ಉಳ್ಳವರ ಆಲಯ, ರಾಜಕೀಯ ನಿರಾಶ್ರಿತರಿಗೆ ಆಶ್ರಯ!; ವಿಧಾನಪರಿಷತ್ ವೈಭವ ಮರಳಿ ಬರುವುದೆಂತೋ? ಮೇಲ್ಮನೆ ಸ್ಥಾಪನೆ ಉದ್ದೇಶವೇ ಮೂಲೆಗೆ

vidhana soudha 1
Published on

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಹಿರಿಯರ ಸದನ, ಚಿಂತಕರ ಚಾವಡಿ ಎಂದೇ ಹೆಸರಾಗಿದ್ದ ವಿಧಾನಪರಿಷತ್ ಈಗ ಉಳ್ಳವರ ಆಲಯವಾಗುತ್ತಿದೆಯೇ? ಮೇಲ್ಮನೆಯ ಗತವೈಭವ ಮತ್ತೆ ಮರಳಿ ಬರಲು ಸಾಧ್ಯವಿಲ್ಲವೇ? ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಪಕ್ಷಗಳಿಂದ ಪರಿಷತ್​ಗೆ ನಡೆಯುತ್ತಿರುವ ಆಯ್ಕೆ ಇಂತಹ ಪ್ರಶ್ನೆಯನ್ನು ಸಾರ್ವಜನಿಕರಲ್ಲಿ ಮೂಡುವಂತೆ ಮಾಡಿವೆ.

ಮೇಲ್ಮನೆಯ 25 ಸ್ಥಾನಗಳಿಗೆ ನಡೆದಿರುವ ಚುನಾವಣೆ, ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಆಯ್ಕೆ, ಚುನಾವಣಾ ಕಣದಲ್ಲಿ ನಡೆದಿರುವ ಹಣದ ಸದ್ದು, ಪರಿಷತ್​ನ ಚರ್ಚೆಯ ಗುಣಮಟ್ಟ ಇಂತಹ ಪ್ರಶ್ನೆಗಳು ಪದೇಪದೆ ಕೇಳಿ ಬರುವಂತೆ ಮಾಡಿವೆ. ಪರಿಷತ್​ನ ಹಿಂದಿನ ನಡವಳಿ ಗಮನಿಸಿದಾಗ, ರಾಜಕೀಯ ಪಕ್ಷಗಳಿಂದ ಬಂದವರೇ ಇರಬಹುದು ಅಥವಾ ನಾಮ ನಿರ್ದೇಶನಗೊಂಡವರು ಸದನಕ್ಕೆ ಗೌರವ ಮೂಡಿಸಿದ್ದರು. ಅಲ್ಲಿ ನಡೆಯುತ್ತಿದ್ದ ಚರ್ಚೆಗಳು ಇಡೀ ದೇಶಕ್ಕೆ ಮಾದರಿಯಾಗಿದ್ದವು.

ವಿಧಾನಸಭೆಯಲ್ಲಿ ಅಂಗೀಕಾರವಾಗುವ ಅನೇಕ ವಿಧೇಯಕಗಳು ಮತ್ತೆ ಚರ್ಚೆಗೆ ಒಳಗಾಗಿ ಇಲ್ಲಿರುವ ಹಿರಿಯರು ಅದರಲ್ಲಿ ಬದಲಾವಣೆಗಳೇನಾದರೂ ಇದ್ದರೆ ಮಾಡುವ ಮೂಲಕ ಇನ್ನಷ್ಟು ಶಕ್ತಿ ತುಂಬಬೇಕು. ಅದಕ್ಕೆ ತಜ್ಞರು, ಸಾಧಕರು ಸಲಹೆಗಳನ್ನು ನೀಡಬೇಕೆಂಬ ಉದ್ದೇಶ ಪರಿಷತ್ ಸ್ಥಾಪನೆಯ ಹಿಂದಿದೆ. ಹಿಂದಿನ ಅನೇಕ ಚರ್ಚೆಗಳನ್ನು ಗಮನಿಸಿದಾಗ ಈ ಅಂಶ ಗಮನ ಸೆಳೆಯುತ್ತದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಪರಿಷತ್​ನಲ್ಲಿಯೂ ಚರ್ಚೆಯ ಗುಣಮಟ್ಟ ಕುಸಿದಿರುವುದನ್ನು ಕಾಣಬಹುದಾಗಿದೆ.

ಪರಿಕಲ್ಪನೆ ಏನು?: ಪರಿಷತ್ ಬ್ರಿಟನ್​ನ ಹೌಸ್ ಆಫ್ ಕಾಮನ್ಸ್ ಪರಿಕಲ್ಪನೆಯನ್ನು ಹೊಂದಿದೆ. ಹಾಗೆ ನೋಡಿದರೆ ಮೈಸೂರು ಮಹಾರಾಜರ ಆಡಳಿತಾವಧಿಯಲ್ಲಿಯೇ ಜನರೊಂದಿಗೆ ನೇರ ಸಂಬಂಧ ಹೊಂದಿರುವ ಅನುಭವಿಗಳ ಸದನ ರಚನೆ ಮಾಡಲಾಗಿತ್ತು. 1907ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರು ಇಂತಹದೊಂದು ಸದನವನ್ನು ರಚನೆ ಮಾಡಿದ್ದರು. ರಾಜರಿಗೆ ಕಾಲಕಾಲಕ್ಕೆ ಸಲಹೆ ನೀಡುವುದು ಈ ಸಮಿತಿಯ ಉದ್ದೇಶವಾಗಿತ್ತು. 10 ಜನರಿಗೆ ಕಡಿಮೆ ಇಲ್ಲದಂತೆ 15 ಜನರಿಗೆ ಹೆಚ್ಚಿಲ್ಲದಂತೆ ಸದಸ್ಯರನ್ನು ನೇಮಕ ಮಾಡಲಾಗುತ್ತಿತ್ತು.

ಸ್ವಾತಂತ್ರ್ಯ ನಂತರ ಮೈಸೂರು ವಿಧಾನಪರಿಷತ್ ರಚನೆಯಾದಾಗ ಸದಸ್ಯರ ಸಂಖ್ಯೆ 50ಕ್ಕೆ ಏರಿತು. 1987ರಲ್ಲಿ 75ಕ್ಕೆ ಏರಿಕೆಯಾಯಿತು. ವಿಧಾನಸಭೆಯ ಮೂರನೇ ಒಂದರಷ್ಟು ಸದಸ್ಯರು ಪರಿಷತ್​ನಲ್ಲಿರುತ್ತಾರೆ. ವಿಧಾನಸಭೆಗೆ ಆಯ್ಕೆಯಾಗಲು ಸಾಧ್ಯವಾಗದವರಿಗೆ ಅವಕಾಶ ನೀಡುವ ಮೂಲಕ ರಾಜ್ಯವನ್ನು ಮುನ್ನಡೆಸುವಲ್ಲಿ ಅವರ ನೆರವು ಪಡೆಯಬೇಕಾಗುತ್ತದೆ. ಆ ಕೆಲಸ ಆಗುತ್ತಿತ್ತು. ಪರಿಷತ್​ಗೆ ರಾಜಕೀಯ ಪಕ್ಷಗಳಿಂದ ಬಂದವರು, ನಾಮ ನಿರ್ದೇಶನಗೊಂಡವರನ್ನು ನೋಡಿದಾಗ ಅದು ತಿಳಿಯುತ್ತದೆ.

ಸದಸ್ಯರು ಹೇಗೆ: ಪರಿಷತ್ 75 ಸದಸ್ಯ ಬಲ ಹೊಂದಿದೆ. ಅದರಲ್ಲಿ 3ನೇ ಒಂದು ಭಾಗದಷ್ಟು ಸ್ಥಳೀಯ ಸಂಸ್ಥೆಗಳಿಂದ ಆಯ್ಕೆ ಆಗುತ್ತಾರೆ. 3ನೇ ಒಂದು ಭಾಗದಷ್ಟು ವಿಧಾನಸಭೆ ಯಿಂದ ಚುನಾಯಿತರಾಗುತ್ತಾರೆ. ಆರನೇ ಒಂದು ಭಾಗದಷ್ಟು ಜನರನ್ನು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ರಾಜ್ಯಪಾಲರು ನಾಮನಿರ್ದೇಶನ ಮಾಡಬೇಕಾಗಿದೆ. 12ನೇ ಒಂದು ಭಾಗದಷ್ಟು ಪದವೀಧರ ಕ್ಷೇತ್ರದಿಂದ ಹಾಗೂ ಇನ್ನುಳಿದ 12ನೇ ಒಂದು ಭಾಗದಷ್ಟು ಜನ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗುತ್ತಾರೆ. ಪರಿಷತ್​ನಲ್ಲಿ ಚರ್ಚೆ ನಡೆದಿದೆ ಎಂದರೆ ಅದು ಗಂಭೀರವಾಗಿರುತ್ತದೆ ಎಂದೇ ಸರ್ಕಾರ ಅನೇಕ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ಅಂಗೀಕಾರ ಪಡೆದ ವಿಧೇಯಕಗಳನ್ನು ಬದಲಾವಣೆ ಮಾಡಿದ, ಹಿಂಪಡೆದ ಉದಾಹರಣೆಗಳು ಸಾಕಷ್ಟಿವೆ.

ಕುಸಿತ ಯಾವಾಗಿನಿಂದ?: ಪರಿಷತ್​ನ ಗುಣಮಟ್ಟ ಕುಸಿತಕ್ಕೆ ರಾಜಕೀಯ ಪಕ್ಷಗಳೇ ನೇರ ಕಾರಣವಾಗಿವೆ. ಎಲ್ಲ ಪಕ್ಷಗಳ ಕೊಡುಗೆ ಸಮಾನವಾಗಿದೆ. ತಮ್ಮ ಪಕ್ಷದ ಸದಸ್ಯರ ಸಂಖ್ಯೆ ಹೆಚ್ಚಾಗಬೇಕೆಂಬ ಕಾರಣಕ್ಕೆ ಹಣವಂತರನ್ನು ಹುಡುಕಿ ಟಿಕೆಟ್ ಕೊಡುವ ಪರಿಪಾಠ ಬೆಳೆದಿದೆ. 1980ರಿಂದ ಆರ್ಥಿಕ ಸದೃಢರನ್ನು ಆಯ್ಕೆ ಮಾಡುವ ಪರಿಪಾಠ ಬೆಳೆಯಿತು. ಆ ಮೂಲಕ ಹಿರಿಯರ ಸದನ ರಾಜಕೀಯ ನಿರಾಶ್ರಿತರ ಆಶ್ರಯತಾಣವಾಗಲಾರಂಭಿಸಿತು. 1990ರ ನಂತರ ಈ ಪರಿಸ್ಥಿತಿ ಮಿತಿ ಮೀರಿತು, ಆ ಮೂಲಕ ಪರಿಷತ್ ರಚನೆಯ ಉದ್ದೇಶ ಬುಡಮೇಲಾಯಿತು ಎಂಬುದನ್ನು ರಾಜಕೀಯ ವಿಶ್ಲೇಷಕರು ಗುರುತಿಸುತ್ತಾರೆ.

ಕರ್ನಾಟಕದ ಮೇಲ್ಮನೆಗೆ ತನ್ನದೇ ಆದ ಗೌರವವಿತ್ತು. ಆದರೆ ಹಿಂದಿನ ಪ್ರಬುದ್ಧತೆ ಈಗ ಕಾಣುತ್ತಿಲ್ಲ. ಟಿಕೆಟ್ ನೀಡುವಾಗ ರಾಜಕೀಯ ಪಕ್ಷಗಳು ತಜ್ಞರು, ಸಾಧಕರನ್ನು ಗುರುತಿಸಬೇಕು. ಗೆಲ್ಲುವ ಉದ್ದೇಶದಿಂದ ಹಣವಂತರ ಕಡೆ ನೋಡುವುದು ಅಧಃಪತನಕ್ಕೆ ಕಾರಣವಾಗಿದೆ. ಈ ಸದನವನ್ನು ರಾಜಕೀಯ ಪುನರ್ವಸತಿ ಕೇಂದ್ರ ಮಾಡದೆ ಮುಚ್ಚಿ ಬಿಡುವುದು ಒಳ್ಳೆಯದು.

| ಪ್ರೊ. ಚಂಬಿ ಪುರಾಣಿಕ್ ರಾಜಕೀಯ ವಿಶ್ಲೇಷಕರು

ಪರಿಷತ್ ಅಸ್ತಿತ್ವದ ರಾಜ್ಯಗಳು: ಆಂಧ್ರಪ್ರದೇಶ, ತೆಲಂಗಾಣ, ಬಿಹಾರ, ಕರ್ನಾಟಕ, ಉತ್ತರ ಪ್ರದೇಶ, ಮಹಾರಾಷ್ಟ್ರ

ಇತ್ತೀಚಿನ ಚರ್ಚೆಯ ನೋಟ: ಸಮಾಜದ ಬಗ್ಗೆ ಕಳಕಳಿ ಇರುವವರು ಇಲ್ಲದಿದ್ದರೆ ಚರ್ಚೆ ಹೇಗೆ ಕುಸಿತವಾಗುತ್ತ ಹೋಗುತ್ತದೆ ಎಂಬುದಕ್ಕೆ ಇತ್ತೀಚಿನ ವರ್ಷಗಳ ಸದನದ ಕಲಾಪ ನೋಡಿದರೆ ತಿಳಿಯುತ್ತದೆ. ಅದಕ್ಕೆ ಉದಾಹರಣೆ ಎಂದರೆ, 13 ಖಾಸಗಿ ವಿವಿಗಳಿಗೆ ಅನುಮತಿ ನೀಡುವ ವಿಚಾರ ಕೆಲವೇ ನಿಮಿಷಗಳಲ್ಲಿ ಅಂಗೀಕಾರವಾಗುತ್ತದೆ. ಎನ್​ಇಪಿ ಬಗ್ಗೆ, ಆರೋಗ್ಯ ಸಮಸ್ಯೆಗಳ ಬಗ್ಗೆ ಯಾವ ಮಟ್ಟದಲ್ಲಿ ಚರ್ಚೆಯಾಗಬೇಕಾಗಿತ್ತೋ ಆಗಲಿಲ್ಲ.

ಪರಿಷತ್​ನಲ್ಲಿದ್ದ ಕೆಲ ಗಣ್ಯರು: ಅಬ್ದುಲ್ ನಜೀರ್ ಸಾಬ್, ಡಾ.ಎಂ.ಆರ್. ತಂಗಾ, ಡಾ.ವಿ.ಎಸ್. ಆಚಾರ್ಯ, ಎಸ್.ಆರ್. ಬೊಮ್ಮಾಯಿ, ರಾಮಕೃಷ್ಣ ಹೆಗಡೆ, ಎಸ್.ಎಂ. ಕೃಷ್ಣ, ಎಚ್.ಎಂ.ಚನ್ನಬಸಪ್ಪ, ಕೆ.ಸಿ.ರೆಡ್ಡಿ, ಚನ್ನಯ್ಯ ಒಡೆಯರ್, ಎಲ್.ಜಿ. ಹಾವನೂರು, ಕರುಂಬಳ್ಳಿ ಸಂಜೀವಶೆಟ್ಟಿ, ಕೋಣಂದೂರು ಲಿಂಗಪ್ಪ, ಪ್ರೊ.ಲಕ್ಷ್ಮೀಸಾಗರ್, ಎಸ್.ಮಲ್ಲಿಕಾರ್ಜುನಯ್ಯ, ಡಿ.ಬಿ.ಚಂದ್ರೇಗೌಡ, ರಾಮಚಂದ್ರಗೌಡ, ಬಿ.ಬಿ.ಶಿವಪ್ಪ, ಎ.ಕೆ.ಸುಬ್ಬಯ್ಯ, ಬಿ.ಎಲ್.ಶಂಕರ್ ಹೀಗೆ ಹೆಸರು ಸಾಗುತ್ತದೆ. ನಾಮನಿರ್ದೇಶನಗೊಂಡವರು ಸಹ ಘಟಾನುಘಟಿಗಳಿದ್ದಾರೆ. ಮಲ್ಲಿಕಾರ್ಜುನ ಮನ್ಸೂರು, ವಿದ್ಯಾಧರ ಗುರೂಜಿ, ಆರತಿ, ಡಾ.ಎಂ.ಅಕ್ಬರ್ ಅಲಿ, ಬಸವರಾಜ ಕಟ್ಟೀಮನಿ, ರುಮಾಲೆ ಚನ್ನಬಸಪ್ಪ, ಟಿ.ಚೌಡಯ್ಯ, ಡಿ.ವಿ.ಗುಂಡಪ್ಪ, ಖಾದ್ರಿ ಶಾಮಣ್ಣ, ಬಿ.ಜಯಮ್ಮ, ಎಸ್.ಆರ್. ಲೀಲಾ, ಡಾ.ವಿಜಯ ಸಂಕೇಶ್ವರ, ಎಚ್.ಎಲ್. ನಾಗೇಗೌಡ, ಎಚ್.ನರಸಿಂಹಯ್ಯ, ಚಂದ್ರಶೇಖರ ಕಂಬಾರ, ಎಂ.ಸಿ.ಮೋದಿ, ಸರಿತಾ ಕುಸುಮಾಕರ ದೇಸಾಯಿ, ದೊಡ್ಡ ರಂಗೇಗೌಡ, ಏಜಾಸುದ್ದೀನ್, ಗಂಗೂಬಾಯಿ ಹಾನಗಲ್, ಬಸವರಾಜ ಕಟ್ಟೀಮನಿ, ಡಾ.ಸಿದ್ದಲಿಂಗಯ್ಯ, ಎನ್.ಮಾಧವರಾವ್, ಮಹದೇವ ಬಣಕಾರ್ ಹೀಗೆ ಅನೇಕ ತಜ್ಞರು ನಾಮಕರಣಗೊಂಡು ಪರಿಷತ್​ನ ಘನತೆ ಹೆಚ್ಚಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net