ಅಭ್ಯರ್ಥಿ ಆಯ್ಕೆ ಹೈ ಹೊಣೆ: ಹೈಕಮಾಂಡ್ ವಿವೇಚನೆ ಎಂದ ಡಿಕೆಶಿ

dks
Published on

ಬೆಂಗಳೂರು: ವಿಧಾನ ಪರಿಷತ್​ನ ಏಳು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಪಕ್ಷಕ್ಕೆ ಸಿಗುವ ಎರಡು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಕಾಂಗ್ರೆಸ್​ನಲ್ಲಿ ಕಸರತ್ತು ಮುಂದುವರಿದಿದ್ದು, ಅರ್ಜಿ ಸಲ್ಲಿಸಿದ ಎಲ್ಲರ ವಿವರವನ್ನು ಹೈಕಮಾಂಡ್​ಗೆ ಸಲ್ಲಿಸಿ ಕೈತೊಳೆದುಕೊಳ್ಳಲು ರಾಜ್ಯ ನಾಯಕರು ನಿರ್ಧರಿಸಿದ್ದಾರೆ.

ಸೋಮವಾರವೇ ರಾಜ್ಯದಿಂದ ಕೆಪಿಸಿಸಿ ಕಡೆಯಿಂದ ಶಿಫಾರಸು ದೆಹಲಿಗೆ ರವಾನೆಯಾಗಿತ್ತು ಎನ್ನಲಾಗಿತ್ತು. ಇದನ್ನು ರಾಜ್ಯದ ಮುಖಂಡರೂ ಖಾತ್ರಿಪಡಿಸಿದ್ದರು. ಆದರೆ, ಪುನಃ ಮಂಗಳವಾರ ಈ ಸಂಬಂಧ ಸಭೆಗಳು ನಡೆದವು. ಬೆಳಗ್ಗೆಯಿಂದಲೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮನೆಗೆ ಆಕಾಂಕ್ಷಿಗಳು ಒಬ್ಬೊಬ್ಬರಾಗಿ ಆಗಮಿಸಿದರು. ಕೆಲವರು ಅವಕಾಶ ಸಿಗುವುದು ಅನುಮಾನ ಎಂದು ಖಾತ್ರಿಯಾಗುತ್ತಿದಂತೆ ಅಲ್ಲಿಂದ ಹೊರ ನಡೆದರು.

ಪಕ್ಷದ ನಿಷ್ಠಾವಂತರನ್ನು ಗುರುತಿಸಿ ಟಿಕೆಟ್ ನೀಡಬೇಕು. ಲಾಬಿ ಮಾಡುತ್ತಿರುವ ಬಂಡವಾಳ ಶಾಹಿಗಳಿಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡುವುದು ಬೇಡ. | ಎಂ.ಡಿ.ಲಕ್ಷ್ಮೀನಾರಾಯಣ ಆಕಾಂಕ್ಷಿ

‘ನಾನು ಪಕ್ಷದಲ್ಲಿ ಹಿರಿಯ, ನಾನು ಕೂಡ ಆಕಾಂಕ್ಷಿ. ಮತ್ತೊಮ್ಮೆ ಅವಕಾಶ ಕೊಡುವಂತೆ ಕೇಳಿದ್ದೇನೆ. ಮೇಲ್ಮನೆ ಹಿರಿಯರ ಸದನ, ಅನುಭವ ಇರುವವರಿರಬೇಕು. ಸಂಜೆ ಅಂತಿಮ ಮಾಡ್ತೇವೆ ಎಂದಿದ್ದಾರೆ. ನೊಡೋಣ ಏನ್ಮಾಡ್ತಾರೋ ಗೊತ್ತಿಲ್ಲ’ ಎಂದು ಎಚ್.ಎಂ.ರೇವಣ್ಣ ಬೇಸರದಲ್ಲೇ ಸಭೆಯಿಂದ ಹೊರ ಹೋದರು.

ಇನ್ನೊಂದೆಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಜತೆ ಚರ್ಚೆ ನಡೆಸಿ ಬಳಿಕ ಸಿದ್ದರಾಮಯ್ಯ ಮನೆಗೆ ಆಗಮಿಸಿ ಸಮಾಲೋಚನೆ ನಡೆಸಿದರು. ನಂತರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ಸಿದ್ದರಾಮಯ್ಯರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ. ಟಿಕೆಟ್ ಕುರಿತು ನಮಗೆ ಬಂದಿರುವ ಅರ್ಜಿಗಳನ್ನು ಹೈಕಮಾಂಡ್​ಗೆ ಕಳುಹಿಸಲಾಗಿದ್ದು, ನಮ್ಮ ಕರ್ತವ್ಯ ನಾವು ಮಾಡಿದ್ದೇವೆ. ಈ ವಿಚಾರದಲ್ಲಿ ನಮ್ಮ ನಾಯಕರು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು. ಇನ್ನು ಪದಗ್ರಹಣ ಕಾರ್ಯಕ್ರಮವನ್ನು ಜು.2ರಂದು ಮಾಡುವುದಾಗಿ ನಾಯಕರು ತಿಳಿಸಿದ್ದಾರೆ. ಅದನ್ನು ಹೇಗೆ ಮಾಡಬೇಕು ಎಂಬುದರ ಬಗ್ಗೆ ರ್ಚಚಿಸಿದೆವು ಎಂದು ಹೇಳಿದರು.

ನಸೀರ್ ಪ್ರಸ್ತಾಪಕ್ಕೆ ಆಕ್ಷೇಪ: ರಾಜ್ಯ ಘಟಕದ ಚಟುವಟಿಕೆ ನಡುವೆ ಆಕಾಂಕ್ಷಿಗಳು ದೆಹಲಿ ಮಟ್ಟದಲ್ಲೂ ಒತ್ತಡ ತರಲಾರಂಭಿಸಿದ್ದಾರೆ. ಟಿಕೆಟ್ ಆಕಾಂಕ್ಷಿಗಳಾದ ರಾಜೀವ್ ಗೌಡ, ಸೂರಜ್ ಹೆಗ್ಡೆ ಹೈಕಮಾಂಡ್ ಗಮನ ಸೆಳೆಯಲು ಯತ್ನಿಸಿದ್ದಾರೆ. ಮುದ್ದ ಹನುಮೇಗೌಡ ಇ-ಮೇಲ್ ಮೂಲಕ ಈ ಹಿಂದೆ ಪಕ್ಷ ಕೊಟ್ಟ ಭರವಸೆ ನೆನಪಿಸಿದ್ದಾರೆ. ಇನ್ನೊಂದು ಬೆಳವಣಿಗೆಯಲ್ಲಿ ಪಕ್ಷದ ರಾಜ್ಯ ಘಟಕ ನಸೀರ್ ಅಹ್ಮದ್ ಬಗ್ಗೆ ಒಲವು ವ್ಯಕ್ತಪಡಿಸಿದ್ದಾಗಲೇ ಮಾಜಿ ಸಂಸದ ಮುನಿಯಪ್ಪ ದನಿ ಎತ್ತಿ ಅವರ ಆಯ್ಕೆಗೆ ತಡೆ ಹಾಕಿದರು.

ಜೆಡಿಎಸ್​ನಲ್ಲಿ ಹೊಸ ಹೆಸರು ಮುನ್ನೆಲೆಗೆ!   ಜೆಡಿಎಸ್​ನಲ್ಲಿ ಮೇಲ್ಮನೆ ಚುನಾವಣೆಗೆ ದಿನ ಕಳೆದಂತೆ ಹೊಸ ಹೆಸರು ಸೇರ್ಪಡೆಯಾಗುತ್ತಿವೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಸೋಮವಾರ ನಡೆಸಿದ ಸಭೆಯಲ್ಲಿ ಚರ್ಚೆಗೆ ಬಾರದ ಹೆಸರು ಈಗ ರಾಜಕೀಯ ವಲಯದಲ್ಲಿ ಮುನ್ನೆಲೆಗೆ ಬಂದು ನಿಂತಿವೆ. ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಗುರುವಾರ ಹೆಸರು ಪ್ರಕಟಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಸೋಮವಾರ ಸಭೆಯಲ್ಲಿ ಪ್ರಸ್ತಾಪಗೊಳ್ಳದೇ ಇರುವ ಕೋಲಾರದ ಇಂಚರ ಗೋವಿಂದರಾಜು ಹಾಗೂ ಕಬಡ್ಡಿ ಬಾಬು ಅವರ ಹೆಸರು ಜೆಡಿಎಸ್ ಪಾಳಯದಲ್ಲಿ ಚರ್ಚೆಗೆ ಬಂದಿವೆ. ಈ ಇಬ್ಬರ ಜತೆಗೆ ಕುಪೇಂದ್ರ ರೆಡ್ಡಿ, ಟಿ.ಎ.ಶರವಣ ಹೆಸರು ಚಾಲ್ತಿಯಲ್ಲಿದ್ದು, ಯಾರಿಗೆ ಅದೃಷ್ಟ ಒಲಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net