ಲಾರ್ವಾ ಸಮೀಕ್ಷೆ ಕಾರ್ಯ ಪರಿಶೀಲನೆ

ಲಾರ್ವಾ ಸಮೀಕ್ಷೆ ಕಾರ್ಯ ಪರಿಶೀಲನೆ
Published on

ಹುಣಸೂರು: ಹುಣಸೂರು ನಗರವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ಆರೋಗ್ಯ ಇಲಾಖೆ ಕೈಗೊಂಡಿದ್ದ ಲಾರ್ವಾ ಸಮೀಕ್ಷೆ ಕಾರ್ಯದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ(ಡಿಎಚ್‌ಒ) ಡಾ.ಟಿ.ಪಿ.ಕುಮಾರಸ್ವಾಮಿ ಪಾಲ್ಗೊಂಡು ಪರಿಶೀಲನೆ ನಡೆಸಿದರು.

ಶುಕ್ರವಾರ ನಗರದ ವಿ.ಪಿ.ಬೋರೆ, ಎನ್‌ಎಸ್ ತಿಟ್ಟು, ಶಬ್ಬೀರ್‌ನಗರ, ಬಸ್ ಡಿಪೋ ಹಿಂಭಾಗ ಮುಂತಾದ ಬಡಾವಣೆಗಳಲ್ಲಿ ತಾಲೂಕು ಆರೋಗ್ಯಾಧಿಕಾರಿ ಕಚೇರಿಯಿಂದ ಆಯೋಜಿಸಿದ್ದ ಲಾರ್ವಾ ಸಮೀಕ್ಷೆ ಕಾರ್ಯದ ವೇಳೆ ಸ್ಥಳಕ್ಕೆ ಆಗಮಿಸಿದ ಡಿಎಚ್‌ಒ ಬಡಾವಣೆಗಳಲ್ಲಿ ಸ್ವಚ್ಛತೆ ಗಮನಿಸಿದರು. ಟೈರ್‌ಗಳು, ಪ್ಲಾಸ್ಟಿಕ್‌ಗಳು ಅಲ್ಲಲ್ಲಿ ಬಿದ್ದು ನೀರು ತುಂಬಿರುವುದನ್ನು ಗಮನಿಸಿ ತ್ಯಾಜ್ಯಗಳ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿದ್ದ ನಗರಸಭೆ ಸಿಬ್ಬಂದಿಗೆ ಸೂಚಿಸಿದರು.

ಈ ವೇಳೆ ಮಾತನಾಡಿದ ತಾಲೂಕು ಆರೋಗ್ಯಾಧಿಕಾರಿ, ಕಳೆದ ಜೂ.26ರಂದು ಡೆಂಘೆ ಜ್ವರ ಪರೀಕ್ಷೆಗಾಗಿ ಕಳುಹಿಸಿದ್ದ ಸ್ಯಾಂಪಲ್‌ಗಳ ವರದಿ ಬಂದಿದ್ದು, 13 ಪ್ರಕರಣಗಳಲ್ಲಿ ಡೆಂಘೆ ಪಾಸಿಟಿವ್ ಬಂದಿದೆ. ಈ 13 ಸೋಂಕಿತರು ಈಗಾಗಲೇ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯವಂತರಾಗಿದ್ದಾರೆ. ಪ್ರತಿ ಶುಕ್ರವಾರದಂದು ಈಡಿಸ್ ಸೊಳ್ಳೆ ನಾಶದಿನದ ಕಾರ್ಯಕ್ರಮ ನಡೆದಿದ್ದು, ಅದರಂತೆ ಇಂದು ನಗರಾದ್ಯಂತ 9 ತಂಡಗಳು 1500ಕ್ಕೂ ಹೆಚ್ಚು ಮನೆಗಳ ಭೇಟಿ ಮತ್ತು ಲಾರ್ವಾ ಸಮೀಕ್ಷ್ಷೆ ಕಾರ್ ನಡೆದಿದೆ ಎಂದು ತಿಳಿಸಿದರು.

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ, ಸದೃಢ ಚಾರಿಟಬಲ್ ಟ್ರಸ್ಟ್‌ನ ಮಂಜುನಾಥ್, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಸುಮಿತ್ರಾ, ಅನಂತಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ನಂಜಪ್ಪ, ಪ್ರಭಾಕರ್ ಇತರರು ಇದ್ದರು.

ಸದೃಢ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಡೆಂಘೆ ಜ್ವರ ಕುರಿತಾಗಿ ವಾಹನಗಳಲ್ಲಿ ಧ್ವನಿವರ್ಧಕದ ಮೂಲಕ ಅರಿವು ಮೂಡಿಸುವ ಕಾರ್ಯಕ್ಕೆ ಡಿಎಚ್‌ಒ ಚಾಲನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net