ಮಹಾತ್ಮ ಗಾಂಧೀಜಿ ಪುಣ್ಯಸ್ಮರಣೆ; ರಾಜ್ಯ ಸರ್ಕಾರದ ವತಿಯಿಂದ ಪ್ರಬಂಧ ಸ್ಫರ್ಧೆ ಆಯೋಜಿಸಲು ಸಿಎಂ ಸೂಚನೆ

CM Siddaramaiah
Published on

ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸ್ಮರಣೋತ್ಸವ ಅಂಗವಾಗಿ ರಾಜ್ಯ ಸರ್ಕಾರದ ವತಿಯಿಂದ ವಿದ್ಯಾರ್ಥಿಗಳಿಗೆ ವಿಶೇಷ ಪ್ರಬಂಧ ಸ್ಫರ್ಧೆಯನ್ನು ಆಯೋಜಿಸಲಾಗಿದೆ. 21ನೇ ಶತಮಾನದ ಆತಂಕಗಳು ಮತ್ತು ಗಾಂಧೀಜಿಯವರ ವಿಚಾರಗಳು ಪ್ರತಿಪಾದಿಸುವ ಪರಿಹಾರಗಳು ಎಂಬ ವಿಷಯದ ಕುರಿತು ಪ್ರಬಂಧ ಸ್ಫರ್ಧೆಯನ್ನು ಆಯೋಜಿಸಲಾಗಿದೆ.

ಈ ಕುರಿತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ದೇಶದ ವೈವಿಧ್ಯತೆ ಹಾಗೂ ಎಲ್ಲರನ್ನೂ ಒಳಗೊಂಡು ಬಾಳುವ ಅನಿವಾರ್ಯತೆಯನ್ನು ಗಾಂಧೀಜಿ ಪ್ರತಿಪಾದಿಸಿದ್ದರು ಎಂದು ಹೇಳಿದ್ದಾರೆ.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹತ್ಯೆಯಾಗಿ ಏಳೂವರೆ ದಶಕಗಳು ಮುಗಿದವು. ಗಾಂಧೀಜಿಯವರು ತಮ್ಮ ಜೀವಿತಾವಧಿಯುದ್ದಕ್ಕೂ ಶಾಂತಿ, ಅಹಿಂಸೆ, ಸತ್ಯ, ವಿಕೇಂದ್ರೀಕರಣ, ಸಾಮಾಜಿಕ ನ್ಯಾಯ ಮುಂತಾದ ಜೀವಪರ ನಿಲುವುಗಳನ್ನು ಆಚರಿಸಿ ಪ್ರತಿಪಾದಿಸಿದ್ದರು. ಅದೇ ಸಂದರ್ಭದಲ್ಲಿ ದೇಶದ ವೈವಿಧ್ಯತೆ ಹಾಗೂ ಎಲ್ಲರನ್ನೂ ಒಳಗೊಂಡು ಬಾಳುವ ಅನಿವಾರ್ಯತೆಯನ್ನು ಪ್ರತಿಪಾದಿಸಿದ್ದರು. ಇಂಥ ಮಹಾನ್ ವ್ಯಕ್ತಿಯನ್ನು ಕೆಲವು ದುರುಳರು ಪಿತೂರಿ ಮಾಡಿ ಹತ್ಯೆ ಮಾಡಿದರು.

ಇದನ್ನೂ ಓದಿ: ಎರಡನೇ ಆವೃತ್ತಿಯ ವುಮೆನ್ಸ್​ ಪ್ರೀಮಿಯರ್​ ಲೀಗ್ ವೇಳಾಪಟ್ಟಿ ಪ್ರಕಟ​; ಬೆಂಗಳೂರಿಗೂ ಈ ಬಾರಿ ಆತಿಥ್ಯ
ಗಾಂಧೀಜಿಯವರ ಹತ್ಯೆಯ ನಂತರವೂ ದೇಶ ನಿರಂತರವಾಗಿ ಅವರ ಆದರ್ಶಗಳನ್ನು ಸಾಧ್ಯವಾದ ಮಟ್ಟಿಗೆ ಅನುಷ್ಠಾನ ಮಾಡಿಕೊಂಡೇ ಬಂದಿದೆ. ಆದರೆ ಇತ್ತೀಚಿಗೆ ದ್ವೇಷ-ಹಿಂಸೆಯನ್ನು ಪ್ರತಿಪಾದಿಸುವ, ವಿಕೇಂದ್ರೀಕರಣವನ್ನು ದಮನಿಸಿ ಕೇಂದ್ರೀಕರಣಕ್ಕೆ ಒತ್ತು ನೀಡುವ, ದೀನ-ದಲಿತ, ಮಹಿಳೆ, ಆದಿವಾಸಿ, ರೈತ, ಕಾರ್ಮಿಕ ಮತ್ತು ಯುವಜನರ ಹಕ್ಕುಗಳನ್ನು ಕಿತ್ತುಕೊಳ್ಳುವ ಪ್ರವೃತ್ತಿಯುಳ್ಳ ಶಕ್ತಿಗಳು ಕ್ರಿಯಾಶೀಲವಾಗುತ್ತಿವೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿಯವರ ವಿರುದ್ಧ, ಸ್ವಾತಂತ್ರ್ಯ ಹೋರಾಟದಲ್ಲಿ ಎಂದೂ ಭಾಗವಹಿಸದ ಶಕ್ತಿಗಳು ಪ್ರವರ್ಧಮಾನಕ್ಕೆ ಬರಲು ಪ್ರಯತ್ನಿಸುತ್ತಿವೆ.

ಇಂದು ಜಾಗತಿಕ ಪರಿಸರದ ಬಿಕ್ಕಟ್ಟುಗಳು, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಹಿಂಸಾ ವಿನೋದ ಮುಂತಾದವುಗಳಿಂದಾಗಿ ಮನುಷ್ಯರು ಈ ಭೂಮಿಯ ಮೇಲಿಂದಲೆ ಅಳಿಸಿ ಹೋಗುವ ದುಸ್ಥಿತಿಗೆ ತಲುಪಿಯಾಗಿದೆ ಎಂದು ಸ್ಟೀಫನ್ ಹಾಕಿಂಗ್ ಮುಂತಾದ ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ದೊಡ್ಡ ಭಾಷೆಗಳು ಸಣ್ಣ ಸಣ್ಣ ಭಾಷೆಗಳನ್ನು ನುಂಗಿ ಹಾಕುತ್ತಿವೆ. ಯಾವುದೇ ಸಮಾಜ ಅಥವಾ ಸಮುದಾಯಗಳು ತಮ್ಮ ಭಾಷೆಗಳನ್ನು ಕಳೆದುಕೊಳ್ಳುವುದೆಂದರೆ ತಮ್ಮ ಅಸ್ತಿತ್ವವನ್ನೆ ಕಳೆದುಕೊಳ್ಳುವುದು ಎಂದರ್ಥ ಎಂಬುದು ಈಗಾಗಲೇ ಸಾಬೀತಾದ ವಿಚಾರವಾಗಿದೆ.

21ನೇ ಶತಮಾನದ ಆತಂಕಗಳು ಮತ್ತು ಗಾಂಧೀಜಿಯವರ ವಿಚಾರಗಳು ಪ್ರತಿಪಾದಿಸುವ ಪರಿಹಾರಗಳು ಎಂಬ ವಿಷಯದ ಕುರಿತಾದ ಪ್ರತಿ ಶಾಲೆಗಳ 6ನೇ ತರಗತಿ ನಂತರದ ವಿದ್ಯಾರ್ಥಿಗಳಿಗೆ ( ಸರ್ಕಾರಿ, ಖಾಸಗಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳು ಸೇರಿದಂತೆ ಕಾಲೇಜು, ವಿಶ್ವವಿದ್ಯಾಲಯಗಳ ಪದವಿ, ಸ್ನಾತಕೋತ್ತರ ಪದವಿ ಹಾಗೂ ಸಂಶೋಧನಾ ವಿದ್ಯಾರ್ಥಿಗಳ ವರೆಗೆ, ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳನ್ನು ಹೊರತುಪಡಿಸಿ) ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸುವುದರಿಂದ ಗಾಂಧೀಜಿಯವರನ್ನು ಅರಿತುಕೊಳ್ಳಲು ಇನ್ನೂ ಹೆಚ್ಚಿನ ಅವಕಾಶ ನೀಡಿದಂತಾಗುತ್ತದೆ, ಹಾಗಾಗಿ ಈ ತಿಂಗಳ ಅಂತ್ಯದೊಳಗೆ ಸ್ಪರ್ಧೆಗಳನ್ನು ನಡೆಸಲು ಕ್ರಮ ವಹಿಸಬೇಕು ಎಂದು ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರಿಗೆ ಸೂಚಿಸಿದ್ದೇನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net