

ಸರಗೂರು: ಪಟ್ಟಣದಲ್ಲಿ ಪರವಾನಗಿ ಇಲ್ಲದೆ ನಡೆಸುತ್ತಿದ್ದ ಪ್ರಯೋಗಾಲಯಕ್ಕೆ ಸೋಮವಾರ ದಿಢೀರ್ ಭೇಟಿ ನೀಡಿದ ತಾಲೂಕು ಆರೋಗ್ಯಾಧಿಕಾರಿ ಡಾ.ಟಿ. ರವಿಕುಮಾರ್ ಬೀಗ ಜಡಿದರು.
ರಕ್ತ, ಮೂತ್ರ ಇತ್ಯಾದಿ ಪರೀಕ್ಷೆಯೊಂದಿಗೆ ಸ್ಕ್ಯಾನಿಂಗ್ ಅನ್ನೂ ಮಾಡುತ್ತಿದ್ದ ಲ್ಯಾಬ್‌ನ ದಾಖಲೆಗಳನ್ನು ಡಾ.ರವಿಕುಮಾರ್ ಪರಿಶೀಲಿಸಿದರು. ಕೆಪಿಎಂಇಎ ಪರವಾನಗಿ ಪಡೆಯದೇ ಲ್ಯಾಬ್ ನಡೆಸುತ್ತಿರುವ ಕಾರಣ ಸೀಸ್ ಮಾಡಲಾಯಿತು. ಈ ಸಂದರ್ಭ ಮಾತನಾಡಿದ ಅವರು, ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕಿನಲ್ಲಿ ಖಾಸಗಿ ಕ್ಲಿನಿಕ್ ಹಾಗೂ ಆಸ್ಪತ್ರೆಯವರು ಕೆಪಿಎಂಇಎ ಅಧಿಕೃತ ಪರವಾನಗಿ ಇಲ್ಲದೆ ಲ್ಯಾಬ್ ನಡೆಸಿದರೆ ಕಠಿಣ ಕ್ರಮ ವಹಿಸಲಾಗುವುದು ಎಂದು ಎಚ್ಚರಿಸಿದರು. ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.