ಲಕ್ಷ್ಮಿನಾರಾಯಣ ನಾಗವಾರ ನಿಧನ: ಸಂತಾಪ ಸೂಚಿಸಿದ CM ಸಿದ್ದರಾಮಯ್ಯ

dk (79)
Published on

ಬೆಂಗಳೂರು: ಕರ್ನಾಟಕ ದಲಿತ ಚಳುವಳಿಯ ಹಿರಿಯ ಮುಖಂಡ, ಹೋರಾಟಗಾರ ಲಕ್ಷ್ಮಿನಾರಾಯಣ ನಾಗವಾರ ಮಂಗಳವಾರ(ಡಿ.31) ನಿಧನರಾಗಿದ್ದಾರೆ.

ನಾಗವಾರ ಅವರಿಗೆ 58 ವರ್ಷ ವಯಸ್ಸಾಗಿತ್ತು. ಪತ್ನಿ, ಇಬ್ಬರು ಪುತ್ರಿಯರು ಸೇರಿದಂತೆ ಬಂಧು-ಮಿತ್ರರು ಹಾಗೂ ಸಂಘಟನೆಯ ಅಪಾರ ಸಂಖ್ಯೆ ಒಡನಾಡಿಗಳನ್ನು ಅಗಲಿದ್ದಾರೆ. ಬೆಂಗಳೂರು ನಗರದ ನಾಗವಾರ ಮೂಲದ ಲಕ್ಷ್ಮಿ ನಾರಾಯಣ ಅವರು, ವಿದ್ಯಾರ್ಥಿ ದೆಸೆಯಲ್ಲಿ ದಲಿತ ಚಳುವಳಿಯಲ್ಲಿ ಗುರುತಿಸಿಕೊಂಡಿದ್ದರು.

ಹೋರಾಟಗಾರ ಲಕ್ಷ್ಮಿನಾರಾಯಣ ನಾಗವಾರ ಅವರ ನಿಧನದಿಂದ ದುಃಖಿತನಾಗಿದ್ದೇನೆ ಎಂದು ಸಿಎಂ(CM) ಸಿದ್ದರಾಮಯ್ಯ ತಮ್ಮ ಎಕ್ಸ್​ ಖಾತೆಯಲ್ಲಿ ಸಂತಾಪ ಸೂಚಿಸಿದ್ದಾರೆ.

ದಲಿತ ಸಮುದಾಯವನ್ನೇ ತನ್ನ ಕುಟುಂಬವನ್ನಾಗಿಸಿಕೊಂಡಿದ್ದ ಲಕ್ಷ್ಮಿನಾರಾಯಣ ನಾಗವಾರ ಅವರು ಸಂಘಟನೆ ಮತ್ತು ಹೋರಾಟದ ಮೂಲಕ ದನಿ ಇಲ್ಲದ ದಮನಿತ ಸಮುದಾಯಕ್ಕೆ ದನಿಯಾಗಿದ್ದವರು. ರಾಜ್ಯದ ಯಾವ ಮೂಲೆಯಲ್ಲಿಯೂ ದಲಿತರ ಮೇಲೆ ಅನ್ಯಾಯ-ದೌರ್ಜನ್ಯ ನಡೆದರೂ ಅಲ್ಲಿಗೆ ಧಾವಿಸಿ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದ ಲಕ್ಷ್ಮಿನಾರಾಯಣ ನಾಗವಾರ ಅವರು, ಇಡೀ ರಾಜ್ಯ ಸುತ್ತಾಡಿ ದಲಿತ‌ ಸಂಘರ್ಷ ಸಮಿತಿಯನ್ನು ಕಟ್ಟಿ ಬೆಳೆಸಿದವರು‌ ಎಂದಿ ಸಿಎಂ ಹೇಳಿದ್ದಾರೆ.

ಹೆಚ್ಚು ಕಡಿಮೆ ಮೂರು ದಶಕಗಳಿಂದ ನನ್ನ ಜೊತೆ ಒಡನಾಟ ಹೊಂದಿದ್ದ ಲಕ್ಷ್ಮಿನಾರಾಯಣ ನಾಗವಾರರ ನಿಧನದಿಂದ ನಾನೂ ಒಬ್ಬ ಆತ್ಮೀಯ ಸಂಗಾತಿಯನ್ನು ಕಳೆದುಕೊಂಡಿದ್ದೇನೆ. ಅವರ ಕುಟುಂಬ ವರ್ಗ ಮತ್ತು ಅಭಿಮಾನಿಗಳ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದಿದ್ದಾರೆ.

ಕಳೆದ 2 ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ನಾಗವಾರ ಆರೋಗ್ಯ ಕ್ಷೀಣಿಸುತ್ತಲೇ ಇತ್ತು. ಬೆಂಗಳೂರಿನ ಕನಕ ನಗರದಲ್ಲಿ ವಾಸವಾಗಿದ್ದ ಲಕ್ಷ್ಮಿ ನಾರಾಯಣ ಅವರಿಗೆ ಮಂಗಳವಾರ ಬೆಳಗ್ಗೆ ಉಸಿರಾಟದ ಸಮಸ್ಯೆ ಉಂಟಾಗಿತ್ತು. ಕೂಡಲೇ ಅವರನ್ನು ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅಸುನೀಗಿದ್ದಾರೆಂದು ಕುಟುಂಬಸ್ಥರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net