ಕರೊನಾ ಲಸಿಕೆ ಬಿಡುಗಡೆಗೆ ತರಾತುರಿ ಇಲ್ಲ; 9 ಕಂಪನಿಗಳ ಜಂಟಿ ಹೇಳಿಕೆ; ವರ್ಷಾಂತ್ಯಕ್ಕೂ ಅನುಮಾನ...!

vaccine
Published on

ನವದೆಹಲಿ: ಅತ್ಯಂತ ತುರಿಸಿನಿಂದ ಹಾಗೂ ಪೈಪೋಟಿಯಿಂದ ನಡೆಯುತ್ತಿದೆ ಕರೊನಾ ವೈರಸ್​ ನಿಗ್ರಹದ ಲಸಿಕೆ ಸಂಶೋಧನೆ ಕಾರ್ಯ. ಈ ತರಾತುರಿ ಒಂದು ಮಟ್ಟಿಗೆ ಇದು ಸಾರ್ವಜನಿಕ ವಲಯದಲ್ಲಿ ಭೀತಿಗೂ ಕಾರಣವಾಗಿತ್ತು. ತ್ವರಿತವಾಗಿ ಮಾರುಕಟ್ಟೆಗೆ ಪರಿಚಯಿಸಿಬೇಕು ಎಂಬ ಕಾರಣಕ್ಕೆ ಸುರಕ್ಷತೆಯನ್ನೇ ಕಡೆಗಣಿಸಬಹುದು ಎಂಬ ಆತಂಕವೂ ವ್ಯಕ್ತವಾಗಿತ್ತು.

ಆದರೆ, ನಾಗರಿಕರಿಗೆ ಅಂಥ ಭಯ ಬೇಡ ಎಂದು ಲಸಿಕೆ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿರುವ 9 ಕಂಪನಿಗಳು ಜಂಟಿ ಹೇಳಿಕೆ ಬಿಡುಗಡೆ ಮಾಡಿವೆ. ಸಂಶೋಧನೆ ವೇಳೆ ಎಲ್ಲ ಹಂತಗಳನ್ನು ಕಟ್ಟುನಿಟ್ಟಾಗಿ ಪೂರೈಸಲಾಗುವುದು ಹಾಗೂ ಉನ್ನತಮಟ್ಟದ ವೈಜ್ಞಾನಿಕ ಹಾಗೂ ನೈತಿಕ ಮೌಲ್ಯಗಳನ್ನು ಪಾಲಿಸಲಾಗುವುದು ಎಂದು ಹೇಳಿವೆ.

ಲಸಿಕೆಯ ಅಂತಿಮ ಹಂತದ ಪರೀಕ್ಷೆಗಳನ್ನು ನಡೆಸುತ್ತಿರುವ ಬ್ರಿಟನ್ನಿನ ಆಸ್ಟ್ರಾಜೆನೆಕಾ, ಅಮೆರಿಕದ ಮಾಡೆರ್ನಾ, ಫೈಝರ್​ ಸೇರಿ ಇದರಲ್ಲಿ ಸೇರಿವೆ. ಇದಲ್ಲದೇ, ನೋವಾವಾಕ್ಸ್​, ಸ್ಯಾನೋಫಿ, ಗ್ಲಾಕ್ಸೋಸ್ಮಿತ್​ಕ್ಲೈನ್​, ಜಾನ್​ಸನ್​ ಆ್ಯಂಡ್​ ಜಾನ್​ಸನ್​ ಬಯೋಎನ್​ಟೆಕ್​ ಹಾಗೂ ಮರ್ಕ್​ ಆ್ಯಂಡ್​ ಕಂಪನಿ ಇಂಥದ್ದೊಂದು ಭರವಸೆಯನ್ನು ಜನರಿಗೆ ನೀಡಿವೆ.

ಲಸಿಕೆ ನೀಡಿದ ವ್ಯಕ್ತಿಯ ಆರೋಗ್ಯ ಹಾಗೂ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಪ್ರಮಾಣ ಮಾಡಿವೆ. ಮೂರನೇ ಹಂತದ ಕ್ಲಿನಿಕಲ್​ ಟ್ರಯಲ್​ ನಡೆಸಿದ ಬಳಿಕವಷ್ಟೇ ಲಸಿಕೆಗೆ ಮಾನ್ಯತೆ ಪಡೆಯುವುದಾಗಿ ಹೇಳಿವೆ. ವಿವಿಧ ದೇಶಗಳಲ್ಲಿ ರಾಜಕೀಯ ಉದ್ದೇಶಗಳಿಗಾಗಿ ಲಸಿಕೆಯನ್ನು ತ್ವರಿತವಾಗಿ ಪೂರೈಸುವಂತೆ ಒತ್ತಡಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಈ ಹೇಳಿಕೆ ಹೊರಬಿದ್ದಿರುವುದು ಗಮನಾರ್ಹ ಸಂಗತಿಯಾಗಿದೆ.

ಅಮೆರಿಕದಲ್ಲಿ ನವೆಂಬರ್​ನಲ್ಲಿ ಅಧ್ಯಕ್ಷೀಯ ಚುನಾವಣೆಗಳು ನಡೆಯಲಿದ್ದು, ಅದಕ್ಕೂ ಮುನ್ನ ಲಸಿಕೆ ಬಿಡುಗಡೆಯಾಗಬೇಕೆಂದು ಟ್ರಂಪ್​ ಸರ್ಕಾರ ಭಾರಿ ಒತ್ತಡ ಹೇರಿದೆ. ಆದರೆ, ಅಮೆರಿಕ ಸರ್ಕಾರ ಲಸಿಕೆಗಾಗಿ ಒಪ್ಪಂದ ಮಾಡಿಕೊಂಡಿರುವ ಮಾಡೆರ್ನಾ, ಫೈಝರ್​, ಬಯೋಎನ್​ಟೆಕ್​ ಹಾಗೂ ಗ್ಲಾಕ್ಸೋಸ್ಮಿತ್​ಕ್ಲೈನ್​ ಕಂಪನಿಗಳು ಕೂಡ ತರಾತುರಿಗೆ ಮಣಿಯುವುದಿಲ್ಲ ಹೇಳಿರುವುದು ಟ್ರಂಪ್​ ಬಿಸಿತುಪ್ಪವಾದರೆ ಅಚ್ಚರಿಯಿಲ್ಲ. ಹೀಗಾದರೆ, ವರ್ಷಾಂತ್ಯಕ್ಕೂ ಲಸಿಕೆ ದೊರೆಯುವುದು ಅನುಮಾನವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net