ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಟ್ವಿಟರ್​ಗೆ ಖಡಕ್​ ಎಚ್ಚರಿಕೆ ನೀಡಿದ ನೂತನ ಐಟಿ ಸಚಿವ!

Twitter
Published on

ನವದೆಹಲಿ: ಪ್ರಧಾನಿ ಮೋದಿ ಸಂಪುಟದಲ್ಲಿ ನೂತನ ಎಲೆಕ್ಟ್ರಾನಿಕ್ಸ್‌ ಮತ್ತು ಐಟಿ ಸಚಿವರಾಗಿ ಅಶ್ವಿನಿ ವೈಷ್ಣವ್​​ ಅಧಿಕಾರ ಸ್ವೀಕರಿಸುತ್ತಿದ್ದಂತೆ ಸಾಮಾಜಿಕ ಜಾಲತಾಣ ದೈತ್ಯ, ಟ್ವಿಟರ್​ಗೆ​ ಖಡಕ್​ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.

ಗುರುವಾರ ಮಧ್ಯಾಹ್ನ ಅಧಿಕಾರ ವಹಿಸಿಕೊಂಡ ಬಳಿಕ ಮಾತನಾಡಿದ ಅವರು "ಈ ನೆಲದ ಕಾನೂನು ಸರ್ವೋಚ್ಚ" ಎನ್ನುವ ಮೂಲಕ ಕೇಂದ್ರ ಹೊಸ ಐಟಿ ನಿಯಮಗಳನ್ನು ಅನುಸರಿಸುವಂತೆ ಒತ್ತಾಯಿಸಿದ್ದಾರೆ.

ಮೂರನೇ ವ್ಯಕ್ತಿಯ ವಿಷಯಗಳಿಗೆ ಸಾಮಾಜಿಕ ಜಾಲತಾಣ ವೆಬ್​ಸೈಟ್​ಗಳನ್ನು (50 ಲಕ್ಷಕ್ಕೂ ಹೆಚ್ಚು ಬಳಕೆದಾರರೊಂದಿಗೆ) ಹೊಣೆಗಾರರನ್ನಾಗಿ ಮಾಡುವ ಹೊಸ ಐಟಿ ನಿಯಮಗಳನ್ನು ಪಾಲಿಸುವ ಸಂಬಂಧ ಟ್ವಿಟರ್​ ಮತ್ತು ಸರ್ಕಾರದ ನಡುವೆ ಹಗ್ಗಜಗ್ಗಾಟ ನಡೆಯುತ್ತಿದೆ. ಇದರ ನಡುವೆಯೇ ನೂತನ ಐಟಿ ಸಚಿವರು ಎಚ್ಚರಿಕೆಯನ್ನು ನೀಡಿದ್ದಾರೆ.

ಇಂದು ಬೆಳಿಗ್ಗೆ ದೆಹಲಿ ಹೈಕೋರ್ಟ್​ಗೆ ಮಾಹಿತಿ ನೀಡಿರುವ ಟ್ವಿಟರ್​, ರೆಸಿಡೆಂಟ್​ ಗ್ರೀವಿಯನ್ಸ್ ಆಫೀಸರ್ ನೇಮಕ ಮಾಡಿಕೊಳ್ಳಲು 8 ವಾರಗಳ ಸಮಯ ಕೇಳಿದೆ. ಹೊಸ ನಿಯಮದ ಪ್ರಕಾರ ಭಾರತೀಯರನ್ನೇ ಗ್ರೀವಿಯನ್ಸ್ ಆಫೀಸರ್ ಆಗಿ ನೇಮಕ ಮಾಡಬೇಕು.

ನಿಯಮಗಳನ್ನು ಪಾಲಿಸಲು ವಿಫಲವಾಗಿದ್ದಕ್ಕೆ ನ್ಯಾಯಾಲಯವು ಟ್ವಿಟರ್‌ಗೆ ಎಚ್ಚರಿಕೆ ನೀಡಿದ ಎರಡು ದಿನಗಳ ನಂತರ ಟ್ವಿಟರ್​ 8 ವಾರಗಳ ಕಾಲಾವಕಾಶವನ್ನು ಕೇಳಿದೆ. ಭಾರತ ಮೂಲದ ಕುಂದುಕೊರತೆ ಅಧಿಕಾರಿಯನ್ನು ನೇಮಿಸಲು ಸರ್ಕಾರ ನಿಗದಿಪಡಿಸಿದ ಗಡುವನ್ನು ಕಂಪನಿ ಈಗಾಗಲೇ ಮೀರಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net