

ಬೆಂಗಳೂರು: ಪ್ರತಿಯೊಬ್ಬ ಭಾರತೀಯರಿಗೂ ಬಹಳ ಮುಖ್ಯವಾದ ದಾಖಲಾತಿ ಎಂದರೆ ಅದು ಆಧಾರ್ ಕಾರ್ಡ್. ಒಂದು ರೀತಿ ಎಲ್ಲಾ ಡಾಂಕ್ಯೂಮೆಂಟ್ಗಳ ಕಾರ್ಡ್ಗಳಿಗೆ ಅಧಿಪತಿಯೇ ಈ ಆಧಾರ್ ಕಾರ್ಡ್. ಇದೊಂದು ಚೀಟಿ ಸರಿಯಿದ್ದರೇ ಉಳಿದೆಲ್ಲವೂ ಕೂಡ ಬಹಳ ಸರಳ ಹಾಗೂ ಸುಲಭವಾಗಿ ಲಭ್ಯವಾಗುತ್ತದೆ. ಹೌದು, ನಾವು ಪಡಿತರ ಚೀಟಿ, ವಾಹನ ಪರವಾನಗಿ, ಪಾನ್ ಕಾರ್ಡ್, ಬ್ಯಾಂಕ್ ಖಾತೆ ಹೀಗೆ ಹಲವು ದಾಖಲಾತಿ ಪಡೆಯಲು ಸೇವಾ ಕೇಂದ್ರಗಳಿಗೆ ಭೇಟಿ ಕೊಟ್ಟಾಗ ಅವರು ನಮ್ಮನ್ನು ಮೊದಲು ಕೇಳುವುದೇ 'ಎಲ್ಲಿ ನಿಮ್ಮ ಆಧಾರ್ ಕೊಡಿ' ಎಂದು. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಈ 12 ಅಂಕಿಗಳ ವಿಶಿಷ್ಟ ಗುರುತಿನ ಸಂಖ್ಯೆ ಮಹತ್ವ ಬಹಳ ಇದೆ. ಆದ್ರೆ, ಈ ಮಧ್ಯೆ ಕೇಂದ್ರ ನೀಡಿರುವ ಗಡುವು ಇದೀಗ ಜನಸಾಮಾನ್ಯರಲ್ಲಿ ತಲ್ಲಣ ಮೂಡಿಸಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡುವ ಹಲವಾರು ಯೋಜನೆ, ಸೌಕರ್ಯಗಳ ಸದುಪಯೋಗ ಪಡೆಯಲು, ಬ್ಯಾಂಕ್ ಖಾತೆ ತೆರೆಯಲು, ಒಂದು ಸಣ್ಣ ಸಿಮ್ ಕಾರ್ಡ್ ಖರೀದಿ ಮಾಡಲು ಈ ಆಧಾರ್ ಕಾರ್ಡ್ ಅಗತ್ಯವಿದೆ. ಇದು ಸಾರ್ವಜನಿಕರ ಜೀವನದಲ್ಲಿ ಬಹಳ ದೊಡ್ಡ ಪಾತ್ರವನ್ನೇ ನಿರ್ವಹಿಸುತ್ತದೆ. ಒಬ್ಬ ವ್ಯಕ್ತಿಯ ಹೆಸರು, ವಿಳಾಸ, ಆಧಾರ್ ಸಂಖ್ಯೆ, ವಯಸ್ಸನ್ನು ಒಳಗೊಂಡಿರುವ ಆಧಾರ್ ಕಾರ್ಡ್ ತಿದ್ದುಪಡಿ ತುಂಬ ಅಗತ್ಯವಾದುದು. ಈ ವಿಷಯವನ್ನು ಗಮನದಲ್ಲಿಟ್ಟುಕೊಂಡ ಕೇಂದ್ರ ಸರ್ಕಾರ ಜನರಿಗೆ ತಮ್ಮ ಆಧಾರ್ನ ಚೀಟಿಯಲ್ಲಿ ಅಗತ್ಯವಿರುವ ತಿದ್ದುಪಡಿಯನ್ನು ಮಾಡಿಕೊಳ್ಳಲು ಈ ಹಿಂದೆಯೇ ಒಂದು ಗಡುವು ನೀಡಿತ್ತು. ಆದ್ರೆ, ಅದಕ್ಕೆ ಇಂದೇ ಕೊನೆ ದಿನಾಂಕ ಎಂಬ ವಿಷಯ ಸದ್ಯ ಅನೇಕರನ್ನು ಗಲಿಬಿಲಿಗೊಳಿಸಿದೆ.
ಯುಐಡಿಎಐ ನಿಯಮಗಳ ಪ್ರಕಾರ, ಪ್ರತಿ ಹತ್ತು ವರ್ಷಗಳಿಗೊಮ್ಮೆ ಆಧಾರ್ ವಿವರಗಳನ್ನು ನವೀಕರಿಸಬೇಕು. ಆಧಾರ್ ಕಾರ್ಡ್ ಅನ್ನು ಉಚಿತವಾಗಿ ಅಪ್ಡೇಟ್ ಮಾಡಲು ಸೆಪ್ಟೆಂಬರ್ 14ರವರೆಗೆ ಅವಕಾಶ ನೀಡಲಾಗಿತ್ತು. ಈ ಗಡುವು ವಿಸ್ತರಣೆ ಆಗಬಹುದು ಎಂಬ ಲೆಕ್ಕಾಚಾರ ಹಲವರಲ್ಲಿತ್ತು. ಆದ್ರೆ, ಅದಕ್ಕೆ ಜಾಗವಿಲ್ಲದಂತಾಗಿದೆ. ಇಂದೇ ಕೊನೆಯ ದಿನಾಂಕ ಎಂದು ಕೇಂದ್ರ ಘೋಷಿಸಿದೆ. ಅಕಸ್ಮಾತ್ ಇಂದು ನವೀಕರಿಸಲು ಸಾಧ್ಯವಾಗದಿದ್ದಲ್ಲಿ ಸೆ.14ರ ನಂತರ ಬದಲಾವಣೆಗಳನ್ನು ಮಾಡಿಕೊಳ್ಳಬಹುದು. ಆದ್ರೆ, 50 ರೂ. ದಂಡ ಪಾವತಿಸಿದರೆ ಮಾತ್ರ ಎಂಬುದು ಇಲ್ಲಿ ಗಮನಾರ್ಹ.
ಕಂಪ್ಯೂಟರ್ ಸೇವಾ ಕೇಂದ್ರಗಳಿಗೆ ಹೋಗಲು ನನ್ನ ಬಳಿ ಸಮಯವಿಲ್ಲ ಎನ್ನುವವರು ನಿಮ್ಮ ಕೈಬೆರಳ ಅಂಚಿನಲ್ಲಿ, ಅದು ಕೆಲವೇ ನಿಮಿಷಗಳಲ್ಲಿ ಉಚಿತವಾಗಿ ಆಧಾರ್ ಕಾರ್ಡ್ ನವೀಕರಿಸಿಕೊಳ್ಳಬಹುದಾಗಿದೆ. ಹೇಗೆ ಅಂತೀರಾ? ನಿಮ್ಮ ಈ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ. ಮೊದಲು ನಿಮ್ಮ ಮೊಬೈಲ್ನಲ್ಲಿ 'ಮೈ ಆಧಾರ್' ಪೋರ್ಟಲ್ ತೆರೆದರೆ ಅಲ್ಲಿ ಅನೇಕ ಆಯ್ಕೆಗಳು ನಿಮಗೆ ಕಾಣಸಿಗುತ್ತವೆ.