

ಸಾಗರ: ಆಶ್ರಯ ನಿವೇಶನ ಕೋರಿ ಎರಡು ಸಾವಿರಕ್ಕೂ ಅಧಿಕ ಅರ್ಜಿಗಳು ನಗರಸಭೆಗೆ ಸಲ್ಲಿಕೆಯಾಗಿವೆ. ಇದಕ್ಕಾಗಿ ಈಗಾಗಲೇ ಸರ್ಕಾರಿ ಭೂಮಿ ಸ್ವಾಧೀನಪಡಿಸಿಕೊಳ್ಳಲು ಚಿಂತನೆ ನಡೆಸಲಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಸಾಗರ ನಗರಸಭೆಯಲ್ಲಿ ಬುಧವಾರ ಆಶ್ರಯ ಕಚೇರಿ ಉದ್ಘಾಟಿಸಿ, ಸಮಿತಿ ಸಭೆ ನಡೆಸಿ ಮಾತನಾಡಿದ ಅವರು, ಆಶ್ರಯ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದವರಿಗೆ ಶೀಘ್ರವೇ ನ್ಯಾಯ ಒದಗಿಸಲಾಗುತ್ತದೆ. ಅರ್ಹರಿಗೆ ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ನಗರಕ್ಕೆ ಹೊಂದಿಕೊಂಡಿರುವ ಕಲ್ಮನೆ, ಭೀಮನೇರಿ, ಮಂಕಳಲೆ ಇನ್ನಿತರ ಗ್ರಾಮಗಳಲ್ಲಿರುವ ಸರ್ಕಾರಿ ಭೂಮಿ ಸ್ವಾಧೀನ ಮಾಡಿಕೊಳ್ಳಲಾಗುವುದು. ನಗರ ಹಾಗೂ ಗ್ರಾಮಾಂತರ ಪ್ರದೇಶದವರಿಗೂ ಇಂತಹ ಕಡೆಗಳಲ್ಲಿ 60:40 ಅನುಪಾತದಡಿ ನಿವೇಶನ ಹಂಚಿಕೆ ಮಾಡಲಾಗುತ್ತದೆ. ಭೂಸ್ವಾಧೀನ ಸೇರಿ ಅಗತ್ಯ ಮೂಲ ಸೌಲಭ್ಯಗಳನ್ನು ನಗರಸಭೆಯಿಂದಲೇ ಕಲ್ಪಿಸಲಾಗುವುದು ಎಂದರು
ಜಾಗ ಭೂಸ್ವಾಧೀನಪಡಿಸಿಕೊಳ್ಳಲು ಸದ್ಯದಲ್ಲಿಯೇ ಉಪವಿಭಾಗಾಧಿಕಾರಿ, ತಹಸೀಲ್ದಾರ್, ಇಒ, ಪೌರಾಯುಕ್ತ, ಪಿಡಿಒಗಳನ್ನು ಒಳಗೊಂಡ ಸಮಾಲೋಚನಾ ಸಭೆ ನಡೆಸಲಾಗುವುದು. ಅಗತ್ಯವಿದ್ದಷ್ಟು ಭೂಮಿ ಸಿಗದಿದ್ದರೆ ಗ್ರೂಪ್ ಮನೆಗಳನ್ನು ನಿರ್ಮಿಸಿ ಹಂಚಿಕೆ ಮಾಡುವ ಉದ್ದೇಶವಿದೆ. ನಗರ ವ್ಯಾಪ್ತಿಯಲ್ಲಿ ನಿವೇಶನ ಹಗರಣ, ಸರ್ಕಾರಿ ಭೂಮಿ ಒತ್ತುವರಿ ಪ್ರಕರಣ ಚರ್ಚೆ ನಡೆಯುತ್ತಿದೆ. ಲೋಕಾಯುಕ್ತಕ್ಕೂ ದೂರು ಸಲ್ಲಿಕೆಯಾಗಿದೆ. ತಪ್ಪಿತಸ್ಥರು ಯಾರೇ ಆಗಿದ್ದರೂ ಕ್ರಮ ಖಚಿತ ಎಂದು ಹೇಳಿದರು.
ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ಪೌರಾಯುಕ್ತ ಎಚ್.ಕೆ.ನಾಗಪ್ಪ, ತಹಸೀಲ್ದಾರ್ ಚಂದ್ರಶೇಖರ ನಾಯ್ಕ್, ನಗರಸಭೆ ವ್ಯವಸ್ಥಾಪಕ ಬಾಲಚಂದ್ರ, ಆಶ್ರಯ ಸಮಿತಿ ಸದಸ್ಯರಾದ ಮಕ್ಬೂಲ್ ಅಹ್ಮದ್, ಪರಿಮಳಾ, ಆರ್ಥರ್ ಗೋಮ್ಸ್, ಸೋಮು ಇತರರಿದ್ದರು.