81ನೇ ವಯಸ್ಸಿನಲ್ಲಿ ಟೆಸ್ಟ್ ಕ್ಯಾಪ್ ಪಡೆದ ಇಂಗ್ಲೆಂಡ್ ಕ್ರಿಕೆಟಿಗ

alan jones for web
Published on

ಲಂಡನ್: ಕ್ರೀಡೆಯಲ್ಲಿ ಪ್ರತಿಭೆ ಜತೆಗೆ ಅದೃಷ್ಟವೂ ಮುಖ್ಯವಾಗುತ್ತದೆ. ದೇಶೀಯ ಕ್ರಿಕೆಟ್ ಟೂರ್ನಿಗಳಲ್ಲಿ ಸಾವಿರಗಟ್ಟಲೇ ರನ್ ಕಲೆಹಾಕಿದ್ದರೂ ರಾಷ್ಟ್ರೀಯ ತಂಡದಲ್ಲಿ ಅವಕಾಶವೇ ಸಿಕ್ಕಿರದ ಎಷ್ಟೋ ಆಟಗಾರರು ವಿಶ್ವ ಕ್ರಿಕೆಟ್‌ನಲ್ಲಿ ಸಿಗುತ್ತಾರೆ. ಇದೀಗ ಇಂಗ್ಲೆಂಡ್‌ನ ಮಾಜಿ ಆಟಗಾರ ಅಲೆನ್ ಜಾನ್ಸ್ 50 ವರ್ಷಗಳ ಹಿಂದೆ ಆಡಿದ್ದ ಏಕೈಕ ಟೆಸ್ಟ್ ಪಂದ್ಯಕ್ಕೆ ಮಾನ್ಯತೆ ಗಿಟ್ಟಿಸಿಕೊಂಡಿದ್ದಾರೆ. ಇದರೊಂದಿಗೆ 5 ದಶಕಗಳಿಂದ ಇಂಗ್ಲೆಂಡ್ ಪ್ರತಿನಿಧಿಸದ ಕೊರಗಿನಲ್ಲಿದ್ದ ಅಲೆನ್ ಪಾಲಿಗೆ ನೆಮ್ಮದಿ ಸಿಕ್ಕಂತಾಗಿದೆ. ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) 81 ವರ್ಷದ ಹಿರಿಯ ಕ್ರಿಕೆಟಿಗನಿಗೆ ಟೆಸ್ಟ್ ಕ್ಯಾಪ್ ನೀಡುವ ಮೂಲಕ ನ್ಯಾಯ ದೊರಕಿಸಿಕೊಟ್ಟಿದೆ.

1970ರಲ್ಲಿ ಶೇಷ ವಿಶ್ವ ತಂಡ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಪರ ಗ್ಲಾಮೊರ್ಗನ್ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಆಗಿದ್ದ ಅಲೆನ್ ಜಾನ್ಸ್ ಕಣಕ್ಕಿಳಿದಿದ್ದರು. ವಿಶ್ವ ಶ್ರೇಷ್ಠ ಆಟಗಾರರು ಶೇಷ ವಿಶ್ವ ತಂಡದ ಪರ ಆಡಿದ್ದರು. ಆದರೆ, ಈ ಪಂದ್ಯಕ್ಕೆ ಐಸಿಸಿಯಿಂದ ಮಾನ್ಯತೆ ದಕ್ಕಿರಲಿಲ್ಲ. ಇದು ಇಂಗ್ಲೆಂಡ್ ಪರ ಅಲೆನ್ ಆಡಿದ ಏಕೈಕ ಪಂದ್ಯ ಕೂಡ ಆಗಿದ್ದರಿಂದ ರಾಷ್ಟ್ರೀಯ ತಂಡದ ಪದಾರ್ಪಣೆ ಮಾಡಿದಂತಾಗಲಿಲ್ಲ. ಆ ಬಳಿಕವೂ ಅಲೆನ್‌ಗೆ ರಾಷ್ಟ್ರೀಯ ತಂಡದ ಪರ ಆಡುವ ಅವಕಾಶವೂ ಲಭಿಸಲಿಲ್ಲ. ಇದರಿಂದ ಅಲೆನ್ ಬೇಸರದಲ್ಲಿಯೇ ಮುಳುಗಿದರು. ಇದೀಗ 50 ವರ್ಷಗಳ ಬಳಿಕ ಇಸಿಬಿ ಟೆಸ್ಟ್ ಮಾನ್ಯತೆ ನೀಡಿ, ಆಟಗಾರರ ಸಂಖ್ಯೆ 696 ನೀಡಿ ಗೌರವಿಸಿದೆ. ಬಳಿಕ ದಾಖಲಾತಿಯಲ್ಲೂ ರಾಷ್ಟ್ರೀಯ ತಂಡ ಪ್ರತಿನಿಧಿಸಿದ ಆಟಗಾರ ಎಂದು ನಮೂದಿಸಲಾಗಿದೆ.

1961 ರಿಂದ 1983ರವರೆಗೆ ಸತತ 23 ವರ್ಷಗಳ ಕಾಲ ಕೌಂಟಿ ಚಾಂಪಿಯನ್‌ಷಿಪ್ ಆಡಿದ್ದ ಅಲೆನ್, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 36,049 ರನ್ ಪೇರಿಸಿದ್ದಾರೆ. ಇದರಿಂದ 56 ಶತಕಗಳು ಒಳಗೊಂಡಿವೆ. ನಾನೀಗ ಇಂಗ್ಲೆಂಡ್ ಆಟಗಾರ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವೆ ಎಂದು ಜಾನ್ಸ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net