

ತ್ಯಾಗರ್ತಿ: ನೀವೂ ಅನುದಾನ ತಂದು ಅಭಿವೃದ್ಧಿ ಕೆಲಸಗಳನ್ನು ಮಾಡಿಸಿ. ನಾವು ಮಂಜೂರು ಮಾಡಿಸಿದ ಕೆಲಸವನ್ನೂ ಮುಂದುವರಿಸಿ. ಈ ಬಗ್ಗೆ ನಮ್ಮಿಂದ ಯಾವ ತಕಕಾರೂ ಇಲ್ಲ. ಆದರೆ ಈ ಹಿಂದೆ ನನ್ನ ಅವಧಿಯಲ್ಲಿ ಮಂಜೂರಾಗಿರುವ ಎಲ್ಲ ಕಾಮಗಾರಿಗಳನ್ನು ನಾನೇ ತಂದಿದ್ದು, ಮಾಡಿದ್ದು ಎಂದು ಪದೇಪದೆ ಸುಳ್ಳು ಹೇಳುವುದನ್ನು ಶಾಸಕ ಗೋಪಾಲಕೃಷ್ಣ ಬೇಳೂರು ನಿಲ್ಲಿಸಬೇಕು ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಆಗ್ರಹಿಸಿದರು.
ತ್ಯಾಗರ್ತಿ ಮಾರಿಕಾಂಬಾ ದೇವಸ್ಥಾನಕ್ಕೆ ಬುಧವಾರ ಭೇಟಿ ನೀಡಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2022ರ ನವೆಂಬರ್‌ನಲ್ಲಿ ಮಂಜೂರಾದ ಹಲವು ಕಾಮಗಾರಿಗಳ ಮಂಜೂರಾತಿ, ಟೆಂಡರ್ ಪ್ರಕ್ರಿಯೆಯಾಗಿರುವ ಪತ್ರ ಬಿಡುಗಡೆಗೊಳಿಸಿದರು. ನನ್ನ ಅವಧಿಯಲ್ಲಿ ಮಂಜೂರಾಗಿ, ಆಗಲೇ ಟೆಂಡರ್ ಆದ ಕಾಮಗಾರಿಗಳನ್ನು ಈಗ ತಾವು ಅನುದಾನ ತಂದಿದ್ದು, ಕೆಲಸ ಮಾಡಿದ್ದು ಎಂದು ದೇವಸ್ಥಾನದ ಸಭೆ, ಶಾಲಾ ವಾರ್ಷಿಕೋತ್ಸವದಲ್ಲಿ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ನಾನು ಸಾಗರ ಕ್ಷೇತ್ರಕ್ಕೆ ಒಮ್ಮೆ ಮಾತ್ರ ಶಾಸಕನಾಗಿದ್ದೆ. ಆಗ 888 ರಸ್ತೆಗಳನ್ನು ಮಂಜೂರು ಮಾಡಿಸಿ ಬಹುತೇಕ ಕಾಮಗಾರಿ ಪೂರೈಸಲಾಗಿತ್ತು. 2022ರ ಕೊನೆಯಲ್ಲಿ ಹಾಗೂ 2023ರ ಆರಂಭದಲ್ಲಿ ಮಂಜೂರು ಮಾಡಿಸಿದ ಕಾಮಗಾರಿಗಳು ಈಗ ನಡೆಯುತ್ತಿವೆ. ಇದೆಲ್ಲದಕ್ಕೂ ಅಂದು ನಾನು ಮಂಜೂರು ಮಾಡಿಸಿರುವ ದಾಖಲೆಗಳನ್ನು ಜನರ ಮುಂದಿಡುತ್ತೇನೆ. ನೀವು ಮಂಜೂರು ಮಾಡಿಸಿದ್ದು ಹೌದಾದರೆ ದಾಖಲೆ ಕೊಡಿ. ಸುಮ್ಮನೆ ಸುಳ್ಳು ಹೇಳಿ ನಗೆಪಾಟಲಿಗೆ ಗುರಿಯಾಗಬೇಡಿ ಎಂದು ಲೇವಡಿ ಮಾಡಿದರು.
ನಾನು ಮಂಜೂರು ಮಾಡಿಸಿದ್ದು ಸುಳ್ಳಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಪದೇಪದೆ ಸುಳ್ಳು ಹೇಳುವ ನಿಮ್ಮ ನಿಲುವೇನು? ದಾಖಲೆ ಎಲ್ಲಿದೆ? ಮಂಜೂರಾತಿ ವಿವರದ ಪತ್ರವನ್ನು ಮನೆಮನೆಗೂ ತಲುಪಿಸಿ ಸಾರ್ವಜನಿಕವಾಗಿ ಬಹಿರಂಗ ಮಾಡಲಾಗುವುದು ಎಂದರು.
ಹಿಂದಿನ ಸರ್ಕಾರದ ಅವಧಿಯಲ್ಲಿ ತ್ಯಾಗರ್ತಿಯಲ್ಲಿ ಈಡಿಗರ ಸಮುದಾಯ ಭವನಕ್ಕೆ 1.5 ಕೋಟಿ ರೂ. ಮಂಜೂರು ಮಾಡಿಸಲಾಗಿದೆ. ಮುಖ್ಯ ರಸ್ತೆ ಅಭಿವೃದ್ಧಿಗೆ 3 ಕೋಟಿ ರೂ. ಅನುದಾನ ನೀಡಲಾಗಿದೆ ವಿದ್ಯುತ್ ಗ್ರಿಡ್ ಸೇರಿ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಲ್ಲದಕ್ಕೂ ದಾಖಲೆ ಇದೆ. ಕರೊನಾ ಸಂದರ್ಭದಲ್ಲೂ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ ಎಂದು ಹೇಳಿದರು.
ಜಿಪಂ ಮಾಜಿ ಸದಸ್ಯ ಹೊನಗೋಡು ರತ್ನಾಕರ್, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ದೇವೇಂದ್ರಪ್ಪ, ಗ್ರಾಪಂ ಸದಸ್ಯರಾದ ಇಸಾಕ್, ಗೀತಾ ಪರಶುರಾಮ, ಹನುಮಂತ, ಎಚ್.ಶಿವಪ್ಪ, ಪ್ರಮುಖರಾದ ಕೃಷ್ಣಮೂರ್ತಿ, ಕೆ.ಬಿ.ಗಣಪತಿ, ಪಾಂಡುರಂಗ, ಧನರಾಜ್, ಯೋಗೀಶ್‌ಕುಮಾರ್ ಇತರರಿದ್ದರು.