕರಾಗಿರಬಹುದು ಎಂದು ಹೇಳಿದರು.
ಎಲ್ಲಾ ಮುಸ್ಲಿಮರು ಭಗವಾನ್ ರಾಮನ ವಂಶಸ್ಥರು ಎಂದು ಹೇಳುವ ಮೂಲಕ ವಂಶಾವಳಿಯನ್ನು ಸಹ ಪ್ರತಿಪಾದಿಸಿದರು. ಭಾರತದಲ್ಲಿ ಮುಸ್ಲಿಂ ಸಮುದಾಯದ ಬೇರುಗಳು ಪ್ರಾಚೀನ ಹಿಂದೂ ಸಂಪ್ರದಾಯದೊಂದಿಗೆ ಹೆಣೆದುಕೊಂಡಿವೆ ಎಂಬುದನ್ನು ಇದು ಸೂಚಿಸುತ್ತದೆ. ಪೂಜಾ ವಿಧಾನಗಳು ಬದಲಾಗಿರಬಹುದು ಆದರೆ, ಆಧಾರವಾಗಿರುವ ಸಂಸ್ಕೃತಿ ಸ್ಥಿರವಾಗಿ ಉಳಿದಿದೆ. ನಮ್ಮ ಗುರುತು ಇನ್ನೂ ಸನಾತನ ಎಂದು ಸಿದ್ದಿಕಿ ಹೇಳಿದರು. (ಏಜೆನ್ಸೀಸ್)