ಕನ್ನಡ ಮಾತನಾಡಿ..! ವೈರಲ್ ಆಗ್ತಿದೆ ಬೆಂಗಳೂರು 'ಆಟೋ ಕನ್ನಡಿಗ'ನ ಈ ವಿನೂತನ ಪ್ರಯತ್ನ | Kannada

auto kannadiga
Published on

ಬೆಂಗಳೂರು: ರಾಜ್ಯ ರಾಜಧಾನಿಗೆ ವಲಸೆ ಬರುವ ಅದೆಷ್ಟೋ ಸಂಖ್ಯೆಯ ಮಂದಿ, ಇಲ್ಲಿನ ನೆಲ, ಜಲ, ಉದ್ಯೋಗ ಬಯಸಿದ್ದೇ ಆದರೂ ಕನ್ನಡ ಭಾಷೆಯನ್ನು ಕಲಿತು, ವ್ಯವಹರಿಸಲು ಅಸಡ್ಡೆ ತೋರುತ್ತಾರೆ. ಕರುನಾಡಿನಲ್ಲಿ ಸ್ಪಷ್ಟ ಕನ್ನಡ (Kannada) ಮಾತನಾಡಲು ಬರದಿದ್ದರು ಪರವಾಗಿಲ್ಲ, ಕನಿಷ್ಠ ಪಕ್ಷ ಒಂದು ಚಿಕ್ಕ ಪ್ರಾಮಾಣಿಕ ಪ್ರಯತ್ನವಾದರೂ ಬೇಕು. ಅದನ್ನೂ ಸಹ ಮಾಡಲು ಕೆಲವು ವಲಸಿಗರು ಇಚ್ಛಿಸದೆ ಇರುವುದು ಅನೇಕ ಕನ್ನಡಿಗರಿಗೆ ಘಾಸಿಯುಂಟು ಮಾಡುತ್ತದೆ. ಈ ವಿಚಾರವಾಗಿ ಕನ್ನಡಿಗರು ಮತ್ತು ವಲಸಿಗರ ನಡುವೆ ಆಗಾಗ್ಗೆ ಜಟಾಪಟಿ ನಡೆಯುತ್ತಿರುತ್ತದೆ. ಇದಕ್ಕೆ ಇತ್ತೀಚೆಗೆ ನಡೆದ ಒಂದು ಘಟನೆ ಒಂದೊಳ್ಳೆ ನಿದರ್ಶನ ಎಂದೇ ಹೇಳಬಹುದು.

ಕಳೆದ ತಿಂಗಳು ಉತ್ತರ ಭಾರತದಿಂದ ಬೆಂಗಳೂರಿಗೆ ಉದ್ಯೋಗ ಅರಸಿ ಬಂದಿದ್ದ ಸುಗಂಧ ಶರ್ಮ ಎಂಬ ಮಹಿಳೆ, ಬೆಂಗಳೂರು ಸರಿಯಿಲ್ಲ, ಇಲ್ಲಿನ ಜನರ ನಡವಳಿಕೆ ಒಪ್ಪುವಂತದ್ದಲ್ಲ. ಉತ್ತರ ಭಾರತೀಯರು ಇಲ್ಲಿ ಇರದೆ ಹೋದರೆ, ನಿಮ್ಮ ಬೆಂಗಳೂರು ಖಾಲಿಯಾಗುತ್ತದೆ. ಇಲ್ಲಿರುವ ಪಬ್​, ರೆಸ್ಟೋರೆಂಟ್​ಗಳು ನಾವಿಲ್ಲದೆ ಬಿಕೋ ಎನ್ನುತ್ತದೆ. ಕೋರಮಂಗಲದಂತಹ ಐಟಿ ಸೆಂಟರ್​ಗಳಿರುವ ನಗರಗಳು ಖಾಲಿ ಖಾಲಿ ಹೊಡೆಯುತ್ತವೆ ಎಂದು ದುರಂಹಕಾರದ ಮಾತುಗಳನ್ನಾಡಿದ್ದರು. ಅದಾದ ನಂತರ ಆಕೆಗೆ ಆದ ಶಿಕ್ಷೆ ಎಲ್ಲರಿಗೂ ಗೊತ್ತೇ ಇದೆ. ಹೀಗೆ ಕನ್ನಡ ಭಾಷೆಯನ್ನು ಪ್ರೀತಿಯಿಂದ ಕಲಿಯಲು ಹಿಂದೇಟು ಹಾಕುವ ಎಷ್ಟೋ ವಲಸಿಗರಿಗೆ ಇಲ್ಲೊಬ್ಬ ಆಟೋ ಚಾಲಕ ವಿನೂತನ ರೀತಿಯಲ್ಲಿ ಕನ್ನಡ ಕಲಿಸುವ ಪ್ರಯತ್ನದಲ್ಲಿ ತೊಡಗಿರುವುದು ಇದೀಗ ಎಲ್ಲರ ಗಮನ ಸೆಳೆದಿದೆ.

'ಲರ್ನ್​​ ಕನ್ನಡ' ಎಂದು ಆಂಗ್ಲ ಭಾಷೆಯಲ್ಲಿ ವಲಸಿಗರಿಗೆ ಅರ್ಥವಾಗಲಿ ಎಂದು ನಾಮಫಲಕದಲ್ಲಿ ಬರೆದಿರುವ ಈ ಬೆಂಗಳೂರಿನ ಆಟೋ ಚಾಲಕ, ನಮ್ಮ ಸ್ಥಳೀಯ ಭಾಷೆಯನ್ನು ಕಲಿಯಿರಿ, ಇಲ್ಲಿನ ಜನರೊಂದಿಗೆ ಕನ್ನಡದಲ್ಲಿಯೇ ವ್ಯವಹರಿಸಿ ಎಂಬ ಮನವಿಯನ್ನು ಬಹಳ ಸುಂದರವಾಗಿ ತಮ್ಮ ಆಟೋ ಹತ್ತುವ ಪ್ರಯಾಣಿಕರ ಮುಂದಿಟ್ಟಿದ್ದಾರೆ. 'ಲರ್ನ್​ ಕನ್ನಡ ವಿತ್​ ಆಟೋ ಕನ್ನಡಿಗ' ಎಂದು ಬರೆದಿರುವ ಹಳದಿ ಕಾರ್ಡ್​ ಅನ್ನು ತಮ್ಮ ಪ್ರಯಾಣಿಕರಿಗೆ ತೋರಿಸುವ ಈ ಚಾಲಕ, ಪ್ರತಿಯೊಬ್ಬರು ಕನ್ನಡ ಕಲಿಯಬೇಕು ಎಂದು ಒತ್ತಾಯ ಮಾಡದೆ, ಪ್ರೀತಿಯಿಂದ ಕಳಕಳಿ ಮನವಿ ಮಾಡಿಕೊಳ್ಳುತ್ತಾರೆ. ಸದ್ಯ ಬೆಂಗಳೂರು ಆಟೋ ಚಾಲಕನ ಈ ಪ್ರಯತ್ನ ನೆಟ್ಟಿಗರ ಗಮನಸೆಳೆದಿದ್ದು, ಕನ್ನಡ ಕಲಿಸುವ ನಿಮ್ಮ ಈ ಪ್ರಯತ್ನಕ್ಕೆ ಶುಭಹಾರೈಕೆ, ಒಳ್ಳೆಯದಾಗಲಿ ಎಂದು ಜಾಲತಾಣಗಳಲ್ಲಿ ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net