2011ರ ವಿಶ್ವಕಪ್ ಸೇಲಾಗಿತ್ತು ಎಂದು ಆರೋಪಿಸಿದ ಲಂಕಾ ಮಾಜಿ ಸಚಿವ

2011 wc
Published on

ಕೊಲಂಬೊ: ಭಾರತದ ಆತಿಥ್ಯದಲ್ಲಿ ನಡೆದ 2011ರ ಏಕದಿನ ವಿಶ್ವಕಪ್ ಟೂರ್ನಿ ಫೈನಲ್ ಪಂದ್ಯವೇ ಸೇಲಾಗಿತ್ತು ಎಂದು ಶ್ರೀಲಂಕಾದ ಮಾಜಿ ಕ್ರೀಡಾ ಸಚಿವ ಮಹಿಂದಾನಂದ ಅಲುಥಾಗಮಗೆ ಗಂಭೀರ ಆರೋಪ ಮಾಡಿದ್ದಾರೆ. ಶ್ರೀಲಂಕಾ ತಂಡ ಆತಿಥೇಯ ಭಾರತಕ್ಕೆ ಪಂದ್ಯವನ್ನು ಮಾರಾಟ ಮಾಡಿಕೊಂಡಿತ್ತು ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮಾಜಿ ನಾಯಕರಾದ ಕುಮಾರ ಸಂಗಕ್ಕರ ಹಾಗೂ ಮಹೇಲ ಜಯವರ್ಧನೆ ಸಾಕ್ಷಿ ನೀಡುವಂತೆ ಒತ್ತಾಯಿಸಿದ್ದಾರೆ. 2011ರ ಏಪ್ರಿಲ್ 2 ರಂದು ನಡೆದ ಫೈನಲ್ ಪಂದ್ಯದಲ್ಲಿ ಎಂಎಸ್ ಧೋನಿ ಸಾರಥ್ಯದ ಭಾರತ ತಂಡ 6 ವಿಕೆಟ್‌ಗಳಿಂದ ಶ್ರೀಲಂಕಾ ತಂಡವನ್ನು ಸೋಲಿಸಿ 2ನೇ ಬಾರಿ ಪ್ರಶಸ್ತಿ ಗೆದ್ದುಕೊಂಡಿತ್ತು.

2011ರಲ್ಲಿ ನಾನು ಕ್ರೀಡಾ ಸಚಿವನಾಗಿದ್ದೆ, ಇಂದು ಹೇಳುತ್ತೇನೆ, ವಿಶ್ವಕಪ್ ಫೈನಲ್ ಪಂದ್ಯವನ್ನು ಭಾರತಕ್ಕೆ ಮಾರಾಟ ಮಾಡಿಕೊಂಡೆವು ಎಂದಿದ್ದಾರೆ. ಅಂದು ನಾನು ಹೇಳುವಂತಿರಲಿಲ್ಲ. 2011 ಅಥವಾ 2012ರಲ್ಲಿ ನಡೆದ ವಿಶ್ವಕಪ್‌ನಲ್ಲಿ ಗೆಲುವಿನ ಅವಕಾಶವತ್ತು ಎಂದು ಹಾಲಿ ಹಂಗಾಮಿ ಸರ್ಕಾರದಲ್ಲಿ ಸಚಿವರಾಗಿರುವ ಮಹಿಂದಾನಂದ ಹೇಳಿದ್ದಾರೆ. ಆ ಪಂದ್ಯ ಫಿಕ್ಸ್ ಆಗಿತ್ತು. ನಾನು ಎಲ್ಲಿ ಬೇಕಾದರೂ ವಾದಿಸಬಲ್ಲೆ. ಇದು ನನ್ನ ಜವಾಬ್ದಾರಿ ಕೂಡ ಎಂದಿದ್ದಾರೆ.

ಸಾಕ್ಷಿ ಕೇಳಿದ ಸಂಗಕ್ಕರ, ಜಯವರ್ಧನೆ

ಮಾಜಿ ಕ್ರೀಡಾ ಸಚಿವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಅಂದಿನ ತಂಡದ ಸದಸ್ಯರಾದ ಕುಮಾರ್ ಸಂಗಕ್ಕರ ಹಾಗೂ ಮಹೇಲ ಜಯವರ್ಧನೆ ಸೂಕ್ತ ದಾಖಲೆ ಒದಗಿಸುವಂತೆ ಕೇಳಿದ್ದಾರೆ. ಸಾಕ್ಷಿ ನೀಡಿದರೆ, ಐಸಿಸಿಯ ಭ್ರಷ್ಟಾಚಾರ ನಿಗ್ರಹ ದಳ ಸಂಪೂರ್ಣ ತನಿಖೆ ಕೈಗೊಳ್ಳುತ್ತದೆ ಎಂದು ಸಂಗಕ್ಕರ ಹೇಳಿದ್ದರೆ, ಚುನಾವಣೆ ಸಂದರ್ಭದಲ್ಲಿ ಇಂಥ ಆರೋಪ ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಅಂದಿನ ಪಂದ್ಯದ ಶತಕ ಸಾಧಕ ಜಯವರ್ಧನೆ ಹೇಳಿದ್ದಾರೆ. ಶ್ರೀಲಂಕಾದ ಅಂದಿನ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಜತೆಗೆ ಕ್ರೀಡಾ ಸಚಿವ ಮಹಿಂದಾನಂದ ಅಲುಥಾಗಮಗೆ ಕೂಡ ಮುಂಬೈನಲ್ಲಿ ನಡೆದ ಫೈನಲ್ ಪಂದ್ಯ ವೀಕ್ಷಿಸಿದ್ದರು. ಇದನ್ನೂ ಮೊದಲು ಮಾಜಿ ನಾಯಕ ಅರ್ಜುನಾ ರಣತುಂಗಾ ಕೂಡ 2011ರ ವಿಶ್ವಕಪ್ ಫೈನಲ್ ಪಂದ್ಯದ ಫಿಕ್ಸಿಂಗ್ ಕುರಿತು ಆರೋಪ ಮಾಡಿದ್ದರು.

ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಶ್ರೀಲಂಕಾ 275 ರನ್ ಟಾರ್ಗೆಟ್ ನೀಡಿದರೆ, ಗೌತಮ್ ಗಂಭೀರ್ (97) ಹಾಗೂ ಎಂಎಸ್ ಧೋನಿ (91) ಜೋಡಿ ಅದ್ಭುತ ನಿರ್ವಹಣೆ ಲವಾಗಿ ಭಾರತ 6 ವಿಕೆಟ್ ಗೆಲುವು ದಾಖಲಿಸಿತ್ತು. ಇದರೊಂದಿಗೆ 28 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ಗೆದ್ದುಕೊಂಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net