ಆತ್ಮರಕ್ಷಣೆಗೆ ಕರಾಟೆ ಕಲಿಕೆ ಸಹಕಾರಿ

sgr karate
ಸಾಗರದ ಕರಾಟೆ ಅಸೋಸಿಯೇಷನ್ ಆಯೋಜಿಸಿದ್ದ ಸಮಾರಂಭದಲ್ಲಿ ಕರಾಟೆ ಕ್ರೀಡಾಪಟುಗಳಿಗೆ ಸನ್ಮಾನಿಸಲಾಯಿತು. ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ್, ನಂದಾ ಗೊಜನೂರು, ಜಿ.ನಾಗೇಶ್, ಶಿಯಾನ್ ಪಂಚಪ್ಪ, ವಿನೋದ್ ಇತರರಿದ್ದರು.
Published on

ಸಾಗರ: ಯುವಜನರು ಬಾಲ್ಯದಿಂದಲೇ ಕರಾಟೆ ಮತ್ತಿತರ ಆತ್ಮರಕ್ಷಣಾ ಕಲೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಡಿವೈಎಸ್ಪಿ ಗೋಪಾಲಕೃಷ್ಣ ಟಿ. ನಾಯಕ್ ಹೇಳಿದರು.

ಸಾಗರದ ಮಹಿಳಾ ಮಂಡಳಿ ಸಭಾಭವನದಲ್ಲಿ ಭಾನುವಾರ ಸಾಗರ ಕರಾಟೆ ಅಸೋಸಿಯೇಷನ್‌ನಿಂದ ಆಯೋಜಿಸಿದ್ದ ಕರಾಟೆ ಕ್ರೀಡಾಪಟುಗಳ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ಕೇವಲ ಪಠ್ಯಕ್ಕೆ ಸೀಮಿತವಾಗಿರಬೇಕು ಎನ್ನುವ ಭಾವನೆಯಿಂದ ಪಾಲಕರು ಹೊರಬರಬೇಕು. ಓದು ಎಷ್ಟು ಮುಖ್ಯವೋ ದೈಹಿಕ, ಮಾನಸಿಕವಾಗಿ ಗಟ್ಟಿಗೊಳಿಸುವ ಕ್ರೀಡಾ ಚಟುವಟಿಕೆಗಳು ಸಹ ಮಕ್ಕಳ ಭವಿಷ್ಯಕ್ಕೆ ಅಗತ್ಯ. ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿದರೆ ಭವಿಷ್ಯದಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಉತ್ತೇಜನ ನೀಡಿದಂತಾಗುತ್ತದೆ. ಕ್ರೀಡೆಗೆ ನಿರಂತರತೆ ಮತ್ತು ಶ್ರದ್ಧೆ ಮುಖ್ಯ ಎಂದರು.
ಸಾಗರ ಬಿಇಒ ಇ.ಪರಶುರಾಮಪ್ಪ ಮಾತನಾಡಿ, ದೈಹಿಕವಾಗಿ ಸದೃಢವಾಗಿದ್ದರೆ ಮಾತ್ರ ಮಕ್ಕಳು ಓದಿನಲ್ಲಿ ಹೆಚ್ಚು ಆಸಕ್ತಿಯಿಂದ ತೊಡಗಿಕೊಳ್ಳುತ್ತಾರೆ. ಬದಲಾದ ದಿನಗಳಲ್ಲಿ ಸ್ವಯಂ ರಕ್ಷಣೆಗಾಗಿ ಹೆಣ್ಣುಮಕ್ಕಳು ಅಗತ್ಯವಾಗಿ ಕರಾಟೆ ಕಲಿಯಲು ಮುಂದಾಗಬೇಕು. ಶಿಯಾನ್ ಪಂಚಪ್ಪ ನೇತೃತ್ವದಲ್ಲಿ ಸಾಗರದಲ್ಲಿ ಕರಾಟೆ ಕಲಿಯುವ ಸಂಸ್ಕೃತಿಗೆ ಮುನ್ನುಡಿ ಬರೆಯಲಾಗಿದೆ. ದೇಶ, ವಿದೇಶದ ಮಕ್ಕಳ ಜತೆ ಸರಿಸಮಾನವಾಗಿ ಸ್ಪರ್ಧಿಸಿ ಐವತ್ತಕ್ಕೂ ಹೆಚ್ಚು ಪದಕ ಗಳಿಸಿ ಸಾಗರಕ್ಕೆ ಕೀರ್ತಿ ತಂದ ಮಕ್ಕಳ ಸಾಧನೆ ಅಮೂಲ್ಯ ಎಂದರು.
ಜಿಪಂ ಮಾಜಿ ಸದಸ್ಯ ರತ್ನಾಕರ ಹೊನಗೋಡು ಮಾತನಾಡಿ, ದೈಹಿಕ ಮತ್ತು ಮಾನಸಿಕ ದೃಢತೆ ಮಕ್ಕಳಿಗೆ ಅಗತ್ಯ. ಕರಾಟೆ ಕಲಿಕೆ ಮೂಲಕ ಎರಡನ್ನೂ ರೂಢಿಸಿಕೊಳ್ಳಲು ಸಾಧ್ಯವಿದೆ. ತರಬೇತುದಾರ ಪಂಚಪ್ಪ ಮಕ್ಕಳನ್ನು ಉತ್ತಮ ಕ್ರೀಡಾಪಟುವಾಗಿ ಸಜ್ಜುಗೊಳಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಕರಾಟೆ ಕಲಿಕೆಗೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿ ಮಹಿಳಾ ಸಮಾಜದ ಅಧ್ಯಕ್ಷೆ ನಂದಾ ಗೊಜನೂರು, ಪತ್ರಕರ್ತ ಜಿ.ನಾಗೇಶ್, ಕರಾಟೆ ತರಬೇತುದಾರ ಶಿಯಾನ್ ಪಂಚಪ್ಪ, ವಿನೋದ್ ಶಿವಮೊಗ್ಗ, ಮಣಿಕಂಠ, ಕಿರಣಕುಮಾರ್, ರೇಖಾ, ಸುಧಾಕರ ಕುಗ್ವೆ , ಸನ್ನಿಧಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net