ಮಾಜಿ ಪ್ರಿಯಕರನನ್ನು ಮತ್ತೆ ತನ್ನ ಬಲೆಗೆ ಬೀಳಿಸಿಕೊಳ್ಳಲು ಹೋಗಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ಯುವತಿ

Vasikarana
Published on

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಯುವ ಸಮೂಹವು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವ ಕೆಲವು ವಿಚಾರಗಳಿಂದ ಹೆಚ್ಚು ಪ್ರಭಾವಿತರಾಗುತ್ತಿದ್ದು, ಇದರಿಂದ ಅವರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿರುವುದನ್ನು ನಾವು ನೋಡಿದ್ದೇವೆ ಹಾಗೂ ಕೇಳಿದ್ದೇವೆ. ಇದೀಗ ಅದೇ ರೀತಿಯ ಘಟನೆಯೊಂದು ನಡೆದಿದ್ದು, ಯುವತಿಯೊಬ್ಬಳು ತನ್ನ ಮಾಜಿ ಪ್ರಿಯಕರನನ್ನು ವಶೀಕರಣ ಮಾಡಿಕೊಳ್ಳಲು ಹೋಗಿ 8.2 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ.

ಬೆಂಗಳೂರು ನಗರದ ಜಾಲಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಆನ್​ಲೈನ್​ ಮೂಲಕ ಸಂಪರ್ಕಿಸಿದ ಜ್ಯೋತಿಷಿ ಈಕೆಗೆ ಮೋಸ ಮಾಡಿರುವುದಾಗಿ ತಿಳಿದು ಬಂದಿದೆ. ಪ್ರಕರಣ ಸಂಬಂಧ ಜಾಲಹಳ್ಳಿ ಪೊಲೀಸ್​ ಠಾಣೆಯಲ್ಲಿ FIR ದಾಖಲಾಗಿದ್ದು, ಪೊಲೀಸರು ಜ್ಯೋತಿಷಿಗಾಗಿ ಬಲೆ ಬೀಸಿದ್ದಾರೆ.

ಪ್ರಕರಣದ ಹಿನ್ನಲೆ

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಮೋಸ ಹೋದ ಯುವತಿ ಓರ್ವ ಯುವಕನನ್ನು ಪ್ರೀತಿ ಮಾಡುತ್ತಿದ್ದಳು. ಕಾರಣಾಂತರಗಳಿಂದ ಇಬ್ಬರ ನಡುವೆ ವೈಮನಸ್ಸು ಮೂಡಿ ದೂರ ಆಗಿದ್ದರು. ಬ್ರೇಕ್‌ ಅಪ್‌ನಿಂದ ನೊಂದಿದ್ದ ಯುವತಿ ತಾನು ಪ್ರೀತಿ ಮಾಡುತ್ತಿದ್ದ ಮಾಜಿ ಪ್ರಿಯಕರನನ್ನು ಮಾಟ ಮಂತ್ರ ಅಥವಾ ವಶೀಕರಣದ ಮೂಲಕ ಮತ್ತೆ ತನ್ನ ಬಳಿ ಸೆಳೆಯಲು ತನ್ನ ಸ್ನೇಹಿತನ ಸಹಾಯದಿಂದ ಆನ್‌ಲೈನ್ ಮೂಲಕ ವಶೀಕರಣ ಮಾಡುವ ಜ್ಯೋತಿಷಿಯೊಬ್ಬರನ್ನು ಸಂಪರ್ಕ ಮಾಡಿದ್ದಳು.

ಡಿಸೆಂಬರ್ 22 ರಂದು ವಶೀಕರಣದ ಮೊದಲ ಹಂತವಾಗಿ ಮಾಜಿ ಪ್ರಿಯಕರ ಹಾಗೂ ಆತನ ಪೋಷಕರ ಮೇಲೆ ಮಾಟಮಂತ್ರದ ಆಚರಣೆಗಳನ್ನು ಮಾಡಲು 2.4 ಲಕ್ಷಗಳನ್ನು ಆನ್ಲೈನ್​​ ಮೂಲಕ ಪಾವತಿಸಿದ್ದಳು. ಆದಾಗ್ಯೂ, ಹಣಕಾಸಿನ ಬೇಡಿಕೆಗಳು ನಿಲ್ಲಲಿಲ್ಲ, ಕೆಲವು ದಿನಗಳ ನಂತರ, ಹೆಚ್ಚುವರಿ ರೂ. 1.7 ಲಕ್ಷ ನೀಡಲು ಬೇಡಿಕೆ ಇಟ್ಟಿದ್ದ ಜ್ಯೋತಿಷಿ, ಇದಲ್ಲದೇ ಹಣ ನೀಡದಿದ್ದರೆ ಮಾಜಿ ಪ್ರಿಯಕರನಿಗೆ ಈ ವಿಷಯ ತಿಳಿಸುವುದಾಗಿ ಬೆದರಿಕೆ ಹಾಕಿದ್ದ, ಯುವತಿ ಹೆದರಿ ಒತ್ತಡಕ್ಕೆ ಮಣಿದು ಜನವರಿ 10ರಂದು 4.1 ಲಕ್ಷ ರೂ. ಪಾವತಿಸಿದ್ದಳು.

ಆರ್ಥಿಕ ನಷ್ಟದಿಂದಾಗಿ ಬೇಸತ್ತಿದ್ದ ಯುವತಿ ಕೊನೆಗೆ ಪೋಷಕರಿಗೆ ನಡೆದ ವಿಚಾರವನ್ನ ತಿಳಿಸಿದ್ದು, ಜಾಲಹಳ್ಳಿ ಪೊಲೀಸ್​​​ ಠಾಣೆಯಲ್ಲಿ ಆರೋಪಿ ಜ್ಯೋತಿಷಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. FIR ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net