ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಕುಸಿತ: 'ಕೈ' ಸರ್ಕಾರದ ವಿರುದ್ಧ ಬಿ.ವೈ.ವಿಜಯೇಂದ್ರ ಕಿಡಿ | Government

dk (24)
Published on

ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ಕಳೆದ ಎರಡ್ಮೂರು ದಿನಗಳಿಂದ ದರೋಡೆ ಪ್ರಕರಣಗಳು ವರದಿಯಾಗುತ್ತಿವೆ. ಇದೇ ವಿಚಾರವನ್ನು ಪ್ರಸ್ತಾಪ ಮಾಡಿ ರಾಜ್ಯ ಸರ್ಕಾರದ(Government) ವಿರುದ್ಧ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.

ಈ ಕುರಿತು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದು, ಕಾನೂನು ಸುವ್ಯವಸ್ಥೆ ಕುಸಿದಿದ್ದು ಅರಾಜಕತೆ ಸೃಷ್ಠಿಯಾಗಿದೆ ಎಂದು ಟೀಕಿಸಿದ್ದಾರೆ.

''ರಾಜ್ಯದ ಗಡಿ ಜಿಲ್ಲೆಗಳನ್ನೇ ಗುರಿಯಾಗಿಸಿಕೊಂಡು ಜಾಲವೊಂದು ವ್ಯವಸ್ಥಿತವಾಗಿ ಬೀದರ್ ಬಳಿಕ ದಕ್ಷಿಣ ಕನ್ನಡದ ಉಲ್ಲಾಳದಲ್ಲೂ ಹಾಡು ಹಗಲೇ ಬಂದೂಕು ತೋರಿಸಿ ಕೋಟ್ಯಂತರ ರೂಪಾಯಿ ಹಣ ಹಾಗೂ ಚಿನ್ನ ಲೂಟಿಮಾಡಿರುವ ಘಟನೆ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದ್ದು ಅರಾಜಕತೆ ಉಂಟಾಗಿರುವುದನ್ನು ಸಾಕ್ಷೀಕರಿಸುತ್ತಿದೆ.'' ಎಂದಿದ್ದಾರೆ.

ಕರ್ನಾಟಕವೆಂದರೆ ಮಾಫಿಯಾಗಳು, ಅತ್ಯಾಚಾರಿಗಳು, ಡಕಾಯಿತರು ಹಾಗೂ ಭಯೋತ್ಪಾದಕರಿಗೆ ಸುರಕ್ಷಿತ ತಾಣ ಎಂಬ ಸಂದೇಶ ರವಾನೆಯಾಗುತ್ತಿರುವುದು ಕೈ ಸರ್ಕಾರದ ಆಡಳಿತದ ಕೆಟ್ಟ ವೈಫಲ್ಯದ ಫಲವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

'ಸಿರಿನಾಡು ಕರ್ನಾಟಕ ಇರಿಯುವ ರಕ್ಕಸರ ತವರೂರಾಗುತ್ತಿದೆ, ಕ್ರಿಮಿನಲ್ ಕರ್ನಾಟಕ ಎಂಬ ಅಪಕೀರ್ತಿ ಪಡೆದುಕೊಳ್ಳುತ್ತಿದೆ' ಎಂಬ ಆತಂಕ ಜನರನ್ನು ಕಾಡುತ್ತಿದೆ.

ಒಂದರಮೇಲೊಂದು ಕ್ರಿಮಿನಲ್ ಪ್ರಕರಣಗಳು ದಾಖಲಾಗುತ್ತಿವೆ. ಅತ್ಯಾಚಾರ, ಗುಂಡಾಗಿರಿ, ಕೊಲೆ, ದರೋಡೆ ಮೊದಲಾದ ಚಟುವಟಿಕೆಗಳು ನಿರಂತರ ನಡೆಯುತ್ತಿದ್ದರೂ ರಾಜ್ಯದ ಕಾಂಗ್ರೆಸ್ ಸರ್ಕಾರದ ನಿಷ್ಕ್ರಿಯ ಆಡಳಿತದಲ್ಲಿ ಜನತೆ ಆತಂಕದಿಂದ ಬದುಕುವಂತಾಗಿದೆ. ತಮ್ಮ ಹಣ ಚಿನ್ನ ಹಾಗೂ ಇತರ ಆಸ್ತಿಗಳಿಗೆ ಬ್ಯಾಂಕ್ ಸುರಕ್ಷಿತ ಎಂಬ ಭಾವನೆ ಕುಸಿಯುತ್ತಿದೆ ಎಂದು ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.

ಬ್ಯಾಂಕುಗಳಿಗೇ ರಕ್ಷಣೆ ನೀಡಲಾಗದ ಸರ್ಕಾರ ಜನಸಾಮಾನ್ಯರ ಪ್ರಾಣ ಹಾಗೂ ಆಸ್ತಿಗೆ ರಕ್ಷಣೆ ನೀಡಲು ಸಾಧ್ಯವೇ ? ಎಂದು ನಾಗರೀಕರು ಪ್ರಶ್ನಿಸುತ್ತಿದ್ದಾರೆ. ಮುಖ್ಯಮಂತ್ರಿಗಳು ಈ ಕೂಡಲೇ ಗೃಹ ಇಲಾಖೆಯ ಮೇಲೆ ನಿಯಂತ್ರಣ ಸಾಧಿಸಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡು ಜನರಲ್ಲಿ ರಕ್ಷಣೆಯ ಅಭಯ ನೀಡುವ ಹೆಜ್ಜೆಗಳನ್ನಿಡಲೇಬೇಕಿದೆ.

ಈ ನಿಟ್ಟಿನಲ್ಲಿ ತಮ್ಮ ನಿಷ್ಕ್ರಿಯತೆ ಹಾಗೂ ಉದಾಸೀನತೆಯನ್ನು ಮುಂದುವರೆಸಿದರೆ ಜನತೆ ತಮ್ಮನ್ನು ರಕ್ಷಿಸಿಕೊಳ್ಳಲು ಈ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಹೋರಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net