

ಆಯನೂರು: ಪೋಕ್ಸೋ ಕಾಯ್ದೆ ತುಂಬ ಕಟ್ಟುನಿಟ್ಟಿನ ಕಾಯ್ದೆ. ಈ ಪ್ರಕರಣದಲ್ಲಿ ಆರೋಪಿಗಳಿಗೆ ಯಾವ ಕಾರಣಕ್ಕೂ ಜಾಮೀನು ನೀಡಲಾಗುವುದಿಲ್ಲ ಎಂದು ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಎಂ.ಎಸ್.ಸಂತೋಷ್ ಹೇಳಿದರು.
ಆಯನೂರಿನಲ್ಲಿರುವ ಅಗಸ್ತ್ಯ ಫೌಂಡೇಶನ್‌ನ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಒಳ್ಳೆಯ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಶಿಕ್ಷಕರು ಹಾಗೂ ಪಾಲಕರು ಮಕ್ಕಳಲ್ಲಿ ಜೀವನದ ಮೌಲ್ಯಗಳನ್ನು ತಿಳಿಸಬೇಕು. ಕಾನೂನು ಅರಿವು ಮೂಡಿಸುವ ಜತೆಗೆ ತಪ್ಪುದಾರಿ ಹಿಡಿಯುವುದನ್ನು ತಪ್ಪಿಸಬೇಕು ಎಂದರು.
ವಿಜ್ಞಾನ ಕೇಂದ್ರದ ಮುಖ್ಯಸ್ಥ ಶಿವರಾಜ್ ಗೊರನಾಳ ಮಾತನಾಡಿ, ಅಪರಾಧಗಳಾದ ಮೇಲೆ ಅವುಗಳಿಗೆ ಪರಿಹಾರ, ಶಿಕ್ಷೆ ಎಂದು ಹೋಗುವ ಬದಲು, ಮಕ್ಕಳಲ್ಲಿ ಕಾನೂನು ಅರಿವು ಹಾಗೂ ಜೀವನದ ಮೌಲ್ಯಗಳನ್ನು ತಿಳಿಸಿ ಒಳ್ಳೆಯ ದಾರಿ ತೋರುವುದು ಶಿಕ್ಷಕರ ಕರ್ತವ್ಯ ಎಂದು ಸಲಹೆ ನೀಡಿದರು.
ಪ್ರೌಢಶಾಲೆ ಮುಖ್ಯ ಶಿಕ್ಷಕ ಪ್ರಸನ್ನ, ಶಿಕ್ಷಣ ಇಲಾಖೆಯ ಕಾಂತರಾಜ್, ವಿವಿಧ ಶಾಲೆಗಳ ಶಿಕ್ಷಕರು, ಸಿಆರ್‌ಪಿಗಳು ಇದ್ದರು. ಕಾರ್ಯಕ್ರಮದ ನಂತರ ನ್ಯಾಯಾಧೀಶರು ವಿಜ್ಞಾನ ಕೇಂದ್ರದ ಪ್ರಯೋಗಾಲಯ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.