

ನವದೆಹಲಿ: ಕರೊನಾ ಲಸಿಕೆ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿರುವ ಕಂಪನಿಗಳು ಔಷಧವನ್ನು ಮಾರುಕಟ್ಟೆಗೆ ಪರಿಚಯಿಸಲು ಇನ್ನು ಕೆಲ ತಿಂಗಳಾದರೂ ಬೇಕು ಎನ್ನುತ್ತಿವೆ. ಆದರೆ ಇನ್ನೊಂದೆಡೆ, ಸದ್ದಿಲ್ಲದೇ ಲಸಿಕೆಯನ್ನು ಸಂಶೋಧಿಸಿ, ನೋಂದಣಿಯನ್ನು ಮಾಡಿ ಸಾರ್ವತ್ರಿಕ ಬಳಕೆಗೆ ಮುಕ್ತವಾಗಿಸುತ್ತಿರುವ ರಷ್ಯಾ 3.2 ಕೋಟಿ ಡೋಸ್ ಲಸಿಕೆಯನ್ನು ಮೆಕ್ಸಿಕೋಗೆ ಮಾರಾಟ ಮಾಡಲು ಮುಂದಾಗಿದೆ.
ರಷ್ಯಾ ಸರ್ಕಾರಿ ಅಧೀನದ ಮಾಸ್ಕೋದಲ್ಲಿರುವ ಗಾಮೆಲಿಯಾ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿರುವ ಸ್ಪುಟ್ನಿಕ್--ವಿ ಲಸಿಕೆ ನೋಂದಣಿಯಾಗಿದ್ದರೂ, ಮೂರನೇ ಹಂತದಲ್ಲಿ 40 ಸಾವಿರ ಜನರ ಮೇಲೆ ಪ್ರಯೋಗ ನಡೆಸುತ್ತಿದೆ. ಈ ಸಂಶೋಧನೆ ಧನ ಸಹಾಯ ಮಾಡಿದ್ದ ರಷ್ಯಾ ನೇರ ಹೂಡಿಕೆ ನಿಧಿ (ಆರ್ಡಿಐಎಫ್) ಮೆಕ್ಸಿಕೋಗೆ 3.2 ಕೋಟಿ ಡೋಸ್ ಲಸಿಕೆ ಮಾರಾಟ ಮಾಡಲು ಬುಧವಾರ ಒಪ್ಪಂದ ಮಾಡಿಕೊಂಡಿದೆ.
ಇದು ಲಸಿಕೆಗೆ ಸಂಬಂಧಿಸಿದಂತೆ ರಷ್ಯಾದ ಎರಡನೇ ಮಾರಾಟ ಒಪ್ಪಂದವಾಗಿದೆ. ಈ ಮೊದಲು ಆಗಸ್ಟ್ನಲ್ಲಿ ಕಜಕಿಸ್ತಾನ ಜತೆಗೆ ಖರೀದಿ ಒಪ್ಪಂದ ಮಾಡಿಕೊಂಡಿದೆ. ಆರಂಭದಲ್ಲಿ 20 ಲಕ್ಷ ಡೋಸ್ ಬಳಿಕ ಇದನ್ನು 50 ಲಕ್ಷ ಡೋಸ್ಗೆ ಹೆಚ್ಚಿಸುವ ಉದ್ದೇಶ ಹೊಂದಿದೆ.
ಕರೊನಾ ನಿಗ್ರಹಕ್ಕೆ ಜಗತ್ತಿನ ಮೊದಲ ಲಸಿಕೆ ಸಿದ್ಧವಾಗಿದೆ ಎಂದು ಘೋಷಿಸುತ್ತಿದ್ದಂತೆ, 10ಕ್ಕೂ ಹೆಚ್ಚು ದೇಶಗಳು ಲಸಿಕೆ 10 ಕೋಟಿಗೂ ಅಧಿಕ ಡೋಸ್ ಖರೀದಿಗೆ ಉತ್ಸುಕವಾಗಿವೆ ಎಂದು ರಷ್ಯಾ ಹೇಳಿತ್ತು.
ಈ ಲಸಿಕೆಯ ಉತ್ಪಾದನೆಗೆ ಭಾರತದ ನೆರವು ಕೋರಿರುವ ರಷ್ಯಾ, ಮೂರನೇ ಹಂತದ ಪರೀಕ್ಷೆಗೂ ಅನುಮತಿ ಪಡೆದುಕೊಂಡಿದೆ.