

ಪುಣೆ: ಸಾಕು ನಾಯಿಯೊಂದನ್ನು ಚಿರತೆ ಸಾಯಿಸಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ನಾರಾಯಣನಗರ ಸಮೀಪದ ವಾರುಲ್ವಾಡಿ ಪ್ರದೇಶದಲ್ಲಿ ಶನಿವಾರ ರಾತ್ರಿ ಚಿರತೆ ಕತ್ತಲೆಯಾಗಿರುವ ಓಣಿಯಿಂದ ಹೊರಬಂದು ಮನೆಯ ಹೊರಗೆ ತಿರುಗಾಡುತ್ತಿದ್ದ ಸಾಕು ನಾಯಿಯ ಮೇಲೆ ದಾಳಿ ಮಾಡಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ವಿಡಿಯೋದಲ್ಲಿ ರಾತ್ರಿ ವೇಳೆ ಚಿರತೆಯೊಂದು ಏಕಾಏಕಿ ಓಡಿ ಬಂದು ತಿರುಗಾಡುತ್ತಿದ್ದ ನಾಯಿಯನ್ನು ಬಾಯಿಯಲ್ಲಿ ಹಿಡಿದುಕೊಂಡು ಓಡಿ ಹೋಗಿದೆ. ಚಿರತೆ ನಾಯಿಯನ್ನು ಬಾಯಿಯಲ್ಲಿ ಕಚ್ಚಿಕೊಂಡು ಓಡಿಹೋದ ನಂತರ ಮತ್ತೊಂದು ನಾಯಿ ಚಿರತೆಯನ್ನು ಅಟ್ಟಿಸಿಕೊಂಡು ಹೋಗುವುದನ್ನು ನೋಡಬಹುದು. ಸ್ಥಳೀಯ ನಿವಾಸಿಗಳು ಆ ನಾಯಿಯನ್ನು ಸಾಕಿದ್ದರು ಎನ್ನಲಾಗಿದೆ.
ಈ ವಿಡಿಯೋ ನೋಡಿ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಪದೇಪದೆ ಚಿರತೆಗಳು ಕಾಣಿಸಿಕೊಳ್ಳುತ್ತಿರುವುದರಿಂದ ಜುನ್ನಾರ್ ತಹಸಿಲ್ ನಿವಾಸಿಗಳು ಈಗ ಭಯದಿಂದ ಜೀವನ ಸಾಗಿಸುತ್ತಿದ್ದಾರೆ. ಕೂಡಲೇ ಚಿರತೆಯನ್ನು ಹಿಡಿಯುವಂತೆ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ. ಒಂದು ತಿಂಗಳ ಹಿಂದೆ ಪುಣೆಯ ಹೊರವಲಯದಲ್ಲಿರುವ ರಾಜಾರಾಂಬಾಪು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕ್ಯಾಂಪಸ್‌ನಲ್ಲಿ ಚಿರತೆಯೊಂದು ಕಾಣಿಸಿಕೊಂಡಿತ್ತು. ಇದಾದ ಬಳಿಕ ಅರಣ್ಯ ಮತ್ತು ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ಸುತ್ತಮುತ್ತಲ ಪ್ರದೇಶಗಳಲ್ಲಿ ಚಿರತೆಗಾಗಿ ಹುಡುಕಾಟ ನಡೆಸಿದರು. ಆ ಸಮಯಲ್ಲಿ ವನ್ಯಜೀವಿ ತಜ್ಞರೂ ಇದ್ದರು.
ಜೂನ್ನಲ್ಲಿ ಸಂಭಾವ್ಯ ಚಿರತೆ ವಿಪತ್ತು ಪೀಡಿತ ಪ್ರದೇಶ ಎಂದು ಘೋಷಿಸಲಾದ ನಾಲ್ಕು ಪುಣೆ ತಹಸಿಲ್‌ಗಳಲ್ಲಿ ಜುನ್ನಾರ್ ಕೂಡ ಸೇರಿದೆ. ಈ ನಾಲ್ಕು ತಹಸಿಲ್‌ಗಳ ಅಡಿಯಲ್ಲಿ 233 ಗ್ರಾಮಗಳಿವೆ. ಅದರಲ್ಲಿ ಅಂಬೆಗಾಂವ್, ಖೇಡ್ ಮತ್ತು ಶಿರೂರು ಸೇರಿವೆ. ರಾಜ್ಯ ಅರಣ್ಯ ಇಲಾಖೆಯು 47 ಚಿರತೆಗಳ ಸಂತಾನಹರಣಕ್ಕೆ ಕೇಂದ್ರ ಅರಣ್ಯ ಸಚಿವಾಲಯದ ಹೆಚ್ಚುವರಿ ವನ್ಯಜೀವಿ ಮಹಾನಿರ್ದೇಶಕರಿಂದ ಅನುಮೋದನೆಯನ್ನು ಸಹ ಕೋರಿದೆ.(ಏಜೆನ್ಸೀಸ್)