

ವಾಷಿಂಗ್ಟನ್: ಕಳೆದ ವಾರ ಬಹಿರಂಗಪಡಿಸಿದ ಏಲಿಯನ್ಗಳದ್ದು ಎನ್ನಲಾದ ಎರಡು ಮಾನವೇತರ ಶವಗಳ ಮೇಲೆ ಮೆಕ್ಸಿಕೋ ನಗರದ ವೈದ್ಯರು ಸಾಕಷ್ಟು ಪ್ರಯೋಗಾಲಯ ಅಧ್ಯಯನಗಳನ್ನು ನಡೆಸಿದ್ದು, ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ.
ಏಲಿಯನ್ ಇರುವಿಕೆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ, ಅವುಗಳ ಅಸ್ತಿತ್ವದ ಬಗ್ಗೆ ಇದುವರೆಗೂ ಯಾವುದೇ ಸ್ಪಷ್ಟತೆ ದೊರೆತಿಲ್ಲ. ಏಲಿಯನ್ಗಳು ಕಾಣಿಸಿಕೊಳ್ಳುವ ಬಗ್ಗೆ ಆಗಾಗ ಸುದ್ದಿಯಾದರೂ ಕೂಡ ಜನರಲ್ಲಿ ಅವುಗಳ ಅಸ್ತಿತ್ವದ ಪ್ರಶ್ನೆ ಆಗೇ ಉಳಿದಿದೆ. ಸಾಕಷ್ಟು ಸಂಶೋಧನೆಗಳು, ಸಿದ್ಧಾಂತಗಳು ಹೊರಬಂದರೂ ಕೂಡ ಏಲಿಯನ್ಗಳ ಸಂಗತಿ ನಿಗೂಢವಾಗಿಯೇ ನಮ್ಮ ನಡುವೆ ಉಳಿದಿದೆ. ಆದರೆ, ಇದೀಗ ಏಲಿಯನ್ ಶವಗಳ ಮೇಲೆ ನಡೆದ ಮರಣೋತ್ತರ ಪರೀಕ್ಷೆಯಲ್ಲಿ ಹುಬ್ಬೇರಿಸುವ ಸಂಗತಿ ಹೊರಬಿದ್ದಿದೆ.
ಅಮೆರಿಕದ ಮೆಕ್ಸಿಕೋ ಕಾಂಗ್ರೆಸ್ನಲ್ಲಿ ಕಳೆದ ಮಂಗಳವಾರ (ಸೆ.12) ವಿಚಿತ್ರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆನ್‌ಲೈನ್‌ನಲ್ಲಿ ನೇರ ಪ್ರಸಾರದಲ್ಲಿ ಗುರುತಿಸಲಾಗದ ಅಸಂಗತ ವಿದ್ಯಮಾನಗಳ ಕುರಿತು ಕಾಂಗ್ರೆಸ್ ವಿಚಾರಣೆಯ ಸಮಯದಲ್ಲಿ ಏಲಿಯನ್ಗಳದ್ದು ಎನ್ನಲಾದ ಎರಡು ಶವಗಳನ್ನು ಪ್ರದರ್ಶನ ಮಾಡಲಾಯಿತು. ಇದು ಬಹಳ ಚರ್ಚೆಗೆ ದಾರಿ ಮಾಡಿ ಕೊಟ್ಟಿತ್ತು. ಇದೀಗ ಶವಗಳ ಮೇಲೆ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಅಮೆರಿಕ ನೌಕಾಪಡೆಯ ಫೋರೆನ್ಸಿಕ್ ವಿಧಿವಿಜ್ಞಾನ ವೈದ್ಯ ಜೋಸ್ ಡಿ ಜೀಸಸ್ ಜಾಲ್ಸೆ ಬೆನಿಟೆಜ್ ಎಂಬುವರು ಈ ಪರೀಕ್ಷೆಯನ್ನು ನಡೆಸಿದ್ದು, ಆ ಶವಗಳು ಒಂದೇ ಅಸ್ಥಿಪಂಜರಕ್ಕೆ ಸಂಬಂಧಿಸಿದ್ದಾಗಿವೆ ಎಂದು ಹೇಳಿದ್ದಾರೆ. ತಲೆಬುರುಡೆಗಳ ಯಾವುದೇ ಜೋಡಣೆಯಾಗಲಿ, ಕೈಚಳಕವಾಗಲಿ ಅಥವಾ ತಂತ್ರಗಾರಿಕೆ ನಡೆದಿದೆ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಇದು ಅಂತಿಮ ಫಲಿತಾಂಶವಾಗಿದ್ದು, ಏಲಿಯನ್ಗಳ ಶವಗಳು ಎನ್ನುವ ನಂಬಿಕೆಯನ್ನು ಗಟ್ಟಿಯಾಗಿಸಿದೆ.
ಅಂದಹಾಗೆ ಪಳೆಯುಳಿಕೆಗೊಂಡ ಅವಶೇಷಗಳನ್ನು ಎರಡು ಮರದ ಪೆಟ್ಟಿಗೆಯಲ್ಲಿ ಇಟ್ಟು ಪತ್ರಕರ್ತ ಮತ್ತು ಯುಎಫ್ಒಲಜಿಸ್ಟ್ ಜೈಮ್ ಮೌಸ್ಸಾನ್ ಅವರು ಪ್ರದರ್ಶನ ಮಾಡಿದರು. ಈ ಎರಡೂ ಶವಗಳನ್ನು ಪೆರುವಿನ ಕುಸ್ಕೋ ನಗರದಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು. ಮಾನವೇತರ ಅನ್ಯಗ್ರಹ ಜೀವಿಗಳ ಶವಗಳು 1000 ವರ್ಷದಷ್ಟು ಹಳೆಯದ್ದು ಎಂದು ಎನ್ನಲಾಗಿದೆ. ಎತ್ತರದಲ್ಲಿ ಚಿಕ್ಕದಾಗಿವೆ ಮತ್ತು ಸುಣ್ಣದ ಬಣ್ಣದಲ್ಲಿವೆ. ಅವುಗಳಲ್ಲಿ ಪ್ರತಿಯೊಂದೂ ಮೂರು ಬೆರಳುಗಳ ಕೈಗಳು ಮತ್ತು ಕುಗ್ಗಿದ ತಲೆಗಳನ್ನು ಹೊಂದಿವೆ. ಎರಡು ಶವಗಳಲ್ಲಿ ಒಂದರಲ್ಲಿ ಒಳಗೆ ಮೊಟ್ಟೆಗಳಿದ್ದು, ಹೆಣ್ಣು ಎಂದು ವಿವರಿಸಲಾಗಿದೆ,
ಈ ಮಾದರಿಗಳು ನಮ್ಮ ಭೂಮಿಯ ವಿಕಾಸದ ಭಾಗವಲ್ಲ ಮತ್ತು UFO ಅಥವಾ ಹಾರುವ ತಟ್ಟೆಗಳ ಅವಶೇಷಗಳ ನಂತರ ಕಂಡುಬಂದ ಜೀವಿಗಳಲ್ಲ. ಇವು ಡಯಾಟಮ್ [ಪಾಚಿ] ಗಣಿಗಳಲ್ಲಿ ಕಂಡುಬಂದವು. ಆ ನಂತರ ಪಳೆಯುಳಿಕೆಗೊಳಿಸಲಾಯಿತು. ನಮ್ಮ ಜಗತ್ತಿನಲ್ಲಿ ಯಾವುದೇ ಇತರ ಜಾತಿಗಳಿಗೆ ಸಂಬಂಧಿಸದ ಮಾನವರಲ್ಲದ ಮಾದರಿಗಳೊಂದಿಗೆ ನಾವು ವ್ಯವಹರಿಸುತ್ತಿದ್ದೇವೆ ಮತ್ತು ಯಾವುದೇ ವೈಜ್ಞಾನಿಕ ಸಂಸ್ಥೆಗಳ ಪರೀಕ್ಷೆಗೆ ಎಲ್ಲ ಸಾಧ್ಯತೆಗಳು ತೆರೆದಿರುತ್ತವೆ ಎಂದು ಜೈಮ್ ಮೌಸ್ಸಾನ್ ಹೇಳಿದರು.
ಆದಾಗ್ಯೂ, ಅನೇಕ UFO ಮತ್ತು ಫೊರೆನ್ಸಿಕ್ಸ್ ಪರಿಣಿತರು ಈ ಹಕ್ಕುಗಳನ್ನು ಆಧಾರರಹಿತ ಮತ್ತು ವಂಚನೆ ಎಂದು ಟೀಕಿಸಿದ್ದಾರೆ. ಕೆಲವು ವಿದ್ವಾಂಸರು ಮತ್ತು ಪುರಾತತ್ವಶಾಸ್ತ್ರಜ್ಞರು ದೇಹಗಳು ಸರಳವಾಗಿ ರಕ್ಷಿತ ಮಾನವರ ಪ್ರಾಚೀನ ಅವಶೇಷಗಳಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. (ಏಜೆನ್ಸೀಸ್)