

ಲಖನೌ: ಗಂಡು ಮಗುವಿನ ನಿರೀಕ್ಷೆಯಲ್ಲಿದ್ದ ವ್ಯಕ್ತಿಯೋರ್ವ ನಾಲ್ಕನೇ ಮಗುವುದ ಹೆಣ್ಣಾಗಿದ್ದಕ್ಕೆ ಕುಪಿತಗೊಂಡು ನವಜಾತ ಶಿಶುವನ್ನು ನೆಲಕ್ಕೆಸೆದು ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದ ಇಟಾವಾ ಜಿಲ್ಲೆಯಲ್ಲಿ ನಡೆದಿದೆ. ಘಟನೆ ಸಂಬಂಧ ಪೊಲೀಸರು ಆರೋಪಿ ಬಬ್ಲು ದಿವಾಕರ್ (30)ನನ್ನು ಬಂಧಿಸಿದ್ದು, ಕುಡಿದ ಮತ್ತಿನಲ್ಲಿ ಈತ ಕೃತ್ಯ ಎಸಗಿರುವುದಾಗಿ ತಿಳಿದು ಬಂದಿದೆ.
ಈ ಕುರಿತು ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ದಿವಾಕರ್ ಅವರ ಮೊದಲ ಪತ್ನಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಅವರು ಮೃತಪಟ್ಟಿದ್ದಾರೆ. ಬಳಿಕ ಎರಡನೇ ಮದುವೆಯಾಗಿದ್ದ. ಆದರೆ, ಎರಡನೇ ಹೆಂಡತಿಗೂ ಮೊದಲು ಹೆಣ್ಣು ಮಗು ಜನಿಸಿತ್ತು. ಆಕೆಗೆ ಎರಡನೇ ಬಾರಿ ಗಂಡು ಮಗು ಜನಿಸಬಹುದು ಎಂಬ ನಿರೀಕ್ಷೆಯಲ್ಲಿದ್ದ ದಿವಾಕರ್, ಮತ್ತೆ ಹೆಣ್ಣು ಮಗು ಜನಿಸಿದ್ದಕ್ಕಾಗಿ ತೀವ್ರ ಅಸಮಾಧಾನಗೊಂಡಿದ್ದ. ಈ ಕಾರಣಕ್ಕಾಗಿ ನವಜಾತ ಶಿಶುವನ್ನು ಕೊಲೆ ಮಾಡಿದ್ದಾನೆ.
ಇದಲ್ಲದೆ ಆರೋಪಿಯು ಪ್ರತಿನಿತ್ಯ ಗಂಡು ಮಗು ಬೇಕು ಎಂದು ಒತ್ತಾಯಿಸಿ ಕುಡಿದು ಬಂದು ಪತ್ನಿಯೊಡನೆ ಜಗಳವಾಡುತ್ತಿದ್ದ. ಜಗಳವಾಡುವ ವೇಳೆ ಆರೋಪಿಯೂ ಹೆಂಡತಿಯ ಮಡಿಲಿನಲ್ಲಿ ಮಲಗಿದ್ದ ಮಗುವನ್ನು ತೆಗೆದು ನೆಲಕ್ಕೆ ಎಸೆದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ನವಜಾತ ಶಿಶುವನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲಾಗಲ್ಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಆರೋಪಿಯ ಪತ್ನಿ ನೀಡಿದ ದೂರಿನ ಮೇರೆಗೆ ದಿವಾಕರ್ನನ್ನು ವಶಕ್ಕೆ ಪಡೆಯಲಾಗಿದ್ದು, ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.