

ತುಮಕೂರು: ರೈಲ್ವೇ ಹಳಿ ಬಳಿ ಭೂಕುಸಿತ ಉಂಟಾದ ಹಿನ್ನೆಲೆಯಲ್ಲಿ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ಪ್ರಸಂಗ ನಡೆದಿದೆ. ತುಮಕೂರು ಜಿಲ್ಲೆಯಲ್ಲಿ ಈ ಪ್ರಕರಣ ವರದಿಯಾಗಿದ್ದು, ರೈಲ್ವೇ ಇಲಾಖೆ ಸೂಕ್ತ ಕ್ರಮ ಕೈಗೊಂಡಿದೆ.
ತಿಪಟೂರಿನ ಗಾಂಧಿನಗರದ ಅಂಡರ್ಪಾಸ್ ಬಳಿ ರೈಲ್ವೇ ಹಳಿಯ ಎರಡೂ ಕಡೆ ಲಘು ಭೂಕುಸಿತ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಸಂಭಾವ್ಯ ಅವಘಡ ತಪ್ಪಿಸುವ ಸಲುವಾಗಿ ನಿಜಾಮುದ್ದೀನ್ ಎಕ್ಸ್ಪ್ರೆಸ್ ಸೇರಿ ಕೆಲವು ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಅಂಡರ್ಪಾಸ್ನಲ್ಲಿ ಮಳೆನೀರು ತುಂಬಿರುವುದರಿಂದ ಈ ಭೂಕುಸಿತ ಉಂಟಾಗಿದ್ದು, ರೈಲ್ವೇ ಇಲಾಖೆಯವರು ಜೆಸಿಬಿ ಯಂತ್ರಗಳ ಮೂಲಕ ಕಾರ್ಯಾಚರಣೆ ನಡೆಸಿದ್ದಾರೆ. ಬೀದರ್-ಕಲಬುರಗಿ ನಡುವಿನ ಕಮಲಾಪುರದ ಮರಗುತ್ತಿ ಬಳಿ ಇಂದು ಬೆಳಗ್ಗೆ ರೈಲ್ವೇ ಹಳಿ ಮೇಲೆ ಬಂಡೆಯೊಂದು ಬಿದ್ದಿದ್ದು, 2 ಗಂಟೆಗಳ ಕಾಲ ರೈಲು ಸಂಚಾರ ಸ್ಥಗಿತಗೊಳಿಸಲಾಗಿತ್ತು.