

| ಡಿ.ಪಿ.ಮಹೇಶ್ ಯಳಂದೂರು
ಗಣ್ಯರಿಗೆ ದೇಶದ ಉನ್ನತ ಮಟ್ಟದ ‘ಜಡ್ ಪ್ಲಸ್’ ಭದ್ರತೆ ನೀಡುವುದನ್ನು ನೋಡಿದ್ದೇವೆ. ಇದೇ ಮಾದರಿಯಲ್ಲಿ ಇಲ್ಲೊಂದು ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳಿಗೆ ಭದ್ರತೆ ಒದಗಿಸಲಾಗುತ್ತಿದೆ..! ಯಳಂದೂರು ತಾಲೂಕಿನ ಮಲ್ಲಿಗೆಹಳ್ಳಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಅರಣ್ಯ ಇಲಾಖೆ ಸಿಬ್ಬಂದಿ ಬಿಗಿಭದ್ರತೆ ಒದಗಿಸಿದ್ದಾರೆ. ಹನೂರಿನ ಕಗ್ಗಲಿಗುಂದಿಯಲ್ಲಿ 6 ವರ್ಷದ ಬಾಲಕಿ ಸುಶೀಲಾ ಚಿರತೆ ದಾಳಿಯಿಂದ ಮೃತಪಟ್ಟಿದ್ದಳು. ಎರಡ್ಮೂರು ದಿನಗಳ ಹಿಂದೆ ಮಲ್ಲಿಗೆಹಳ್ಳಿಯ ಹರ್ಷ(8) ಎಂಬ ಬಾಲಕನ ಮೇಲೆ ಚಿರತೆ ದಾಳಿ ಮಾಡಿತ್ತು. ಗಾಯಗೊಂಡಿರುವ ಬಾಲಕ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಎರಡೂ ಅವಘಡಗಳು ಮಕ್ಕಳಲ್ಲಿ ಭೀತಿ ಸೃಷ್ಟಿಸಿವೆ.
ತಾಲೂಕಿನ ಕೆಸ್ತೂರಿನ ಶಾಲೆಯಲ್ಲಿ 624, ಮಲ್ಲಿಗೆಹಳ್ಳಿಯಲ್ಲಿ 105, ಹಾಗೂ ಕಟ್ನವಾಡಿಯಲ್ಲಿ 50, ಕಿನಕಹಳ್ಳಿಯಲ್ಲಿ 87, ಕೆ.ಹೊಸೂರಿನಲ್ಲಿ 26 ಮಕ್ಕಳು ಓದುತ್ತಿದ್ದಾರೆ. ಇಷ್ಟೂ ಗ್ರಾಮಗಳ ಮಕ್ಕಳು ಚಿರತೆ ಭಯದಲ್ಲಿ ಇದ್ದಾರೆ. ಬಾಲಕನ ಮೇಲೆ ಚಿರತೆ ದಾಳಿ ನಡೆದಿದ್ದ ಮಲ್ಲಿಗೆಹಳ್ಳಿ ಗ್ರಾಮದ ಮಕ್ಕಳಿಗೆ ಅರಣ್ಯ ಇಲಾಖೆ ಭದ್ರತೆ ನೀಡಿದೆ. ಉಳಿದಂತೆ ಕಟ್ನವಾಡಿ, ಕೆ.ಹೊಸೂರು, ಕಿನಕಹಳ್ಳಿ, ಕೆಸ್ತೂರಿನಲ್ಲಿ ಮಕ್ಕಳ ಓಡಾಡುವ ರಸ್ತೆ, ಶಾಲೆ ಸುತ್ತ ಅರಣ್ಯ ಇಲಾಖೆ ಅಧಿಕಾರಿಗಳು ಜೀಪ್ನಲ್ಲಿ ಗಸ್ತು ತಿರುಗುತ್ತಿದ್ದಾರೆ.
ಒಂಟಿಯಾಗಿ ಓಡಾಡಬೇಡಿ: ಚಿರತೆ ಆತಂಕ ಆವರಿಸಿರುವ ಗ್ರಾಮಗಳಲ್ಲಿ ಮಕ್ಕಳನ್ನು ಒಂಟಿಯಾಗಿ ಓಡಾಡಲು ಬಿಡಬಾರದು, ಮುಂಜಾನೆ ಮತ್ತು ಮುಸ್ಸಂಜೆ ವೇಳೆ ಯಾರೂ ಅಡ್ಡಾಡಬಾರದು ಎಂದು ಚಿರತೆ ಕಾರ್ಯಪಡೆ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಬಯಲುಶೌಚಕ್ಕೆ ಹೋಗಬಾರದು, ಚಿರತೆ ಕಂಡುಬಂದಲ್ಲಿ ಮೊಬೈಲ್ನಲ್ಲಿ ಸೆರೆ ಹಿಡಿಯುವ ಹಾಗೂ ಸೆಲ್ಪೀ ತೆಗೆದುಕೊಳ್ಳುವ ಹುಚ್ಚಾಟ ಮಾಡದೆ, ಕೂಡಲೇ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಬೇಕು ಎಂದು ಯಳಂದೂರು ಡಿಆರ್ಎಫ್ ಪುನೀತ್, ವರುಣ್ ತಿಳಿಸಿದ್ದಾರೆ.