ಮಕ್ಕಳ ಪ್ರತಿಭೆ ಗುರುತಿಸಿಸುವ ಕೆಲಸವಾಗಲಿ

invitation
ಶಿವಮೊಗ್ಗದಲ್ಲಿ ನಡೆಯಲಿರುವ ರಾಜ್ಯಮಟ್ಟದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಕೆ.ಪಿ.ಮಾನ್ವಿ ಕರೂರು ಅವರನ್ನು ಆಹ್ವಾನಿಸಲಾಯಿತು. ಡಿ.ಮಂಜುನಾಥ್, ವಿ.ಗಣೇಶ್, ವಿ.ಟಿ.ಸ್ವಾಮಿ, ಕಸ್ತೂರಿ ಸಾಗರ್ ಇತರರಿದ್ದರು.
Published on

ಸಾಗರ: ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಪ್ರತ್ಯೇಕವಾಗಿ ನಡೆಸುವುದರಿಂದ ಅವರ ಪ್ರತಿಭೆಗೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟಂತಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಹೇಳಿದರು.

ಜೂ.11ರಂದು ನಡೆಯಲಿರುವ ರಾಜ್ಯ ಮಟ್ಟದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಕೆ.ಪಿ.ಮಾನ್ವಿ ಕರೂರು ಅವರನ್ನು ಸ್ವಾಗತಿಸಲು ಸಾಗರದ ಉರ್ದು ಪ್ರೌಢಶಾಲೆ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಬಾರಿ ಶಿವಮೊಗ್ಗದ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಸಹಯೋಗದಲ್ಲಿ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ಸಮ್ಮೇಳನದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಪ್ರತಿಭಾವಂತ ಮಕ್ಕಳು ಪಾಲ್ಗೊಂಡು ಸಾಹಿತ್ಯ ಪ್ರತಿಭೆ ಪ್ರದರ್ಶನ ಮಾಡುವರು. ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳುವುದು ಒಂದು ಹೆಮ್ಮೆಯ ಸಂಗತಿ. ಖ್ಯಾತ ಇತಿಹಾಸ ಸಂಶೋಧಕ ಡಾ. ಕೆಳದಿ ಗುಂಡಾ ಜೋಯಿಸ್ ಇತಿಹಾಸಕ್ಕೆ ನೀಡಿದ ಕೊಡುಗೆ ದೊಡ್ಡದು. ಕೇಂದ್ರ ಸರ್ಕಾರ ಅವರಿಗೆ ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ನೀಡಬೇಕು ಎಂದು ಒತ್ತಾಯಿಸಿದರು.
ಸಮ್ಮೇಳನದ ಸರ್ವಾಧ್ಯಕ್ಷೆ ಕೆ.ಪಿ.ಮಾನ್ವಿ ಮಾತನಾಡಿ, ಸರ್ವಾಧ್ಯಕ್ಷೆಯಾಗಿ ನನ್ನನ್ನು ಆಯ್ಕೆ ಮಾಡಿರುವುದು ಶರಾವತಿ ಮುಳುಗಡೆ ಸಂತ್ರಸ್ತರಿಗೆ ನೀಡಿದ ಗೌರವವಾಗಿದೆ. ಅನೇಕ ಸವಾಲುಗಳ ನಡುವೆ ಶರಾವತಿ ಹಿನ್ನೀರು ಪ್ರದೇಶದ ಜನರು ವಾಸ ಮಾಡುತ್ತಿದ್ದಾರೆ. ಅವರ ಸಮಸ್ಯೆಗಳ ಮೇಲೆ ನನ್ನ ಸಾಹಿತ್ಯದ ಮೂಲಕ ಬೆಳಕು ಚೆಲ್ಲಬೇಕು ಎನ್ನುವ ಉದ್ದೇಶ ನನ್ನದು ಎಂದರು.
ಡಾ. ಕೆಳದಿ ಗುಂಡಾ ಜೋಯಿಸ್ ನುಡಿನಮನ ಕಾರ್ಯಕ್ರಮದಲ್ಲಿ ಲೇಖಕ ವಿ.ಗಣೇಶ್ ಮಾತನಾಡಿದರು. ಕಸಾಪ ತಾಲೂಕು ಅಧ್ಯಕ್ಷ ವಿ.ಟಿ.ಸ್ವಾಮಿ, ಕಸ್ತೂರಿ ಸಾಗರ್, ರಘು ಶಿಕಾರಿಪುರ, ಉಮೇಶ್ ಹಿರೇನೆಲ್ಲೂರು, ಎಸ್.ಬಸವರಾಜ್, ನಾರಾಯಣಮೂರ್ತಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net