

ಸೊರಬ: ಭೂಮಿ ಮೇಲಿನ ಸರ್ವ ಜೀವಿಗಳಿಗೂ ಅವಶ್ಯವಾಗಿ ಬೇಕಿರುವುದು ಪರಿಶುದ್ಧ ಗಾಳಿ. ಇದರಲ್ಲಿ ಅರಣ್ಯಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಎಂದು ಶ್ರೀ ನಾರಾಯಣಗುರು ವಿಚಾರ ವೇದಿಕೆ ಜಿಲ್ಲಾಧ್ಯಕ್ಷ ಪ್ರವೀಣ್ ಹೇಳಿದರು.
ತಾಲೂಕಿನ ಹಿರೇಇಡಗೋಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸ್ತುತ ಅರಣ್ಯ ಉಳಿಸುವುದಕ್ಕಿಂತ ಹಾಳು ಮಾಡುವುದೇ ಹೆಚ್ಚಾಗಿದೆ. ಇದರಿಂದ ಶುದ್ಧ ಗಾಳಿಯ ಕೊರತೆ ಉಂಟಾಗಿದೆ ಎಂದರು.
ಈ ಹಿಂದೆ ಒಂದು ಮರ ಕಡಿದರೆ ಹತ್ತು ಸಸಿ ನೆಡಬೇಕೆಂದು ಹೇಳುತ್ತಿದ್ದರು. ಹಾಗೆಯೇ ನೆಡುತ್ತಿದ್ದರು. ಆದರೆ ಈಗ ಪರಿಸರದ ಅರಿವು ಕಡಿಮೆಯಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಮುಂದಿನ ಪೀಳಿಗೆಯ ರೂವಾರಿಗಳಾದ ವಿದ್ಯಾರ್ಥಿಗಳು ಕಾಡು, ಪರಿಸರದ ಅರಿವು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆನವಟ್ಟಿ ಪಿಎಸ್‌ಐ ವಿಠ್ಠಲ್ ಅಗಾಶಿ, ಮಕ್ಕಳು ವಿದ್ಯಾಭ್ಯಾಸದ ಜತೆಗೆ ಕಾನೂನುಗಳ ಪ್ರಾಥಮಿಕ ಜ್ಞಾನ ಪಡೆಯಬೇಕು. ಶಾಲೆ ಅಥವಾ ಸುತ್ತಮುತ್ತ ಯಾವುದೇ ಅಹಿತಕರ ಘಟನೆಗಳು ಕಂಡುಬಂದಲ್ಲಿ ಕೂಡಲೇ ಸಂಬಂಧಿಸಿದ ಇಲಾಖೆಯವರಿಗೆ ದೂರು ನೀಡಬೇಕು. ಮೊಬೈಲ್ ಫೋನ್ ಬಳಕೆ ಕಡಿಮೆ ಮಾಡಬೇಕು, ಅಪ್ರಾಪ್ತ ವಯಸ್ಸಿನಲ್ಲಿ ವಾಹನ ಚಲಾಯಿಸಬಾರದು ಎಂದು ಸಲಹೆ ನೀಡಿದರು.
ಅರಣ್ಯಾಧಿಕಾರಿ ನದಾಫ್ ಮಾತನಾಡಿ, ಕೇವಲ ಶಾಲೆಯಲ್ಲಿ ವನಮಹೋತ್ಸವ ಆಚರಣೆಗೆ ಸೀಮಿತ ಆಗಬಾರದು. ಅರಣ್ಯದ ಬಗ್ಗೆ ಕಾಳಜಿ, ಗಿಡ ಮರಗಳನ್ನು ನೆಟ್ಟು ಬೆಳೆಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಕಾಡು ಬೆಳೆದರೆ ನಾಡು ಉಳಿಯಲು ಸಾಧ್ಯ ಎಂದರು.
ಗ್ರಾಮದ ಸರ್ಕಾರಿ ಶಾಲೆಯಲ್ಲಿ ಓದಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಗ್ರಾಮ ಸಲಹಾ ಸಮಿತಿ ಅಧ್ಯಕ್ಷ ಶಿವಪ್ಪ, ಸಿಆರ್‌ಪಿ ರುದ್ರೇಶ್, ಅರುಣ್, ಮೆಹಬೂಬ್ ಅಲಿ, ಶಿಕ್ಷಕರಾದ ಹನುಮಂತಪ್ಪ, ರವಿಕುಮಾರ್, ನವೀನ್‌ಕುಮಾರ್, ಚಂದ್ರಶೇಖರ್, ಪ್ರದೀಪ್, ರಮೇಶ್ ಗೌಳಿ ಇತರರಿದ್ದರು.