

ಭದ್ರಾವತಿ: ಸಂವಿಧಾನದ ಮಹತ್ವ ಕೇವಲ ದಲಿತರಿಗೆ ಮಾತ್ರವಲ್ಲ, ಈ ದೇಶದ ಪ್ರತಿಯೊಬ್ಬ ನಾಗರಿಕರಿಗೂ ತಿಳಿಯಬೇಕಿದೆ. ಪ್ರತಿ ಹಳ್ಳಿಗಳಿಗೂ ತಲುಪಿಸುವ ಕೆಲಸ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಾಡಬೇಕಿದೆ. ನಿಮ್ಮ ಹೋರಾಟ ಕಾನೂನು ಚೌಕಟ್ಟಿನಲ್ಲಿದ್ದರೆ ನಮ್ಮ ಸಹಕಾರ ಸದಾ ಇರುತ್ತದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಹಳೇನಗರದ ವೀರಶೈವ ಸಭಾಭವನದಲ್ಲಿ ಬುಧವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ಸಂವಿಧಾನ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಅಂಬೇಡ್ಕರ್ ರಚಿಸಿರುವ ಸಂವಿಧಾನ ಬೇಕು ಎಂದು ನಾವು ಹೋರಾಟ ಮಾಡುತ್ತಿದ್ದರೆ, ಇನ್ನೊಂದು ಗುಂಪು ಬೇಡ ಎನ್ನುತ್ತದೆ. ಬುದ್ಧ, ಬಸವ, ಅಂಬೇಡ್ಕರ್ ಕಾಲದಿಂದಲೂ ಆರಂಭವಾದ ಸಂಘರ್ಷ ಇಂದಿಗೂ ನಡೆಯುತ್ತಿದೆ ಎಂದರು.
ಈ ದೇಶದಲ್ಲಿ ಬಿ.ಕೃಷ್ಣಪ್ಪ ಹಾಗೂ ಅಂಬೇಡ್ಕರ್ ಅವರು ಜನಿಸದಿದ್ದರೆ ಸಂವಿಧಾನದ ಹಕ್ಕಿಗಾಗಿ ಹೋರಾಟ, ಸಂಘರ್ಷಗಳು ನಡೆಯುತ್ತಿರಲೇ ಇಲ್ಲ. ಭದ್ರಾವತಿಯಲ್ಲಿ ಹುಟ್ಟಿದ ಹೋರಾಟ ಚಾಮರಾಜನಗರದವರೆಗೂ ಮುಂದುವರಿದಿದೆ. ಬುದ್ಧ, ಬಸವ, ಅಂಬೇಡ್ಕರ್ ಅವರ ವಿಚಾರಧಾರೆಗಳು ಪ್ರತಿ ಮನೆಗೂ ತಲುಪಿದಾಗ ನಮ್ಮ ಹೋರಾಟ, ಜಯಂತಿಗಳಿಗೆ ಅರ್ಥ ಬರುತ್ತದೆ ಎಂದರು.
ಅಂಬೇಡ್ಕರ್ ಆಶಯದಂತೆ ನಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕಿದೆ. ದಲಿತರು, ಬಡವರು ಬಹಳಷ್ಟು ಅವಲಂಬಿಸಿರುವ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ಮೂಲಕ ಉನ್ನತ ಮಟ್ಟದ ಶಿಕ್ಷಣ ಹಾಗೂ ಮೂಲ ಸೌಕರ್ಯಗಳಿಗಾಗಿ ಸರ್ಕಾರದ ಮೇಲೆ ಒತ್ತಡ ಹಾಕಲು ಹೋರಾಟ ಮಾಡಬೇಕಿದೆ. ನಾವೆಲ್ಲರೂ ಉದ್ಯಮಿಗಳು, ಪ್ರಬಲ ರಾಜಕಾರಣಿಗಳು, ಉತ್ತಮ ಶಿಕ್ಷಕರಾಗಿ ಹೊರಹೊಮ್ಮಬೇಕು ಎಂದು ತಿಳಿಸಿದರು.
ರಾಷ್ಟ್ರಕವಿ ಕುವೆಂಪು, ಕಾಗೋಡು ತಿಮ್ಮಪ್ಪ, ಎಸ್.ಬಂಗಾರಪ್ಪ, ಜೆ.ಎಚ್.ಪಟೇಲ್ ಅವರಂತಹ ಅನೇಕ ಉನ್ನತ ವ್ಯಕ್ತಿಗಳು, ಹೋರಾಟಗಾರರನ್ನು ಶಿವಮೊಗ್ಗ ಜಿಲ್ಲೆ ಕೊಟ್ಟಿದೆ. ಅವರ ಹೋರಾಟ, ಆದರ್ಶಗಳನ್ನು ಮುಂದಿಟ್ಟುಕೊಂಡು ಇತಿಹಾಸದ ಘಟನೆಗಳನ್ನು ನಮ್ಮ ಮಕ್ಕಳಿಗೆ ತಿಳಿಸಬೇಕು. ಸಮಾಜದಲ್ಲಿನ ಬದಲಾವಣೆಗೆ ಸಂಘಟನೆ ಶಕ್ತಿಯಾಗಬೇಕಿದೆ ಎಂದು ತಿಳಿಸಿದರು.
ಮೈಸೂರು ಉರಿಲಿಂಗಿ ಪೆದ್ದಿಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ಅಂಬೇಡ್ಕರ್ ರಚಿಸಿರುವ ಸಂವಿದಾನ ಯಾವುದೇ ಜಾತಿ, ಸಮುದಾಯಕ್ಕೆ ಸೀಮಿತವಾಗಿಲ್ಲ. ಆದರೆ ಕೆಲವರು ಹಿಂದು ರಾಷ್ಟ್ರ ಸಂವಿಧಾನ ಬೇಕು ಎನ್ನುತ್ತಾರೆ. ಇದು ಜಾತಿ, ಅಸ್ಪಶ್ಯತೆ, ಅಸಮಾನತೆಯನ್ನು ಸೂಚಿಸುತ್ತದೆ. ಯಾರು ಅಂಬೇಡ್ಕರ್ ಸಂವಿಧಾನವನ್ನು ವಿರೋಧಿಸುತ್ತಾರೋ ಅವರನ್ನು ರಾಷ್ಟ್ರದ್ರೋಹಿಗಳೆಂದು ಪರಿಗಣಿಸಲಾಗುತ್ತದೆ ಎಂದರು.
ಕೆ.ಆರ್.ನಗರ ಶಾಸಕ ರವಿಶಂಕರ್, ವಿಧಾನ ಪರಿಷತ್ ಮಾಜಿ ಸದಸ್ಯ ಸುಧಾಮ ದಾಸ್, ಪ್ರೊ. ಬಿ.ಕೃಷ್ಣಪ್ಪ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಇಂದಿರಾ ಕೃಷ್ಣಪ್ಪ, ಮಾಜಿ ಸಂಸದ ಎಂ.ಚಂದ್ರಪ್ಪ, ನಗರಸಭೆ ಪ್ರಭಾರ ಅಧ್ಯಕ್ಷ ಎಂ.ಮಣಿ, ಸದಸ್ಯ ಬಿ.ಕೆ.ಮೋಹನ್, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಚಿನ್ನಯ್ಯ, ತಾಲೂಕು ಸಂಚಾಲಕ ಆರ್.ಸಂದೀಪ್, ರಾಜ್ಯ ಸಂಚಾಲಕ ರಾಮಚಂದ್ರಪ್ಪ, ಉದ್ಯಮಿ ಬಿ.ಕೆ.ಶಿವಕುಮಾರ್, ಸೇರಿದಂತೆ ಹಲವರಿದ್ದರು.