

ಬೆಂಗಳೂರು: ಕೆಂಗೇರಿ ಬಳಿಯ ಚಿಕ್ಕೇಗೌಡನಪಾಳ್ಯದ ಸಮೀಪ ರಸ್ತೆದಾಟುವಾಗ ಭಯದಲ್ಲಿ ಬಿಎಂಟಿಸಿ ಬಸ್‌ನಡಿ ಅಡಗಿದ್ದ ಚಿರತೆ ಮರಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಣೆ ಮಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ.
ತುರಹಳ್ಳಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಚಿಕ್ಕೇಗೌಡನಪಾಳ್ಯದಲ್ಲಿ ಬುಧವಾರ ಪತ್ತೆಯಾಗಿದೆ. ತಾಯಿ ಜತೆಗೆ 3 ತಿಂಗಳ ಮರಿ ಅರಣ್ಯ ಪ್ರದೇಶದಲ್ಲಿ ಓಡಾಡುತ್ತಿದ್ದಾಗ ರಸ್ತೆಗೆ ನುಗ್ಗಿದೆ. ತಾಯಿ ಚಿರತೆ ತಪ್ಪಿಸಿಕೊಂಡಿದ್ದು, ಮರಿ ಚಿರತೆಗೆ ಕಾರೊಂದು ಡಿಕ್ಕಿ ಹೊಡೆದಿದೆ. ಗುದ್ದಿದ ರಭಸಕ್ಕೆ ಮರಿಗೆ ನಿತ್ರಾಣವಾಗಿ ರಸ್ತೆಬದಿ ಪ್ರಜ್ಞೆ ತಪ್ಪಿದೆ. ಇದೇ ವೇಳೆ ಚಿಕ್ಕೇಗೌಡನಪಾಳ್ಯದಿಂದ ಪ್ರಯಾಣಿಕರನ್ನು ಹತ್ತಿಸಿಕೊಂಡು ಕೆಂಗೇರಿಗೆ ಸಾಗುತ್ತಿದ್ದ ಬಿಎಂಟಿಸಿ ಬಸ್ ಚಾಲಕ, ಮರಿಯನ್ನು ಕಂಡು ಬಸ್‌ನಿಂದ ಯಾರು ಇಳಿಯದಂತೆ ಸೂಚಿಸಿ ಇಳಿದಿದ್ದಾನೆ.
ಬಾಟಲ್‌ನಲ್ಲಿ ನೀರು ತೆಗೆದುಕೊಂಡು ಹೋಗಿ ಮರಿಯ ತಲೆಮೇಲೆ ಸುರಿದ ಪರಿಣಾಮ ಎಚ್ಚರಗೊಂಡ ಮರಿ ಏಕಾಏಕಿ ಚಾಲಕನ ಮೇಲೆ ಎಗರಿತ್ತು. ಬಳಿಕ ಭಯದಿಂದ ಬಸ್‌ನ ಕೆಳಗೆ ಅವಿತುಕೊಂಡಿತ್ತು. ಕೊನೆಗೆ ಪ್ರಯಾಣಿಕರನ್ನು ಕೆಳಗೆ ಇಳಿಸಿದ ಬಸ್ ಚಾಲಕ, ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದ್ದ. ವಿಷಯ ತಿಳಿದ ಕಗ್ಗಲಿಪುರ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಮತ್ತು ವನ್ಯ ಜೀವಿ ಸಂರಕ್ಷಣಾ ಪಡೆ ಸ್ಥಳಕ್ಕೆ ದೌಡಾಯಿಸಿ ಚಿರತೆ ಮರಿಯನ್ನು ಸುರಕ್ಷಿತವಾಗಿ ಹಿಡಿದು ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದ್ದಾರೆ.
ಯಾವುದೇ ಅಪಾಯವಾಗಿಲ್ಲ ಎಂಬುದು ಗೊತ್ತಾಗಿ ಪ್ರಾಥಮಿಕ ಚಿಕಿತ್ಸೆ ಕೊಟ್ಟು ಕೆಲ ಗಂಟೆಗಳ ಕಾಲ ನಿಗಾವಹಿಸಿ ಆರೋಗ್ಯ ತಪಾಸಣೆ ನಡೆಸಿದ್ದಾರೆ. ಕೊನೆಗೆ ಚಿರತೆ ಮರಿ ಸದೃಢವಾಗಿದೆ ಎಂದು ಖಚಿತ ಪಡಿಸಿಕೊಂಡಿದ್ದಾರೆ. ತಾಯಿ ಜತೆಗೆ ಓಡಾಡಿಕೊಂಡು ಇದ್ದ ಕಾರಣಕ್ಕೆ ಮರಿಯನ್ನು ಬಿ.ಎಂ. ಕಾವಲ್ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.