

‘ಬಾಳುವುದೇತಕೆ ನುಡಿ, ಎಲೆ ಜೀವ’ ಎಂದು ಕುವೆಂಪು ಕನ್ನಡಾಂಬೆಯ ಸೇವೆ ಮಾಡುವಂತೆ ಪ್ರತಿ ಜೀವಿಗಳಿಗೂ ಕರೆ ನೀಡಿದ್ದನ್ನು ಕರ್ನಾಟಕದ ನೈಸರ್ಗಿಕ ಸೂಚಕಗಳು ಪರಿಗಣಿಸಿದಂತಿವೆ. ಆದ್ದರಿಂದಲೇ ನಾಡಿನ ಪ್ರಾತಿನಿಧ್ಯವನ್ನು ತಮ್ಮ ಸೊಗಡಿನ ಮೂಲಕ ನಿರ್ವಹಿಸುತ್ತಿವೆ. ರಾಷ್ಟ್ರಕ್ಕೆ ಲಾಂಛನಾದಿ ಗುರುತುಗಳಿರುವಂತೆ ಕರ್ನಾಟಕದ್ದೇ ಆದ ಗುರುತುಗಳಿವೆ. ಈ ಗುರುತುಗಳ ಆಯ್ಕೆಯಲ್ಲೂ ನಾಡು ವಿಶಿಷ್ಟ ಎನಿಸಿಕೊಂಡಿದೆ. ಕರ್ನಾಟಕವು ಭೌಗೋಳಿಕ, ಆರ್ಥಿಕತೆ ಮತ್ತಿತರ ರಂಗದ ಉತ್ತುಂಗತೆಯಿಂದ ಗುರುತಿಸಿಕೊಂಡರೂ ರಾಜ್ಯದ ಗುರುತುಗಳಿಂದ ಹೆಚ್ಚಿಗೆ ಪ್ರಾಧಾನ್ಯತೆ ಪಡೆಯುತ್ತಿದೆ. ರಾಜ್ಯದ ಹೆಚ್ಚಿನ ನೈಸರ್ಗಿಕ ಗುರುತುಗಳು ಅಳಿವಿನಂಚಿನಲ್ಲಿದ್ದು, ಅವುಗಳನ್ನು ರಕ್ಷಿಸುವ ಸಲುವಾಗಿಯೇ ‘ರಾಜ್ಯದ ಸ್ಥಾನಮಾನ’ ಘೋಷಿಸಿರುವುದು ವಿಶೇಷ.
ನಾಡಗೀತೆ: ಕುವೆಂಪು ವಿರಚಿತ ‘ಕೊಳಲು’ ಕವನ ಸಂಕಲನದಿಂದ ಆಯ್ದ ‘ಜಯ ಭಾರತ ಜನನನಿಯ ತನುಜಾತೆ’ ಎಂಬುದು ನಾಡಗೀತೆಯಾಗಿ ಘೋಷಿಸಲು ಸಿ.ಅಶ್ವತ್ಥ್ ಅವರ ರಾಗ ಸಂಯೋಜನೆಯೂ ಕೊಡುಗೆಯಾಯಿತು. ನಾಡಭಕ್ತಿಯನ್ನು ಇಮ್ಮಡಿಗೊಳಿಸುವುದರ ಜತೆಗೆ ಶಾಂತಿ ಸೌಹಾರ್ದತೆಯನ್ನು ಸಾರಿ ನೆಲಕ್ಕಾಗಿ ದುಡಿದ ಸಂತರನ್ನು ನೆನಪಿಸುವ ನಾಡಗೀತೆಯನ್ನು ಮತ್ತೆಮತ್ತೆ ಹಾಡಿದಂತೆಲ್ಲ ಕನ್ನಡತನ ಮೇಳೈಸುತ್ತದೆ. 2004ರಲ್ಲಿ ನಾಡಗೀತೆಯನ್ನು ಅಧಿಕೃತವಾಗಿ ಘೋಷಣೆ ಮಾಡಲಾಯಿತು. ಅದಕ್ಕಿಂತ ಹಿಂದಿನಿಂದ ಇಂದಿನವರೆಗೂ ಪ್ರತಿ ಕನ್ನಡಿಗನ ಮನದಲ್ಲಿ ಮೊಳಗುತ್ತಲೇ ಇದೆ, ಬೆಳಗುತ್ತಲೇ ಇದೆ.
ರಾಜ್ಯದ ಕೀಟ: ಭಾರತದ ಎರಡನೇ ದೊಡ್ಡ ಚಿಟ್ಟೆ ಸದರ್ನ್ ಬರ್ಡ್ವಿಂಗ್ ಅನ್ನು 2017ರಲ್ಲಿ ರಾಜ್ಯದ ಕೀಟವನ್ನಾಗಿ ಘೋಷಿಸಲಾಗಿದೆ. ರಾಜ್ಯದಲ್ಲಿರುವ 318 ಚಿಟ್ಟೆಗಳಲ್ಲಿ ಇದನ್ನೇ ಆಯ್ಕೆ ಮಾಡಿಕೊಂಡಿರುವುದರ ಹಿಂದೆ ಕಾರಣವೂ ಇದೆ. ಇದರ ರೆಕ್ಕೆಗಳು 170-190 ಮಿ.ಮೀ ಅಗಲ. ಪಶ್ಚಿಮಘಟ್ಟದಲ್ಲಿ ಮಾತ್ರ ಕಾಣಸಿಗುವ ಈ ಚಿಟ್ಟೆಗಳು ಬೀಜಪ್ರಸರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಚಿಟ್ಟೆಗಳ ರೆಕ್ಕೆಗಳಲ್ಲಿ ಧ್ವಜದ ಹಳದಿ ಬಣ್ಣವಿರುವುದು ವಿಶೇಷ. ಐಯುಸಿಎನ್ ರೆಡ್ ಲಿಸ್ಟ್ ಆಫ್ ಥ್ರೆಟೆನ್ಡ್ ಸ್ಪೀಸಿಸ್ ಅಳಿವಿನಂಚಿನಲ್ಲಿದೆ ಎಂದು ಘೋಷಿಸಿತ್ತು. ಇವನ್ನು ರಾಜ್ಯ ಕೀಟವನ್ನಾಗಿಸುವ ಮೂಲಕ ರಕ್ಷಣೆಗೆ ಮುನ್ನುಡಿ ಬರೆದಂತಾಗಿದೆ.
ರಾಜ್ಯದ ನೈಸರ್ಗಿಕ ಪ್ರತಿನಿಧಿಗಳಿವು...: ಕರ್ನಾಟಕ ಗಂಧದ ನಾಡು ಎಂಬುದನ್ನು ಮತ್ತೆ ಹೇಳಲೇಬೇಕಿಲ್ಲ. ಮೈಸೂರು ಸ್ಯಾಂಡಲ್ ಸೋಪ್, ಗಂಧದೆಣ್ಣೆ ಕಾರ್ಖಾನೆಗಳು ವಿಶ್ವವ್ಯಾಪಿ ನಾಡ ಕಂಪನ್ನು ಪಸರಿಸುತ್ತಿವೆ. ರಾಜ್ಯದ ಮರವನ್ನಾಗಿ ಶ್ರೀಗಂಧವನ್ನು ಘೋಷಿಸಿ ಅವುಗಳ ರಕ್ಷಣೆ ಮತ್ತು ಅಭಿವೃದ್ಧಿ ಮಾಡುತ್ತಿವೆ. ಭಾರತದ ಮಾವಿನ ನಗರಿ ಕೋಲಾರದ ಶ್ರೀನಿವಾಸಪುರ ಸೇರಿದಂತೆ ಕರ್ನಾಟಕದಲ್ಲಿ ಸಾವಿರ ವಿಧಗಳಷ್ಟು ಮಾವು ಬೆಳಯುವುದರಿಂದಲೇ ರಾಜ್ಯದ ಹಣ್ಣಾಗಿದೆ. ಇವೆಲ್ಲ ಬಣ್ಣ ಹಾಗೂ ಐತಿಹ್ಯದಲ್ಲಿ ರಾಜ್ಯದ ಧ್ವಜವನ್ನು ಹೋಲುವುದು ವಿಶೇಷ.
ರಾಜ್ಯ ಪಕ್ಷಿ: ನಗರ, ಗ್ರಾಮ, ಮೈದಾನ ಎಲ್ಲೆಡೆಯಲ್ಲೂ ಕಂಡುಬರುವ ನೀಲಕಂಠ ಪಕ್ಷಿಯನ್ನು ಆಗಾಗ ವಿದ್ಯುತ್ ಕಂಬದ ಮೇಲೆ ಕುಳಿತದ್ದನ್ನು ಕಂಡಿರಬಹುದು. ನೀಲಿ ಬಣ್ಣ ಹೆಚ್ಚಿದ್ದರೂ ಮುಖದಲ್ಲಿ ಸ್ವಲ್ಪ ನಸುಗೆಂಪು ಹಾಗೂ ಹಳದಿ ಬಣ್ಣದ ಮೈ ಹೊಂದಿದ ಚಂದದ ಹಕ್ಕಿ. ಇವು ಹಾರಾಡುವಾಗ ನೀಲಿ ಆಕಾಶದಲ್ಲಿ ಅರಿಶಿಣ-ಕುಂಕುಮ ಪ್ರತೀಕವಾದ ನಾಡಧ್ವಜದ ಆರೋಹಣ ಆಗುತ್ತಿದೆಯೇನೋ ಎಂದು ಭಾಸವಾಗುತ್ತದೆ. ಅಳಿವಿನಂಚಿನಲ್ಲಿರುವ ಈ ಪಕ್ಷಿಯನ್ನು 2004ರಲ್ಲಿ ಕರ್ನಾಟಕ ಸರ್ಕಾರ ರಾಜ್ಯ ಪಕ್ಷಿಯನ್ನಾಗಿ ಘೋಷಿಸಿದೆ.
ರಾಜ್ಯ ಮೀನು: ಕಾವೇರಿ ಮೀನು, ಕೆಂದಾಯಿ ಎಂಬೆಲ್ಲ ಕರೆಸಿಕೊಳ್ಳವ ಕಾರ್ನಟಿಕ್ ಕಾರ್ಪ್ ನಮ್ಮ ರಾಜ್ಯದ ಮೀನು. ನಾಡ ಹೆಸರನ್ನು ಹೊತ್ತು ಈಜುವ ಈ ಮತ್ಸ್ಯವು ಮೀನುಕೃಷಿಗೆ ಹೇಳಿ ಮಾಡಿಸಿದ್ದು. ಪಶ್ಚಿಮಘಟ್ಟದಲ್ಲಿ ಹೆಚ್ಚಾಗಿ ಸಿಗುವ ಈ ಮೀನುಗಳು 60 ಸೆಂ.ಮೀ ಉದ್ದವಿದ್ದು 12 ಕೆ.ಜಿ.ವರೆಗೆ ತೂಗುತ್ತದೆ. ಕಾವೇರಿ, ಕೃಷ್ಣಾ ಮತ್ತಿತರ ನದಿಗಳಲ್ಲಿ ವಾಸಿಸುತ್ತವೆ.
ರಾಜ್ಯ ಪ್ರಾಣಿ: ಏಷ್ಯಾದಲ್ಲೇ ದೊಡ್ಡ ಪ್ರಾಣಿಗಳು ಎಂದು ಗುರುತಿಸಿಕೊಳ್ಳುವ ಆನೆಗಳು ನಮ್ಮ ನಾಡಿನಲ್ಲಿ ಹೆಚ್ಚಾಗಿರುವುದು ಹೆಮ್ಮೆಯೇ. ಆದ್ದರಿಂದ ಏಷ್ಯಾ ಆನೆಗಳು ನಮ್ಮ ರಾಜ್ಯ ಪ್ರಾಣಿ. ಭಾರತದ ಒಟ್ಟು ಶೇ.22ರಷ್ಟು ಆನೆಗಳಿಗೆ ಕರ್ನಾಟಕದ ಕಾನನವೇ ಮನೆ. ನಾಗರಹೊಳೆಯಂತೂ ಆನೆಗಳ ತವರು. ಅಂದಾಜು 6,395 ಆನೆಗಳು ರಾಜ್ಯದಲ್ಲಿವೆ. ಶಕ್ತಿ, ಬುದ್ಧಿವಂತಿಕೆಯ ಪ್ರತೀಕವಾದ ಗಜಪಡೆ ಅಂಬಾರಿ ಹೊರುವುದರ ಜತೆಗೆ ರಾಜ್ಯದ ಗೌರವವನ್ನೂ ಹೊರುತ್ತಿವೆ.
ರಾಜ್ಯ ಲಾಂಛನ: ನಾಡಿನ ಲಾಂಛನವಾದ 2 ಶರಭಗಳು ಸುತ್ತುವರಿದಿರುವ ಗಂಡಭೇರುಂಡ ಪಕ್ಷಿಗಳು ಶತಮಾನಗಳ ಕನ್ನಡ ಇತಿಹಾಸದ ದ್ಯೋತಕ. ಇವು ಪುರಾಣದಲ್ಲಿ ವಿಷ್ಣುವಿನ ಅವತಾರ ಎಂದೂ ಹೇಳಲಾಗುತ್ತದೆ. ಕ್ರಿ.ಶ.1510ರ ವಿಜಯನಗರ ಸಾಮ್ರಾಜ್ಯದ ಕಾಲದ ನಾಣ್ಯಗಳಲ್ಲೇ ಗಂಡಭೇರುಂಡವನ್ನು ಮುದ್ರಿಸಲಾಗಿತ್ತು. ಕೆಳದಿ, ಹೊಯ್ಸಳ, ಕದಂಬ, ಮೈಸೂರು ಒಡೆಯರ್ವರೆಗೂ ಹಲವು ಕನ್ನಡ ರಾಜಮನೆತನಗಳ ಆಳ್ವಿಕೆ ಕಾಲದಲ್ಲಿ ಗಂಡಭೇರುಂಡ ಹಾಸುಹೊಕ್ಕಾಗಿತ್ತು. ಕೆಆರ್ಎಸ್ ಅಣೆಕಟ್ಟಿನಲ್ಲೂ ಈ ಲಾಂಛನವಿದೆ. ಕರ್ನಾಟಕ ಏಕೀಕರಣಗೊಂಡ ಬಳಿಕ ನಾಡಿನ ಏರಿಳಿತಕ್ಕೆ ಸಾಕ್ಷಿಯಾಗಿದ್ದ ಗಂಡಭೇರುಂಡವನ್ನೇ ಸರ್ಕಾರದ ಲಾಂಛನವನ್ನಾಗಿ ಪರಿಗಣಿಸಲಾಗಿದೆ.