ಲಾಯರ್​ ಜಗದೀಶ್​, ಪುತ್ರ ಮತ್ತು ಗನ್​ಮ್ಯಾನ್​ ಬಂಧನ; ಹೀಗಿದೆ ಕಾರಣ | Lawyer Jagadish

ವಿಜಯವಾಣಿ - 2025-01-25T103427.362
Published on

Bengaluru: ನಿನ್ನೆ (ಜ.24) ಕೊಡಿಗೆಹಳ್ಳಿಯಲ್ಲಿರುವ ತಮ್ಮ ನಿವಾಸಕ್ಕೆ ತೆರಳುವ ಮಾರ್ಗವನ್ನು ಅಣ್ಣಮ್ಮ ಕೂರಿಸುವ ಸಲುವಾಗಿ ಯುವಕರು ಬಂದ್​ ಮಾಡಿದ್ದನ್ನು ಪ್ರಶ್ನಿಸಿದ್ದ ಲಾಯರ್ ಜಗದೀಶ್ (Lawyer Jagadish)​, ಸ್ಥಳೀಯರೊಂದಿಗೆ ಗಲಾಟೆ ಮಾಡಿಕೊಂಡರು. ತಾರಕಕ್ಕೇರಿದ ಮಾತಿನ ಜಟಾಪಟಿ ಹೊಡೆದಾಡುವ ಹಂತ ತಲುಪಿದ ಹಿನ್ನೆಲೆ ಸ್ಥಳೀಯರು ರೊಚ್ಚಿಗೆದ್ದು, ಜಗದೀಶ್​ಗೆ ಹಿಗ್ಗಾಮುಗ್ಗಾ ಥಳಿಸಿದರು. ಈ ಪ್ರಕರಣದಲ್ಲಿ ಈಗ ಜಗದೀಶ್​, ಅವರ ಪುತ್ರ ಮತ್ತು ಇಬ್ಬರು ಗನ್​ಮ್ಯಾನ್​ಗಳನ್ನು ಬೆಂಗಳೂರಿನ ಕೊಡಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ರಸ್ತೆ ಬಂದ್​ ಮಾಡಿದ್ದಕ್ಕೆ ಕಿರಿಕ್​

ಮೊನ್ನೆಯಷ್ಟೇ (ಜ.23) ಯುವಕರೊಂದಿಗೆ ಜಟಾಪಟಿ ಮಾಡಿಕೊಂಡಿದ್ದ ಜಗದೀಶ್​, ನಿನ್ನೆ (ಜ.24) ಕೊಡಿಗೇಹಳ್ಳಿಯಲ್ಲಿರುವ ತಮ್ಮ ನಿವಾಸಕ್ಕೆ ತೆರಳುವ ಮಾರ್ಗ ಮಧ್ಯೆ ಸ್ಥಳೀಯರೊಂದಿಗೆ ಮತ್ತೆ ಗಲಾಟೆ ಮಾಡಿಕೊಂಡರು. ಜಗದೀಶ್​ ನಡೆಯಿಂದ ಕುಪಿತಗೊಂಡ ಸ್ಥಳೀಯ ಯುವಕರು ಅವರ ಸ್ಕಾರ್ಪಿಯೋ ಕಾರಿನ ಮೇಲೆ ಏಕಾಏಕಿ ದಾಳಿ ನಡೆಸಿದ್ದು, ಕಾರನ್ನು ಹೊಡೆದು ಚಿಂದಿ ಮಾಡಿದ್ದಾರೆ. ಈ ಬೆಳವಣಿಗೆಯನ್ನು ಗಮನಿಸಿದ ಜಗದೀಶ್​ ಗನ್​ಮ್ಯಾನ್​ ತಕ್ಷಣವೇ ತಮ್ಮ ಬಳಿಯಿದ್ದ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಗುಂಡಿನ ಶಬ್ದಕ್ಕೆ ಯುವಕರ ಗುಂಪು ಚದುರಿತು. ಗುಂಡಿನ ಸದ್ದು ಕೇಳಿದ್ದೇ ತಡ ಜಗದೀಶ್​ ಮೇಲೆ ಯುವಕರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.

ತನ್ನ ಮುಖಕ್ಕೆ ಗುದ್ದಿ, ರಕ್ತ ಬರುವಂತೆ ಥಳಿಸಿದ ಕೆಲವರ ವಿರುದ್ಧ ಜಗದೀಶ್​ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು. ಇದಕ್ಕೆ ಸ್ಥಳೀಯರು ಪ್ರತಿ ದೂರು ನೀಡಿದರು. ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರು ಲಾಯರ್ ಜಗದೀಶ್​, ಅವರ ಪುತ್ರ ಮತ್ತು ಗನ್​ಮ್ಯಾನ್​ರನ್ನು ಬಂಧಿಸಿದ್ದು, ಕೋರ್ಟ್​ಗೆ ಹಾಜರುಪಡಿಸಲಿದ್ದಾರೆ ಎಂದು ವರದಿಯಾಗಿದೆ.

ಇಷ್ಟೆಲ್ಲ ರಂಪಾಟಕ್ಕೆ ಕಾರಣವೇನು?

ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿರುವ ತಮ್ಮ ನಿವಾಸವನ್ನು ಸಂಪರ್ಕಿಸುವ ಮಾರ್ಗವೊಂದರಲ್ಲಿ ಸ್ಥಳೀಯ ಯುವಕರು ಅಣ್ಣಮ್ಮ ಕೂರಿಸುವ ಸಲುವಾಗಿ ರಸ್ತೆಯನ್ನು ಬಂದ್​ ಮಾಡಿದ್ದರು. ಇದೇ ವಿಚಾರಕ್ಕೆ ಜಗದೀಶ್​ ಮತ್ತು ಅಲ್ಲಿನ ಯುವಕರ ಮಧ್ಯೆ ಗುದ್ದಾಟ ನಡೆದಿತ್ತು (ಜ.23). ಇದರ ವಿಡಿಯೋ ಕೂಡ ಜಾಲತಾಣಗಳಲ್ಲಿ ಹರಿದಾಡಿತ್ತು. ನಿನ್ನೆ (ಜ.24) ರಾತ್ರಿ ಸುಮಾರು 9 ಗಂಟೆಗೆ ಅದೇ ಮಾರ್ಗದಲ್ಲಿ ತನ್ನ ಕಾರಿನಲ್ಲಿ ಬಂದ ಜಗದೀಶ್​, ರಸ್ತೆ ಬಂದ್​ ಮಾಡಿದ್ದಕ್ಕಾಗಿ ಯುವಕರನ್ನು ತಮ್ಮದೇ ಶೈಲಿಯಲ್ಲಿ ಪ್ರಶ್ನಿಸಿದ್ದಾರೆ. ಈ ವಿಷಯಕ್ಕೆ ಇಬ್ಬರ ನಡುವೆ ಮಾರಾಮಾರಿ ನಡೆದು, ಜಗದೀಶ್​ ಕಾರನ್ನು ಪುಡಿಗಟ್ಟಿ, ಅವರ ಮೇಲೆ ಗಂಭೀರವಾಗಿ ಹಲ್ಲೆಗೈದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net