ಕೈಗಾರಿಕೆ ಸ್ಥಾಪನೆಗೆ ಭೂಮಿ ಬರ! ಜಮೀನು ಕೊಡಲು ರೈತರ ಹಿಂದೇಟು

Untitled design (7)
Published on

ಲ್ಯಾಂಡ್ ಬ್ಯಾಂಕ್ ಕನಸಿಗೆ ಹಿನ್ನಡೆ| ಹೆಚ್ಚಿನ ಪರಿಹಾರ ಕೋರಿಕೆಯಿಂದಾಗಿ ಕೆಲವೆಡೆ ಭೂಮಿ ಸ್ವಾಧೀನಕ್ಕೂ ಸಮಸ್ಯೆ

ಮಂಜುನಾಥ ಕೋಳಿಗುಡ್ಡ, ಬೆಳಗಾವಿ

ರಾಜ್ಯದಲ್ಲಿ ಸಣ್ಣ, ಮಧ್ಯಮ, ಬೃಹತ್ ಕೈಗಾರಿಕೆಗಳ ಸ್ಥಾಪನೆಗೆ ಮುಕ್ತ ಅವಕಾಶಗಳಿದ್ದರೂ ಕೈಗಾರಿಕೆ ಸ್ಥಾಪನೆಗೆ ಅಗತ್ಯ ಭೂಮಿ ಕೊರತೆ ಎದ್ದು ಕಾಣುತ್ತಿದೆ. ಮತ್ತೊಂದೆಡೆ ರೈತರು ಕೃಷಿ ಜಮೀನು ಬಿಟ್ಟುಕೊಡದಿರುವ ಪರಿಣಾಮ ‘ಲ್ಯಾಂಡ್ ಬ್ಯಾಂಕ್‘ ನಿರ್ವಿುಸುವ ಸರ್ಕಾರದ ಪ್ರಯತ್ನಕ್ಕೆ ಹಿನ್ನಡೆ ಉಂಟಾಗಿದೆ.

ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿ ಬೆಳಗಾವಿ, ಮೈಸೂರು, ಧಾರವಾಡ, ಮಂಡ್ಯ, ರಾಮನಗರ, ಹಾವೇರಿ, ತುಮಕೂರು, ಕಲಬುರಗಿ, ಶಿವಮೊಗ್ಗ ಸೇರಿ ವಿವಿಧ ಕಡೆ ನಗರ ಪ್ರದೇಶಗಳಿಂದ 15ರಿಂದ 20 ಕಿಮೀ ವ್ಯಾಪ್ತಿ ಪ್ರದೇಶದಲ್ಲಿ ಹೊಸ ಕೈಗಾರಿಕೆ ಪ್ರದೇಶ ಸ್ಥಾಪನೆಗೆ ಸುಮಾರು 10 ಸಾವಿರ ಎಕರೆ ಲ್ಯಾಂಡ್ ಬ್ಯಾಂಕ್ ಸ್ಥಾಪಿಸಬೇಕು ಎಂದು ಕೈಗಾರಿಕೆಗಳ ಮಾಲೀಕರು, ಉದ್ಯಮಿದಾರರ ಬೇಡಿಕೆ ಇದೆ. ಆದರೆ, ನಗರದ ಸುತ್ತಮುತ್ತಲಿನ ಭಾಗಗಳಲ್ಲಿ ವಸತಿ ಪ್ರದೇಶಗಳು ಮತ್ತು ಫಲವತ್ತಾದ ಕೃಷಿಭೂಮಿ ಇರುವುದರಿಂದ ಲ್ಯಾಂಡ್ ಬ್ಯಾಂಕ್​ಗೆ ನಿರೀಕ್ಷಿತ ಪ್ರಮಾಣದಲ್ಲಿ ಭೂಮಿ ಸಿಗುತ್ತಿಲ್ಲ. ಕೆಲವೆಡೆ ರೈತರು ಭೂಮಿ ಬಿಟ್ಟುಕೊಡಲು ಹಿಂದೇಟು ಹಾಕುತ್ತಿದ್ದಾರೆ. ಕೆಲವೆಡೆ ಹೆಚ್ಚಿನ ಪರಿಹಾರ ಕೇಳುತ್ತಿರುವುದರಿಂದ ಭೂ ಸ್ವಾಧೀನಕ್ಕೆ ಸಮಸ್ಯೆ ಉಂಟಾಗಿದೆ.

ಎರಡು ದಶಕದ ಅವಧಿಯಲ್ಲಿ ರಾಜ್ಯದಲ್ಲಿ ಸರ್ಕಾರಿ ಮತ್ತು ಖಾಸಗಿ ಒಡೆತನವೂ ಸೇರಿ ಸುಮಾರು 210ಕ್ಕೂ ಅಧಿಕ ಇಂಡಸ್ಟ್ರಿಯಲ್ ಪ್ರದೇಶ ನಿರ್ವಣಗೊಂಡಿವೆ. 75ಕ್ಕೂ ಅಧಿಕ ಸಕ್ಕರೆ ಕಾರ್ಖಾನೆಗಳು, 4.56 ಲಕ್ಷ ಸಣ್ಣ, ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳ (ಎಂಎಸ್​ಎಂಇ), ಜವಳಿ, ಉತ್ಪಾದನೆ ಕ್ಷೇತ್ರದ ಕೈಗಾರಿಕೆಗಳು ನೋಂದಣಿಯಾಗಿವೆ.

ರಾಜ್ಯದ ಕೆಲ ಭಾಗದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಸಾವಿರಾರು ಎಕರೆ ಭೂಮಿ ಲಭ್ಯವಿದೆ. ಆದರೆ, ಹೂಡಿಕೆದಾರರು, ಕೈಗಾರಿಕೆ ಉದ್ಯಮಿದಾರರು ರಸ್ತೆ ಸಾರಿಗೆ, ರೈಲ್ವೆ, ವಿಮಾನ ಸೇರಿ ವಿವಿಧ ಸೌಕರ್ಯ ಇಲ್ಲದ್ದರಿಂದ ಆ ಪ್ರದೇಶಗಳಲ್ಲಿ ಹೂಡಿಕೆ ಮಾಡುತ್ತಿಲ್ಲ. ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ, ಕಲಬುರಗಿ ಭಾಗದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚು ಬೇಡಿಕೆ ಇದೆ. ಆದರೆ, ಅಲ್ಲಿ ಹೊಸದಾಗಿ ಕೈಗಾರಿಕೆಗಳ ಸ್ಥಾಪನೆಗೆ ನಿರೀಕ್ಷಿತ ಪ್ರಮಾಣದಲ್ಲಿ ಭೂಮಿ ಸಿಗುತ್ತಿಲ್ಲ ಎಂದು ಕೆಐಡಿಎಬಿ ಮತ್ತು ರಾಜ್ಯ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಎಸ್​ಐಐಡಿಸಿ) ಅಧಿಕಾರಿಗಳು ತಿಳಿಸಿದ್ದಾರೆ.

ಏನೆಲ್ಲ ಸಮಸ್ಯೆಗಳಿವೆ?

  • ಕೃಷಿ ಜಮೀನು ಬಿಟ್ಟುಕೊಡದ ಅನ್ನದಾತರು
  • ಕೆಲೆವೆಡೆ ರೈತರಿಂದ ಹೆಚ್ಚಿನ ಪರಿಹಾರ ಕೋರಿಕೆ
  • ರೈತರ ವಿರೋಧದಿಂದಾಗಿ ಭೂಸ್ವಾಧೀನಕ್ಕೆ ಅಡ್ಡಿ
  • ನೀರಾವರಿ ಪ್ರದೇಶದಲ್ಲೂ ಕೈಗೆಟುಕದ ಭೂಮಿ
  • ಕೆಐಎಡಿಬಿಯ ಕಣ್ಣಿಗೂ ಬೀಳುತ್ತಿಲ್ಲ ಜಮೀನು

ಹೊಸ ಕೈಗಾರಿಕೆ ಪ್ರದೇಶ ಸ್ಥಾಪನೆಗೆ ಅಲ್ಲಲ್ಲಿ ಭೂಮಿ ಗುರುತಿಸಲಾಗಿದೆ. ರೈತರು ಒಪ್ಪದಿರುವುದು, ಪರಿಹಾರ ಹಣ ಬಿಡುಗಡೆ ಆಗದಿರುವ ಹಿನ್ನೆಲೆ ಭೂಸ್ವಾಧೀನ ಪ್ರಕ್ರಿಯೆ ಆರಂಭಗೊಂಡಿಲ್ಲ. ನೀರಾವರಿ ಪ್ರದೇಶ ಇರುವ ಕೆಲವೆಡೆ ರೈತರು ಭೂಮಿ ನೀಡಲು ಹಿಂದೇಟು ಹಾಕಿದ್ದಾರೆ.

| ನವೀನ ಹುಳ್ಳೂರ ಎಸ್​ಎಲ್​ಎಒ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರ (ಕೆಐಎಡಿಬಿ)

ಸರ್ಕಾರವು ನಗರ ಪ್ರದೇಶಗಳಿಂದ 15ರಿಂದ 20 ಕಿಮೀ ವ್ಯಾಪ್ತಿ ಪ್ರದೇಶದಲ್ಲಿ ಹೊಸ ಕೈಗಾರಿಕೆ ಪ್ರದೇಶ ಸ್ಥಾಪನೆಗೆ ಅವಕಾಶ ಕಲ್ಪಿಸಿಕೊಡಬೇಕು. ನಿರುದ್ಯೋಗ ಸಮಸ್ಯೆಗೆ ಕೈಗಾರಿಕೆಗಳ ಸ್ಥಾಪನೆಗೆ ಸರ್ಕಾರಗಳು ಆದ್ಯತೆ ಕೊಡಬೇಕು.

| ರೋಹನ ಜವಳಿ ಕೈಗಾರಿಕೆ ಉದ್ಯಮಿ, ಬೆಳಗಾವಿ

ಸರ್ಕಾರದ ನಿರ್ಲಕ್ಷ್ಯೇ ಸಮಸ್ಯೆಗಳಿಗೆ ಕಾರಣ:  ಬೆಂಗಳೂರು ನಂತರ ದೇಶ-ವಿದೇಶಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಆಟೋಮೊಬೈಲ್, ಯಂತ್ರೋಪಕರಣ, ವಿಮಾನ ತಯಾರಿಕೆಗೆ ಬೇಕಾಗುವ ಬಿಡಿಭಾಗಗಳ ಪೂರೈಕೆ ಮಾಡುತ್ತಿರುವ ಬೆಳಗಾವಿಯಲ್ಲಿ ಹೊಸ ಕೈಗಾರಿಕೆ ಕ್ಷೇತ್ರಕ್ಕಾಗಿ 1 ಸಾವಿರ ಎಕರೆ ‘ಲ್ಯಾಂಡ್ ಬ್ಯಾಂಕ್‘ ಸ್ಥಾಪನೆ ಅವಶ್ಯವಾಗಿದೆ. ಬೆಳಗಾವಿಯಲ್ಲಿ ಹೈಡ್ರಾಲಿಕ್ಸ್ ಕ್ಷೇತ್ರದ ವಿಸ್ತರಣೆಗೆ 100 ಎಕರೆ ಜಾಗ, ಫೌಂಡ್ರಿ ಪಾರ್ಕ್ ನಿರ್ವಣಕ್ಕೆ 500 ಎಕರೆ ಜಾಗ ಮೀಸಲಿಡುವಂತೆ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಿದಾರರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಅಲ್ಲದೆ, ಸರ್ಕಾರವು 2011ರಲ್ಲಿಯೇ ಬೆಳಗಾವಿಯಲ್ಲಿ ಕೈಗಾರಿಕೆ ಸ್ಥಾಪನೆಗಾಗಿ 2000 ಎಕರೆ ಲ್ಯಾಂಡ್ ಬ್ಯಾಂಕ್ ನಿರ್ವಿುಸಲಾಗುವುದು ಎಂದು ಭರವಸೆ ನೀಡಿತ್ತು. ಆದರೆ, ಈಡೇರಲಿಲ್ಲ. ಉತ್ಪಾದನಾ ಕ್ಷೇತ್ರದಲ್ಲಿ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಳಗಾವಿಗೆ ಹೂಡಿಕೆದಾರರನ್ನು ಆಕರ್ಷಿಸುವ ಕೆಲಸಗಳು ಸರ್ಕಾರದಿಂದ ಆಗುತ್ತಿಲ್ಲ ಎಂದು ಬೆಳಗಾವಿ ಕೈಗಾರಿಕೆ ಉದ್ಯಮಿದಾರರು ಬೇಸರ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net