ನಮ್ಮಲ್ಲಿ ಲ್ಯಾಬ್​ ಇಲ್ಲದಿರುವುದೇ ಪೂರೈಕೆದಾರರು ಲಾಭ ಪಡೆಯಲು ಕಾರಣವಾಯ್ತು: TTD

TTD Laddu
Published on

ತಿರುಪತಿ: ತಿರುಪತಿಗೆ ಭೇಟಿ ನೀಡುತ್ತಿದ್ದ ಭಕ್ತರಿಗೆ ನೀಡಲಾಗುತ್ತಿದ್ದ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಮೀನಿನ ಎಣ್ಣೆ ಬಳಸಲಾಗುತ್ತಿತ್ತು ಎಂಬ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆರೋಪ ವಿಶ್ವವ್ಯಾಪಿ ಸದ್ದು ಮಾಡುತ್ತಿದ್ದು, ಪ್ರಕರಣ ಇದೀಗ ಕೋರ್ಟ್​ ಮೆಟ್ಟಿಲೇರಿದ್ದು, ಕೇಂದ್ರ ಸರ್ಕಾರ ಕೂಡ ವರದಿ ಕೇಳಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುಮಲ ತಿರುಪತಿ ದೇವಸ್ಥಾನದ (TTD) ಕಾರ್ಯನಿರ್ವಾಹಕ ಅಧಿಕಾರಿ ಶ್ಯಾಮಲಾ ರಾವ್ ಮಾತನಾಡಿದ್ದು, ನಮ್ಮಲ್ಲಿ ಕಲಬೆರಕೆ ಪರೀಕ್ಷಾ ಸೌಲಭ್ಯಗಳ ಕೊರತೆಯಿಂದಾಗಿ ದೇವಸ್ಥಾನಕ್ಕೆ ತುಪ್ಪ ಪೂರೈಕೆ ಮಾಡುತ್ತಿದ್ದವರು ಪರಿಸ್ಥಿತಿ ಲಾಭ ಪಡೆದಿದ್ದಾರೆ. ಆಯ್ದ ತುಪ್ಪದ ಮಾದರಿಯಲ್ಲಿ ಮೀನಿನ ಎಣ್ಣೆ, ಗೋಮಾಂಸದ ಚರ್ಬಿ, ಹಂದಿಯ ಕೊಬ್ಬಿನ ಅಂಶಗಳು ಇರುವುದು ಬಹಿರಂಗಗೊಂಡಿದೆ.

ನಮ್ಮಲ್ಲಿ ಲ್ಯಾಬ್ ಇಲ್ಲದಿರುವುದರಿಂದ ತುಪ್ಪದ ಗುಣಮಟ್ಟವನ್ನು ಪರೀಕ್ಷಿಸಲು ಸಾಧ್ಯವಾಗಿಲ್ಲ. ಹೊರಗಿನ ಲ್ಯಾಬ್‌ಗಳಿಗೆ ಕಳುಹಿಸುವುದರಿಂದ ಹೆಚ್ಚು ವೆಚ್ಚವಾಗುತ್ತಿತ್ತು. ಹಾಗಾಗಿ ತುಪ್ಪ ಪೂರೈಕೆದಾರರು ಪರಿಸ್ಥಿತಿಯ ಲಾಭ ಪಡೆದಿದ್ದಾರೆ ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಈ ಹಿಂದೆ ಕೂಡ ಚಂದ್ರಬಾಬು ನಾಯ್ಡು ಲಡ್ಡುವಿನ ಗುಣಮಟ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಅದರಲ್ಲಿ ಪ್ರಾಣಿ ಕೊಬ್ಬಿನ ಬಳಕೆ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಅದೀಗ ನಿಜವಾಗಿದೆ.

ನಾಲ್ಕು ಟ್ರಕ್ ಲೋಡ್ ತುಪ್ಪವು ಉತ್ತಮ ಗುಣಮಟ್ಟದ್ದಾಗಿಲ್ಲ ಎಂದು ಕಂಡುಬಂದ ನಂತರ ಅವುದಗಳ ಮಾದರಿಯನ್ನು ಲ್ಯಾಬ್​ಗೆ ಕಳುಹಿಸಲಾಗಿತ್ತು. ಲ್ಯಾಬ್​ಗೆ ಕಳುಹಿಸಲಾಗಿದ್ದ ತುಪ್ಪದ ಮಾದರಿಯಲ್ಲಿ ಹಂದಿಯ ಕೊಬ್ಬಿನ ಅಂಶ ಇರುವುದು ಪತ್ತೆಯಾಗಿತ್ತು. ಕಳಪೆ ಗುಣಮಟ್ಟದ ತುಪ್ಪವನ್ನು ನೀಡಿರುವ ಪೂರೈಕೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ತಿರುಮಲ ತಿರುಪತಿ ದೇವಸ್ಥಾನದ (TTD) ಕಾರ್ಯನಿರ್ವಾಹಕ ಅಧಿಕಾರಿ ಶ್ಯಾಮಲಾ ರಾವ್ ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net