

ಬೆಂಗಳೂರು: ಹಿಂದುಳಿದ ವರ್ಗಗಳ ಇಲಾಖೆಯ ಮುಂಬಡ್ತಿಯಲ್ಲಿ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಸಿಎಂ, ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ತಲುಪಿದೆ.
ಬಡ್ತಿ ನೀಡುವಲ್ಲಿ ವೃಂದ ಮತ್ತು ನೇಮಕಾತಿ ನಿಯಮದ ಸ್ಪಷ್ಟ ಉಲ್ಲಂಘನೆ ಆಗಿದ್ದು, ಬಡ್ತಿ ಪಡೆದ ಫಲಾನುಭವಿಗಳಿಂದ ಲಂಚವನ್ನು ಉನ್ನತಾಧಿಕಾರಿಗಳು ಆಪ್ತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಿಕೊಂಡಿದ್ದಾರೆ ಎಂಬ ದೂರು ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೂ ತಲುಪಿದೆ. ಇಲಾಖೆಯ 3 ಹಿರಿಯ ಅಧಿಕಾರಿಗಳ ಬಡ್ತಿ ದಂಧೆ ಬಗ್ಗೆ ಪೂರಕ ಪುರಾವೆ ಜತೆ ಸಂತ್ರಸ್ತ ನೌಕರರು ಸಿಎಂ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಇಷ್ಟಾಗಿಯೂ ನಿಯಮಬಾಹಿರ ಬಡ್ತಿ ಪ್ರಕ್ರಿಯೆಗೆ ತಡೆ ಸಿಗದಿರುವುದು ಅವಕಾಶ ವಂಚಿತ ನೌಕರ ವರ್ಗದಲ್ಲಿ ಅಸಮಾಧಾನ ಮೂಡಿಸಿದೆ.
ಆಗಿರುವುದೇನು?: ಇಲಾಖೆಯಲ್ಲಿ 1997, 2002 ಮತ್ತು 2015ರ ವೃಂದ ಹಾಗೂ ನೇಮಕ ನಿಯಮಗಳನ್ನು ಗಾಳಿಗೆ ತೂರಿ ಬಡ್ತಿ ಪ್ರಕ್ರಿಯೆ ಸಾಗಿದೆ. 1997ರ ನಿಯಮ ಪ್ರಕಾರ ಮುಂಬಡ್ತಿಗೆ ಅನುಪಾತದ ಜತೆಗೆ ಅರ್ಹತೆ ನಿಗದಿ ಪಡಿಸಲಾಗಿದೆ. ಆದರೆ, ಈ ಬಾರಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಬಡ್ತಿ ನೀಡಿಕೆಯಲ್ಲಿ ಈ ನಿಯಮ ಗಾಳಿಗೆ ತೂರಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. 2015ರಲ್ಲಿ ಗ್ರೂಪ್ ಎ, ಬಿ, ಸಿ ವೃಂದಕ್ಕೆ 866 ನೌಕರರು ನೇಮಕವಾಗಿದ್ದಾರೆ. ಆ ಪೈಕಿ 200 ಮಂದಿ ಮುಂಬಡ್ತಿಗೆ ಅರ್ಹರು. ಮುಂಬಡ್ತಿಯ ಡಿಪಿಸಿ ಪೂರ್ಣಗೊಳಿಸಲು ನಿಲಯ ಪಾಲಕರಿಂದ 2 ಲಕ್ಷ, ನಿಲಯ ಮೇಲ್ವಿಚಾರಕರಿಂದ 1.5 ಲಕ್ಷ ರೂ. ಲಂಚಕ್ಕೆ ಒತ್ತಾಯಿಸಲಾಗುತ್ತಿದೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ.
ಲಂಚ ನೇರ ಜಮೆ: ಲಂಚಕ್ಕಾಗಿ ಬಳಸಿದ ಮೊಬೈಲ್ಫೋನ್ ಸಂಖ್ಯೆ, ಲಂಚ ಸ್ವೀಕರಿಸಿರುವ ಉನ್ನತಾಧಿಕಾರಿಗಳ ಆಪ್ತ ಸಿಬ್ಬಂದಿ ಹೆಸರು, ಬ್ಯಾಂಕ್ ಖಾತೆ ಸಂಖ್ಯೆ ಕೂಡ ದೂರಿನಲ್ಲಿದೆ. ಮಹಾಮಾರಿ ಕರೊನಾ ಹಾವಳಿಯನ್ನು ಬಿಸಿಎಂ ಇಲಾಖೆ ಉನ್ನತ ಅಧಿಕಾರಿಗಳು ದುರ್ಬಳಕೆ ಮಾಡಿಕೊಂಡು, ಮುಂಬಡ್ತಿ ಹೆಸರಿನಲ್ಲಿ ದಂಧೆ ನಡೆಸುತ್ತಿದ್ದಾರೆ. ತಕ್ಷಣವೇ ಡಿಪಿಸಿಗೆ ತಡೆ ನೀಡಿ, ಅರ್ಹರಿಗೆ ನ್ಯಾಯ ಒದಗಿಸಿ ಎಂಬುದು ನೊಂದವರ ಆಗ್ರಹ.
ಪ್ರತಿಪಕ್ಷಗಳಿಗೂ ಪ್ರತಿ: ಬಿಸಿಎಂ ಇಲಾಖೆಯ ನೊಂದ ನೌಕರರ ನಿಯೋಗ ಜೆಡಿಎಸ್-ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು, ಉಭಯ ಪಕ್ಷಗಳ ರಾಜ್ಯಾಧ್ಯಕ್ಷರಿಗೂ ದೂರಿನ ಪ್ರತಿ ಸಲ್ಲಿಸಿದ್ದಾರೆ.
ಎಸಿಬಿಗೆ ದೂರಲು ಚಿಂತನೆ: ಲಂಚ ನೇರ ಬ್ಯಾಂಕ್ ಖಾತೆಗೆ ಜಮೆ ಆಗಿರುವುದು ಭ್ರಷ್ಟಾಚಾರವೇ ಸರಿ. ಈ ಕುರಿತು ಎಸಿಬಿ ಸೇರಿ ಉನ್ನತ ತನಿಖಾ ಸಂಸ್ಥೆಗಳಿಗೆ ದೂರು ನೀಡಲೂ ಚಿಂತನೆ ನಡೆದಿದೆ. ಸರ್ಕಾರದಿಂದ ಮುಂಬಡ್ತಿ ಪ್ರಕ್ರಿಯೆ ಸ್ಥಗಿತ ಮಾಡುವ ಸಾಧ್ಯತೆ ಇದೆ. ಬಳಿಕ ಕಾನೂನಾತ್ಮಕ ಹೋರಾಟದ ಬಗ್ಗೆ ನಿರ್ಧರಿಸಲು ನೊಂದ ನೌಕರರು ತೀರ್ಮಾನ ಮಾಡಿದ್ದಾರೆ.