

ಬೆಂಗಳೂರು: ಕಾಂಗ್ರೆಸ್ನವರು ಬಿಜೆಪಿ ಕಾರ್ಯಕರ್ತರ ವಿರುದ್ಧ ಹಾಕುವ ಕೇಸ್ಗಳನ್ನು ಎದುರಿಸಲು ಕಾನೂನು ಹೆಲ್ಪ್ಲೈನ್ ಜಾರಿಗೆ ಬರಲಿದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. ರಾಜ್ಯದ ವಿವಿಧ ಭಾಗದ ವಕೀಲರನ್ನು ಒಳಗೊಂಡಂತೆ ಇಂದು ಬಿಜೆಪಿ ಕಚೇರಿಯಲ್ಲಿ ನಡೆದ ಕಾನೂನು ಪ್ರಕೋಷ್ಠ ಸಭೆ ಬಳಿಕ ಅವರು ಈ ವಿಷಯ ತಿಳಿಸಿದರು.
ಕಾಂಗ್ರೆಸ್ ಪಕ್ಷದ ಮುಖಂಡರರು ನಮ್ಮ ಕಾರ್ಯಕರ್ತರಿಗೆ ಧಮ್ಕಿ ಹಾಕುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ಕೊಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಹಿಂದೆಯೂ ಸಿದ್ದರಾಮಯ್ಯ ಅವಧಿಯಲ್ಲಿ ಹೀಗೆ ಮಾಡಿದ್ದರು. ಸುಮ್ಸುಮ್ನೆ ರೌಡಿ ಶೀಟರ್ ಕೇಸ್ ಹಾಕಿಸಿದ್ದರು ಎನ್ನುವ ಮೂಲಕ ಕಾನೂನು ಹೆಲ್ಪ್ಲೈನ್ ಅಗತ್ಯದ ಕುರಿತು ತೇಜಸ್ವಿ ಸೂರ್ಯ ವಿವರಿಸಿದರು.
ಹಿಂದೂ ಪರವಾಗಿ ಸೋಷಿಯಲ್ ಮೀಡಿಯಾ ಪೋಸ್ಟ್ ಮಾಡುವವರ ಮೇಲೆ ಕೇಸ್ ಹಾಕಿಸುತ್ತಿದ್ದಾರೆ. ಈ ಮೊದಲೂ ಕೇಸ್ಗಳನ್ನು ಹಾಕಿದ್ದರು. ಆದ್ದರಿಂದ ಕಾಂಗ್ರೆಸ್ ಪಕ್ಷದ ಕಾನೂನಿನ ದೌರ್ಜನ್ಯವನ್ನು ಎದುರಿಸಲು ನಾವು ಸಿದ್ಧತೆ ಮಾಡಿಕೊಂಡಿದ್ದೇವೆ. ಮುಂದೆ ನಮ್ಮ ಕಾರ್ಯಕರ್ತರ ಸಹಾಯಕ್ಕೆಂದೇ ಕಾನೂನು ಹೆಲ್ಪ್ಲೈನ್ ಆರಂಭಿಸಲಾಗುವುದು ಎಂದರು.
ದಿನದ 24 ಗಂಟೆಯೂ ಕೆಲಸ ಮಾಡಲಿರುವ ಈ ಹೆಲ್ಪ್ಲೈನ್ಗೆ ಕಾರ್ಯಕರ್ತರು ರಾಜ್ಯದ ಯಾವ ಭಾಗದಿಂದ ಬೇಕಿದ್ದರೂ ಫೋನ್ ಮಾಡಬಹುದು. ರಾಜ್ಯದಲ್ಲಿ ವಕೀಲರ ಮೂರು ತಂಡಗಳು ಇದರಲ್ಲಿ ತೊಡಗಿಸಿಕೊಳ್ಳಲಿವೆ. ಬೆಂಗಳೂರು, ಧಾರವಾಡ ಮತ್ತು ಕಲಬುರಗಿಯಲ್ಲಿ ಈ ವಕೀಲರ ತಂಡಗಳು ಕೆಲಸ ಮಾಡಲಿವೆ ಎಂದು ಸಂಸದರು ತಿಳಿಸಿದರು.